ಅಗ್ನಿಶಾಮಕ ಲಾಂಛನದಲ್ಲಿ ಕನ್ನಡ ಬದಲು ಹಿಂದಿ ಹಾಕಿ ಎಡವಟ್ಟು..!

By Kannadaprabha NewsFirst Published Aug 4, 2021, 1:29 PM IST
Highlights

* ಕನ್ನಡಿಗರ ತೀವ್ರ ಆಕ್ರೋಶ
* ವಿವಾದ ಬಳಿಕ ಕನ್ನಡ ಲಾಂಛನ ಪ್ರತ್ಯಕ್ಷ
* ಕ್ಷಮೆ ಕೂಡ ಕೇಳದ ಅಗ್ನಿಶಾಮಕ ಇಲಾಖೆ
 

ಬೆಂಗಳೂರು(ಆ.04): ತನ್ನ ಅಧಿಕೃತ ಲಾಂಛನದಲ್ಲೇ ಕನ್ನಡ ಭಾಷೆ ಬಳಕೆ ಮಾಡದೆ ಇಂಗ್ಲಿಷ್‌ ಹಾಗೂ ಹಿಂದಿ ಮಾತ್ರ ಬಳಕೆ ಮಾಡುವ ದಾಷ್ಟ್ರ್ಯ ತೋರಿದ ಕರ್ನಾಟಕ ರಾಜ್ಯ ಮತ್ತು ತುರ್ತು ಸೇವೆಗಳ ಇಲಾಖೆಯು ಕನ್ನಡಿಗರ ತೀವ್ರ ಕೆಂಗಣ್ಣಿಗೆ ಗುರಿಯಾದ ನಂತರ ತಪ್ಪು ತಿದ್ದುಕೊಂಡ ಘಟನೆ ನಡೆದಿದೆ!

ಇಲಾಖೆಯು ಹೊಸ ವಿನ್ಯಾಸದ ಲಾಂಛನವನ್ನು ಮಂಗಳವಾರ ಮಧ್ಯಾಹ್ನ ಇಲಾಖೆಯ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಿಸಿತ್ತು. ಆದರೆ, ದಲ್ಲಿ ಕನ್ನಡ ಭಾಷೆ ಬಳಕೆ ಮಾಡದೆ ಕೇವಲ ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯನ್ನು ಮಾತ್ರ ಬಳಕೆ ಮಾಡಿತ್ತು.

ಕನ್ನಡಿಗರ ಸ್ವಾಭಿಮಾನ ಪ್ರದರ್ಶನ,  ಕನ್ನಡ ಭಾಷೆಗೆ ರಾಣಿ ಪಟ್ಟ

ಇದು ಕನ್ನಡಿಗರನ್ನು ಕಂಗೆಡಿಸಿದ್ದು, ಕನ್ನಡ ಅಧಿಕೃತ ಭಾಷೆಯಾಗಿರುವ ಕರ್ನಾಟಕದಲ್ಲೇ ಬಳಕೆ ಮಾಡದೆ ಹಿಂದಿ ಭಾಷೆ ಬಳಕೆ ಮಾಡಿರುವುದನ್ನು ಖಂಡಿಸಿ ‘ಹಿಂದಿ ಗುಲಾಮಗಿರಿ ನಿಲ್ಲಿಸಿ’ ಹೆಸರಿನಲ್ಲಿ ಮಂಗಳವಾರ ಆನ್‌ಲೈನ್‌ನಲ್ಲಿ ಅಭಿಯಾನವನ್ನು ಕನ್ನಡಪ್ರೇಮಿ ನೆಟ್ಟಿಗರು ಆರಂಭಿಸಿದರು. ‘ಕರ್ನಾಟಕದ ಅಧಿಕೃತ ಭಾಷೆ ಕನ್ನಡವಾಗಿರುವಾಗ ಉತ್ತರ ಭಾರತದ ಭಾಷೆ ಹಿಂದಿಯನ್ನು ಕರ್ನಾಟಕದಲ್ಲಿ ಬಳಸುತ್ತಿರುವುದು ಏಕೆ? ಮೊದಲು ಹಿಂದಿ ತೆಗೆದು ಕನ್ನಡ ಹಾಕಿ. ಕರ್ನಾಟಕದ ಸರ್ಕಾರಿ ಸಂಸ್ಥೆಗಳಲ್ಲಿ ಕನ್ನಡಕ್ಕೇ ಜಾಗವಿಲ್ಲವೇ?’ ಎಂದು ನೂರಾರು ಮಂದಿ ಕಮೆಂಟ್‌ ಮಾಡಿದರು.

ಇದರಿಂದ ಎಚ್ಚೆತ್ತುಕೊಂಡ ಇಲಾಖೆಯು ‘ಕರ್ನಾಟಕ ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳು’ ಎಂದು ಕನ್ನಡ ಭಾಷೆಯಲ್ಲಿರುವ ಪರಿಷ್ಕೃತ ಲಾಂಛನವನ್ನು ಪ್ರಕಟಿಸಿತು. ಹಿಂದಿ-ಇಂಗ್ಲಿಷ್‌ ಲಾಂಛನ ಪೋಸ್ಟ್‌ ಮಾಡಿದ್ದ ನಾಲ್ಕು ಗಂಟೆಗಳ ಬಳಿಕ ಸಂಪೂರ್ಣ ಕನ್ನಡದಲ್ಲಿರುವ ಲೋಗೋ ಹಾಕಿತು. ಆದರೆ, ಹಿಂದಿ-ಇಂಗ್ಲಿಷ್‌ ಪೋಸ್ಟ್‌ಅನ್ನು ಅಳಿಸಿಲ್ಲ. ಜತೆಗೆ ತನ್ನ ತಪ್ಪಿಗೆ ಕನ್ನಡಿಗರ ಕ್ಷಮೆಯಾಚಿಸಿಲ್ಲ. ಹೀಗಾಗಿ ಇಲಾಖೆ ಕುರಿತು ಕನ್ನಡ ಪೇಮಿ ನೆಟ್ಟಿಗರ ಆಕ್ರೋಶ ಸಾಮಾಜಿಕ ಜಾಲತಾಣದಲ್ಲಿ ಮುಂದುವರೆದಿದೆ.
 

click me!