Hijab Verdict ಸರ್ಕಾರ ಲೆಕ್ಕಕ್ಕಿಲ್ಲ, ಕೋರ್ಟ್ ಹೇಳಿದ್ರೂ ಕೇಳೋದಿಲ್ಲ, ಭಟ್ಕಳದಲ್ಲಿ 3ನೇ ದಿನಕ್ಕೆ ಮುಸ್ಲಿಂ ವರ್ತಕರ ಬಂದ್!

By Suvarna News  |  First Published Mar 17, 2022, 4:08 PM IST

ಹಿಜಾಬ್ ವಿರುದ್ದ ಕರ್ನಾಟಕ ಹೈ ಕೋರ್ಟ್ ನೀಡಿದ ತೀರ್ಪಿನ ವಿರುದ್ದ ಪ್ರತಿಭಟನೆ

ಸತತ ಮೂರನೇ ದಿನಕ್ಕೆ ಭಟ್ಕಳದಲ್ಲಿ ಮುಸ್ಲಿಂ ವರ್ತಕರ ಬಂದ್

ಮುಸ್ಲಿಂ ಬಾಹುಳ್ಯದ ಬಹುತೇಕ ಪ್ರದೇಶದಲ್ಲಿ ವಾತಾವರಣ ಸ್ತಬ್ಧ


ಭಟ್ಕಳ, ಉತ್ತರ ಕನ್ನಡ (ಮಾ. 17): ಸಾಮಾನ್ಯವಾಗಿ ಸರ್ಕಾರದ ಮಟ್ಟದ ಯಾವುದೇ ವಿಚಾರಗಳಿಗೆ ಕೋಮು ಸೂಕ್ಷ್ಮ ಪ್ರದೇಶ ಭಟ್ಕಳ (Bhatkal) ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಭಟ್ಕಳ ನಗರ ಪ್ರದೇಶ ಮುಸ್ಲಿಂ ಬಾಹುಳ್ಯದ (Muslim Majority) ಪ್ರದೇಶವಾಗಿರುವ ಕಾರಣ, ಇಲ್ಲಿ ದೇಶದ ಸಮಸ್ಯೆಗಳಿಂತ ಹೊರದೇಶದ ಅದರಲ್ಲೂ ಗಲ್ಫ್ ವಿಭಾಗದ ಸಮಸ್ಯೆಗಳಿಗೆ ಸ್ಪಂದನೆಯಾಗುವುದು ಹೆಚ್ಚು. ಕರ್ನಾಟಕದಲ್ಲಿ ಈ ವರ್ಷ ಆರಂಭದಿಂದಲೂ ಬಿಗಿಯಾಗಿ ನಡೆಯುತ್ತಿರುವ ಹಿಜಾಬ್ ವಿಚಾರದಲ್ಲಿಯೂ ಹಾಗೆ. ಇಡೀ ಕರ್ನಾಟಕದಲ್ಲಿ ಹಿಜಾಬ್ (Hijab) ವಿಚಾರ ಕುದಿಯುತ್ತಿದ್ದರೂ ಭಟ್ಕಳ ಮಾತ್ರ ಬಹುತೇಕ ಶಾಂತವಾಗಿತ್ತು.

ಆದರೆ, ಕರ್ನಾಟಕ ಹೈಕೋರ್ಟ್ (Karnataka High Court)  ಹಿಜಾಬ್ ವಿಚಾರದಲ್ಲಿ ತನ್ನ ತೀರ್ಪು ನೀಡಿದ ಬೆನ್ನಲ್ಲಿಯೇ ಭಟ್ಕಳ ಸಣ್ಣ ಮಟ್ಟಿಗೆ ಕುದಿಯಲು ಆರಂಭಿಸಿದೆ ಎನ್ನು ಅಂಶ ಸ್ಥಳೀಯ ಪೊಲೀಸರಿಗೂ ತಿಳಿದಿದೆ. ಹಿಜಾಬ್ ಕುರಿತಾಗಿ ಹೈಕೋರ್ಟ್ ನೀಡಿದ ತೀರ್ಪನ್ನು ವಿರೋಧಿಸಿ ಇಲ್ಲಿನ ಮುಸ್ಲಿಂ ವರ್ತಕರು (Muslim Shop Owners) ನಡೆಸುತ್ತಿರುವ ಬಂದ್ ಮೂರನೇ ದಿನಕ್ಕೆ ಕಾಲಿಟ್ಟಿದೆ. ಅದರೆ, ಹಿಂದೂ ವರ್ತಕರು ಮಾತ್ರ  ಇದಕ್ಕೂ ತಮಗೂ ಸಂಬಂಧವಿಲ್ಲ ಎನ್ನುವಂತೆ ದಿನನಿತ್ಯದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದೇ ಸ್ಥಿತಿ ಇನ್ನೂ ಕೆಲ ದಿನ ಮುಂದುವರಿದರೆ ಅಪಾಯದ ಮುನ್ಸೂಚನೆಯೂ ಇದೆ ಎನ್ನುವುದು ಸ್ಥಳೀಯರ ಅಭಿಪ್ರಾಯ. ಯಾಕೆಂದರೆ ಭಟ್ಕಳದಲ್ಲಿ ಪ್ರತಿಭಟನೆ ಹಾಗೂ ಬಂದ್ ಹೆಚ್ಚಿನ ದಿನ ಮೌನವಾಗಿದ್ದರೆ, ಆ ಸಮಸ್ಯೆ ಬೇರೆಯದೇ ಕಡೆಗೆ ತಿರುಗಿಕೊಳ್ಳುತ್ತದೆ.

ಹೈಕೋರ್ಟ್‌ನಲ್ಲಿ ಹಿಜಾಬ್‌ಗೆ ಹಿನ್ನೆಡೆಯಾದ ಕಾರಣ ಭಟ್ಕಳದಲ್ಲಿ ಮುಸ್ಲಿಂ ವರ್ತಕರ ಅಸಮಾಧಾನ ಮೂರನೇ ದಿನಕ್ಕೆ ಕಾಲಿಟ್ಟಿದೆ. ಎಂದಿನಂತೆ ಮುಸ್ಲಿಂ ವರ್ತಕರು ಹೋಟೆಲ್, ಅಂಗಡಿ- ಮುಂಗಟ್ಟುಗಳು ಬಂದ್ ಮಾಡಿ ಬೇಸರ ಹೊರಹಾಕಿದ್ದಾರೆ. ಭಟ್ಕಳದ ಪ್ರಮುಖ ಸ್ಥಳಗಳಾದ ಮಾರಿಕಟ್ಟೆ ದೇವಸ್ಥಾನದ ಸಮೀಪದ ಬಾಂಬೆ ಬಜಾರ್, ಚೌಕ್ ಬಜಾರ್ ನಲ್ಲಿರುವ  ಮುಸ್ಲಿಂ ಅಂಗಡಿಗಳು ಬಂದ್ ಆಚರಣೆ ಮಾಡಿದರೆ ಹಿಂದು ವರ್ತಕರು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದ್ದಾರೆ.  ಮುಸ್ಲಿಂ ಬಾಹುಳ್ಯದ ಪ್ರದೇಶಗಳಾದ ನವಾಯತ್ ಕಾಲೋನಿ, ಮದೀನಾ ಕಾಲೋನಿ, ಮೌಲಾನಾ ಆಜಾದ್ ರೋಡ್ ನಲ್ಲಿ ಬಂದ್ ಗಗೆ ಮುಸ್ಲಿಂ ವರ್ತಕರ ಪ್ರತಿಕ್ರಿಯೆ ಬಂದಿದ್ದರೆ, ಭಟ್ಕಳ ಮುಖ್ಯರಸ್ತೆ, ರಂಗಿನಕಟ್ಟೆ ಪ್ರದೇಶಗಳಲ್ಲಿ ವಹಿವಾಟು ಎಂದಿನಂತೆ ನಡೆಯಿತು. ನಗರದ ವಾಣಿಜ್ಯ ವ್ಯವಹಾರಗಳಲ್ಲಿ ಹೆಚ್ಚಿನ ಪಾಲು ಮುಸ್ಲಿಮರು ಹೊಂದಿರುವ ಕಾರಣ ಶೇ. 60ರಷ್ಟು ಭಾಗದ ವಹಿವಾಟುಗಳು ಬಂದ್ ಆಗಿವೆ.

Hijab Verdict ಭಟ್ಕಳದಲ್ಲಿ ಮುಸ್ಲಿಂ ಅಂಗಡಿಗಳು ಬಂದ್, ನಾಲ್ವರು PFI ಕಾರ್ಯಕರ್ತರ ಬಂಧನ!
ಮಂಗಳವಾರ ಹೈಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೇ ಭಟ್ಕಳ ನಗರದಲ್ಲಿ ಸ್ವಯಂ ಪ್ರೇರಿತ ಬಂದ್ ಮಾಡಲಾಗಿತ್ತು. ಈ ವೇಳೆ ಒತ್ತಾಯಪೂರ್ವಕವಾಗಿ ಬಂದ್ ನಡೆಸಲು ಯತ್ನಿಸಿದ ಎಸ್‌ಡಿಪಿಐ ಹಾಗೂ ಪಿಎಫ್ಐ ಕಾರ್ಯಕರ್ತ ಸೇರಿ 4 ಮಂದಿ ಮೇಲೆ ಪ್ರಕರಣ ದಾಖಲಾಗಿತ್ತು. ಬುಧವಾರ ತಂಜೀಂ ಸಂಘಟನೆ ಜೊತೆ ಕೈ ಸೇರಿಸಿ ಭಟ್ಕಳ ನಗರದಲ್ಲಿ ಮುಸ್ಲಿಂ ವರ್ತಕರು ಬಂದ್ ಆಚರಿಸಿದ್ದರು. ಆದರೆ, ತಂಜೀ ಮಾತ್ರ ತಾವು ಬಂದ್ ಗೆ ಕರೆ ನೀಡಿರಲಿಲ್ಲ. ನಮ್ಮ ಕಚೇರಿ ಮಾತ್ರ ಬಂದ್ ಮಾಡುವುದಾಗಿ ಘೋಷಿಸಿದ್ದೆವು ಎಂದು ಹೇಳಿತ್ತು. ಇನ್ನು ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಮುಸ್ಲಿಂ ಧರ್ಮಗುರು ಬಂದ್ ಮಾಡಲು ಕರೆ ನೀಡಿದ್ದ ಕಾರಣ ಇಂದು ಮತ್ತೆ ಮುಸ್ಲಿಂ ವರ್ತಕರು ಭಟ್ಕಳದಲ್ಲಿ ತಮ್ಮ ಅಂಗಡಿಗಳನ್ನು ಮುಚ್ಚುವ ಮೂಲಕ ಬಂದ್ ಆಚರಿಸಿದ್ದಾರೆ.

The Kashmir Files ಚಿತ್ರ ಪ್ರದರ್ಶನ ಮಾಡಿ, ಭಟ್ಕಳದಲ್ಲಿ ಚಿತ್ರಮಂದಿರದ ಮುಂದೆ ಪ್ರತಿಭಟನೆ
ಹದ್ದಿನ ಕಣ್ಣಿಟ್ಟಿರುವ  ಪೊಲೀಸ್:
ಭಟ್ಕಳ ಹಾಗೂ ಕೋಮು ದ್ವೇಷ ಒಂದೇ ನಾಣ್ಯದ ಎರಡು ಮುಖಗಳು. ಇಲ್ಲಿನ ಪ್ರತಿ ಸಣ್ಣ ಸಂಗತಿಗಳೂ ದೊಡ್ಡ ವಿವಾದಗಳಿಗೆ ಕಾರಣವಾಗುತ್ತದೆ. ಇದು ಇಲ್ಲಿನ ಪೊಲೀಸರಿಗೂ ತಿಳಿದಿರುವ ವಿಚಾರ. ಆ ಕಾರಣಕ್ಕಾಗಿ ಭಟ್ಕಳದಲ್ಲಿ ಮುಸ್ಲಿಂ ವರ್ತಕರ ಬಂದ್ ಅನ್ನು ಸ್ಥಳೀಯ ಪೊಲೀಸ್ ಹದ್ದಿನ ಕಣ್ಣಿಟ್ಟು ಪರಿಶೀಲಿಸುತ್ತಿದೆ.  ಯಾವುದೇ ಅಹಿತರ ಘಟನೆಗಳು ನಡೆಯದಂತೆ ಭಟ್ಕಳ ನಗರದಾದ್ಯಂತ ಪೊಲೀಸರಿಂದ ಭಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಭಟ್ಕಳ ಕೆಳಪೇಟೆ ವಲಯದಲ್ಲಿ ಕ್ಷಣಕ್ಷಣಕ್ಕೂ ಪೊಲೀಸ್ ವಾಹನ ಗಸ್ತು ಸಂಚಾರ ನಡೆಸುತ್ತಿದೆ.

click me!