Hijab Row: ಬಿಗಿಭದ್ರತೆಯಲ್ಲಿ ಹೈಸ್ಕೂಲ್‌ ಶುರು, ರಾಜ್ಯಾದ್ಯಂತ ಕಟ್ಟೆಚ್ಚರ!

By Kannadaprabha News  |  First Published Feb 14, 2022, 6:15 AM IST

* ಹಿಜಾಬ್‌ ವಿವಾದದ ಹಿನ್ನೆಲೆಯಲ್ಲಿ ಫೆ.9ರಿಂದ ಬಂದ್‌ ಆಗಿದ್ದ ತರಗತಿಗಳು

* ಬಿಗಿಭದ್ರತೆಯಲ್ಲಿ ಇಂದಿನಿಂದ ಹೈಸ್ಕೂಲ್‌ ಶುರು

* ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲು ಸರ್ಕಾರದ ಸೂಚನೆ


ಬೆಂಗಳೂರು(ಫೆ.14): ಹಿಜಾಬ್‌ ಮತ್ತು ಕೇಸರಿ ಶಾಲು ಸಂಘರ್ಷದ ಹಿನ್ನೆಲೆಯಲ್ಲಿ ಕಳೆದ ಬುಧವಾರದಿಂದ ರಜೆ ನೀಡಲಾಗಿದ್ದ ಪ್ರೌಢಶಾಲಾ ಹಂತದ 9 ಮತ್ತು 10ನೇ ತರಗತಿಗಳು ಸೋಮವಾರದಿಂದ ರಾಜ್ಯಾದ್ಯಂತ ಪೊಲೀಸ್‌ ಕಟ್ಟೆಚ್ಚರದೊಂದಿಗೆ ಪುನಾರಂಭಗೊಳ್ಳಲಿವೆ.

ಆದರೆ ಪಿಯು ಕಾಲೇಜುಗಳಿಗೆ ಫೆ.15ರವರೆಗೆ ಮತ್ತು ಪದವಿ ಹಾಗೂ ಮೇಲ್ಪಟ್ಟಕಾಲೇಜುಗಳಿಗೆ ಫೆ.16ರವರೆಗೆ ರಜೆ ಮುಂದುವರೆಯಲಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಪಿಯು ಕಾಲೇಜು ಮತ್ತು ಪದವಿ ಹಾಗೂ ಮೇಲ್ಪಟ್ಟದ ಎಲ್ಲ ಕಾಲೇಜುಗಳ ಆರಂಭಕ್ಕೆ ಅವಕಾಶ ನೀಡಲು ಸರ್ಕಾರ ತೀರ್ಮಾನಿಸಿದೆ.

Tap to resize

Latest Videos

ಪ್ರೌಢಶಾಲೆ ಪುನಾರಂಭಕ್ಕೆ ಮುನ್ನಾದಿನವಾದ ಭಾನುವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಪಥ ಸಂಚಲನ ನಡೆಸಿದ್ದಾರೆ. ಸೂಕ್ಷ್ಮಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

"

ಕಟ್ಟೆಚ್ಚರಕ್ಕೆ ಸೂಚನೆ:

ಹಿಜಾಬ್‌, ಕೇಸರಿ ಶಾಲು ವಿವಾದದಿಂದಾಗಿ ಶಾಲಾ, ಕಾಲೇಜುಗಳು ಬಂದ್‌ ಆಗಬಾರದು. ಯಾವುದೇ ಮಕ್ಕಳು ಹಿಜಾಬ್‌, ಕೇಸರಿ ಶಾಲು ಧರಿಸಿ ತರಗತಿಗೆ ಬರಬಾರದು. ನಿಗದಿತ ಸಮವಸ್ತ್ರ ತೊಟ್ಟು ಮಾತ್ರ ಶಾಲೆಗೆ ಬರಬೇಕೆಂಬ ಹೈಕೋರ್ಟ್‌ ಮಧ್ಯಂತರ ಆದೇಶದಂತೆ ಹಂತ ಹಂತವಾಗಿ ಶಾಲಾ, ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ. ಮೊದಲ ಹಂತದಲ್ಲಿ, ರಜೆ ನೀಡಲಾಗಿದ್ದ ತರಗತಿಗಳ ಪೈಕಿ 9 ಮತ್ತು 10ನೇ ತರಗತಿಗಳನ್ನು ಸೋಮವಾರದಿಂದ ಆರಂಭಿಸಲು ಸೂಚಿಸಿದೆ. ಕಾಲೇಜು ಹಂತದಲ್ಲಿ ಸಂಘರ್ಷಕ್ಕೆ ಕಾರಣವಾಗಿರುವ ಹಿಜಾಬ್‌ ಮತ್ತು ಕೇಸರಿ ಶಾಲು ವಿವಾದ ಶಾಲಾ ಮಟ್ಟಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸುವಂತೆ ಸರ್ಕಾರ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಶಾಲಾ ಹಂತದಲ್ಲಿ ಎಲ್ಲ ಮಕ್ಕಳಿಗೂ ಸಮವಸ್ತ್ರ ನಿಗದಿಪಡಿಸಲಾಗಿದೆ. ನಿಗದಿತ ಸಮವಸ್ತ್ರವನ್ನು ಮಾತ್ರ ತೊಟ್ಟು ಶಾಲೆಗೆ ಬರುವಂತೆ ನೋಡಿಕೊಳ್ಳಬೇಕು. ಮಕ್ಕಳಲ್ಲಿ ಶಾಂತಿ, ಸೌಹಾರ್ದತೆ ಹದಗೆಡಲು ಅವಕಾಶವಾಗದಂತೆ ಎಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರಿಗೆ ಸೂಚಿಸಿದೆ.

click me!