ಇಂದಿನಿಂದ 10 ದಿನ ಸದನ ಕದನ: ಹಿಜಾಬ್‌-ಕೇಸರಿ ಶಾಲು ವಿವಾದ ಬಗ್ಗೆ ಜಟಾಪಟಿ ನಿರೀಕ್ಷೆ!

By Kannadaprabha NewsFirst Published Feb 14, 2022, 6:07 AM IST
Highlights

* ಜಂಟಿ ಅಧಿವೇಶನವನ್ನು ಉದ್ದೇಶಿಸಿ ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ಗೆಹಲೋತ್‌ ಭಾಷಣ

* ನಾಳೆಯಿಂದ ಎಂದಿನ ಕಲಾಪ

* ಹಿಜಾಬ್‌-ಕೇಸರಿ ಶಾಲು ವಿವಾದ ಬಗ್ಗೆ ಜಟಾಪಟಿ ನಿರೀಕ್ಷೆ

ಬೆಂಗಳೂರು(ಫೆ.14): ಹಿಜಾಬ್‌-ಕೇಸರಿ ವಸ್ತ್ರ ವಿವಾದ ನಿರ್ವಹಣೆ, ಬಿಟ್‌ಕಾಯಿನ್‌ ಹಗರಣ, ಗುತ್ತಿಗೆ ಕಾಮಗಾರಿಯಲ್ಲಿ ಶೇ.40ರಷ್ಟುಕಮಿಷನ್‌ ಆರೋಪ, ಕೊರೋನಾದಿಂದ ಸಾವಿಗೀಡಾದ ಕುಟುಂಬಗಳಿಗೆ ಪರಿಹಾರ ನೀಡಿಕೆಯಲ್ಲಿ ವಿಳಂಬ, ಮೇಕೆದಾಟು, ಮಹದಾಯಿ ಯೋಜನೆ ಜಾರಿ ಸೇರಿದಂತೆ ವಿವಿಧ ವಿಷಯಗಳು ಸೋಮವಾರದಿಂದ ಆರಂಭವಾಗಲಿರುವ ಹತ್ತು ದಿನಗಳ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನದಲ್ಲಿ ಸಾಕಷ್ಟುಬಿಸಿ ಬಿಸಿ ಚರ್ಚೆಯಾಗುವ ಸಾಧ್ಯತೆ ಇದೆ.

ಇದಲ್ಲದೆ ಬೆಳೆ ವಿಮೆ ಸಮಸ್ಯೆ, ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ಮಿತಿ ನಿಗದಿಪಡಿಸಿರುವುದು, ಎಪಿಎಂಸಿ ಕಾಯ್ದೆ ವಾಪಸು ಪಡೆಯುವುದು, ಕೃಷಿ ಭೂಮಿಯನ್ನು ಖಾಸಗಿಯವರು ಖರೀದಿಸುವ ಅವಕಾಶ ನೀಡುವ ಕಾಯ್ದೆ ವಾಪಸ್‌ ಪಡೆಯಬೇಕೆಂಬ ವಿಷಯಗಳು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ಚರ್ಚೆಗೆ ಒಳಗಾಗುವ ಸಂಭವವಿದೆ.

Latest Videos

"

ಸೋಮವಾರ ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಿರ್ಣಯ ಮಂಡಿಸಿದ ಬಳಿಕ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಗುತ್ತದೆ. ಈ ತಿಂಗಳ 25ರವರೆಗೆ ಅಧಿವೇಶನ ನಡೆಯಲಿದೆ.

ಈಗಾಗಲೇ ಪ್ರತಿಪಕ್ಷ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಸದನಗಳಲ್ಲಿ ಪ್ರಸ್ತಾಪಿಸುವ ವಿಷಯಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಆಡಳಿತಾರೂಢ ಪಕ್ಷ ಸಹ ಪ್ರತಿಪಕ್ಷಗಳ ಏಟಿಗೆ ಎದುರೇಟು ನೀಡಲು ಸಜ್ಜಾಗುವಂತೆ ಸಚಿವರು ಹಾಗೂ ಸದಸ್ಯರಿಗೆ ಸೂಚನೆ ನೀಡಿದೆ. ಬೆಳಗಾವಿ ಅಧಿವೇಶನದಲ್ಲಿ ಪರಿಷತ್‌ನಲ್ಲಿ ಮಂಡನೆಯಾಗಿದ್ದರೂ ಸದನದ ಒಪ್ಪಿಗೆ ಪಡೆಯಲು ಆಗದ ‘ಮತಾಂತರ ನಿಷೇಧ ವಿಧೇಯಕ’ವನ್ನು ಪುನಃ ಮಂಡಿಸಿದರೆ ಸಾಕಷ್ಟುವಾಗ್ವಾದಕ್ಕೆ ಕಾರಣವಾಗುವ ಲಕ್ಷಣವಿದೆ.

ಹಿಜಾಬ್‌ ವಿವಾದ-ಬಿಸಿ ತುಪ್ಪ:

ರಾಜ್ಯದಲ್ಲಿ ಆರಂಭವಾದ ಹಿಜಾಬ್‌ ವಿವಾದ ಈಗ ಅಂತಾರಾಷ್ಟ್ರೀಯ ಮಟ್ಟತಲುಪಿದೆ. ಹೀಗಾಗಿ ಈ ವಿಷಯದ ಬಗ್ಗೆ ಚರ್ಚಿಸಬೇಕೆ, ಬೇಡವೇ ಎಂಬ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್‌ ಇನ್ನೂ ನಿರ್ಧರಿಸಿಲ್ಲ. ಆದರೆ ಈ ವಿವಾದ ಬೆಳೆಯದಂತೆ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಅಂಶ ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಉಳಿದಂತೆ ಕೊರೋನಾದಿಂದ ಮೃತಪಟ್ಟಕುಟುಂಬದ ಸದಸ್ಯರಿಗೆ ಪರಿಹಾರ ನೀಡುವಲ್ಲಿ ವಿಳಂಬ, ಮೂರನೇ ಅಲೆ ವೇಳೆಯಲ್ಲಿ ಸೋಂಕು ಹರಡದಂತೆ ಕಫä್ರ್ಯ, ರಾತ್ರಿ ಕಫä್ರ್ಯ, ಶಾಲಾ-ಕಾಲೇಜುಗಳಿಗೆ ರಜೆ ನೀಡಿರುವ ವಿಷಯಗಳು ಕಲಾಪದಲ್ಲಿ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಬಹುದು.

ಪರಿಷತ್‌ಗೆ ಹೊಸ ಪ್ರತಿಪಕ್ಷದ ನಾಯಕ:

ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕರಾಗಿ ಹಿರಿಯ ಕಾಂಗ್ರೆಸ್‌ ಮುಖಂಡ ಬಿ.ಕೆ. ಹರಿಪ್ರಸಾದ್‌, ಉಪನಾಯಕರಾಗಿ ಕೆ. ಗೋವಿಂದರಾಜು ಹಾಗೂ ಪ್ರತಿಪಕ್ಷದ ಮುಖ್ಯ ಸಚೇತಕರಾಗಿ ಪ್ರಕಾಶ ರಾಥೋಡ್‌ ಕಾರ್ಯನಿರ್ವಹಿಸಲಿದ್ದಾರೆ. ಅದೇ ರೀತಿ ಜೆಡಿಎಸ್‌ ಪಕ್ಷದ ಮುಖ್ಯ ಸಚೇತಕರಾಗಿ ಗೋವಿಂದರಾಜು ಅವರು ಕಾರ್ಯ ನಿರ್ವಹಿಸಲಿದ್ದಾರೆ. ಉಳಿದಂತೆ ಸಭಾನಾಯಕರಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಂದುವರೆದಿದ್ದಾರೆ.

ಮತಾಂತರ ನಿಷೇಧ ಮಂಡನೆ ಆಗುತ್ತಾ?

ಮತಾಂತರ ನಿಷೇಧ ವಿಧೇಯಕವನ್ನು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಸಂದರ್ಭ ವಿಧಾನ ಪರಿಷತ್‌ನಲ್ಲಿ ಮಂಡಿಸಲಾಗಿತ್ತು. ಕಾಲಾವಕಾಶ ಇಲ್ಲದೆ ವಿಧೇಯಕದ ಚರ್ಚೆಯಾಗಲಿ, ಅಂಗೀಕಾರವಾಗಲಿ ಆಗಿರಲಿಲ್ಲ. ಇದೀಗ ಫೆ.25ರವರೆಗೆ ನಡೆಯಲಿರುವ ಅಧಿವೇಶನ ಸಂದರ್ಭದಲ್ಲಿ ವಿಧೇಯಕ ಮತ್ತೆ ಮಂಡನೆ ಆಗುತ್ತಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

click me!