ಹಿಜಾಬ್‌ ವಿವಾದ ಸುಪ್ರೀಂ ತ್ರಿಸದಸ್ಯ ಪೀಠಕ್ಕೆ?

By Kannadaprabha NewsFirst Published Jan 24, 2023, 2:16 PM IST
Highlights

ದ್ವಿಸದಸ್ಯ ಪೀಠದಲ್ಲಿ ಭಿನ್ನ ತೀರ್ಪು ಬಂದಿರುವುದರಿಂದ ತ್ರಿಸದಸ್ಯ ಪೀಠಕ್ಕೆ ಪರಿಶೀಲನೆ, ಮಧ್ಯಂತರ ಆದೇಶಕ್ಕೆ ವಿದ್ಯಾರ್ಥಿಗಳ ಮನವಿ, ಪರಿಶೀಲಿಸುತ್ತೇವೆ ಎಂದ ನ್ಯಾಯಪೀಠ. 

ನವದೆಹಲಿ(ಜ.24): ಕರ್ನಾಟಕದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ ಧಾರಣೆ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ ದ್ವಿಸದಸ್ಯ ಪೀಠ ಭಿನ್ನ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಈ ಪ್ರಕರಣದ ವಿಚಾರಣೆಗೆ ತ್ರಿಸದಸ್ಯ ಪೀಠ ರಚನೆ ಕುರಿತು ಪರಿಶೀಲಿಸಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯ ಸೋಮವಾರ ಹೇಳಿದೆ.

‘ಫೆ.6ರಿಂದ ಕರ್ನಾಟಕದ ಕೆಲ ತರಗತಿಗಳಿಗೆ ಪ್ರಾಯೋಗಿಕ ಪರೀಕ್ಷೆ ಆರಂಭವಾಗುತ್ತಿದೆ. ಹೀಗಾಗಿ ಹಿಜಾಬ್‌ ಕುರಿತು ಮಧ್ಯಂತರ ನಿರ್ದೇಶನ ಬೇಕಾಗಿದೆ. ಹೀಗಾದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬಹುದಾಗಿದೆ’ ಎಂದು ಕೆಲ ವಿದ್ಯಾರ್ಥಿಗಳ ಪರ ವಕೀಲರಾಗಿರುವ ಹಿರಿಯ ನ್ಯಾಯವಾದಿ ಮೀನಾಕ್ಷಿ ಅರೋರಾ ಅವರು ಮನವಿ ಮಾಡಿದರು. ಇದನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾ. ರಾಮಸುಬ್ರಮಣಿಯನ್‌, ನ್ಯಾ. ಜೆ.ಬಿ. ಪರ್ದೀವಾಲಾ ಅವರಿದ್ದ ಪೀಠ ಗಣನೆಗೆ ತೆಗೆದುಕೊಂಡಿತು. ‘ಈ ಬಗ್ಗೆ ಪರಿಶೀಲಿಸಲಾಗುವುದು. ದಿನಾಂಕ ಹಂಚಿಕೆ ಮಾಡಲಾಗುವುದು’ ಎಂದು ನ್ಯಾ. ಚಂದ್ರಚೂಡ್‌ ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ವರದಾನ ಆಗುತ್ತಾ ಹಿಜಾಬ್‌ ವಿವಾದ?

ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ ಸೇರಿ ಧಾರ್ಮಿಕ ವಸ್ತ್ರಗಳನ್ನು ನಿಷೇಧಿಸಿ ಕರ್ನಾಟಕ ಹೈಕೋರ್ಟ್‌ 2022ರ ಮಾರ್ಚ್‌ 15ರಂದು ತೀರ್ಪು ನೀಡಿತ್ತು. ಇದರ ವಿರುದ್ಧ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಅ.13ರಂದು ನ್ಯಾ. ಹೇಮಂತ್‌ ಗುಪ್ತಾ ಹಾಗೂ ನ್ಯಾ. ಸುಧಾಂಶು ಧೂಲಿಯಾ ಅವರಿದ್ದ ಪೀಠ ಭಿನ್ನ ತೀರ್ಪು ನೀಡಿತ್ತು. ನ್ಯಾ. ಗುಪ್ತಾ ಅವರು ಹೈಕೋರ್ಟ್‌ ಆದೇಶ ಎತ್ತಿ ಹಿಡಿದಿದ್ದರೆ, ವಿದ್ಯಾರ್ಥಿಗಳು ಯಾವುದೇ ನಿರ್ಬಂಧವಿಲ್ಲದೆ ಶಾಲೆ- ಕಾಲೇಜಿನಲ್ಲಿ ಎಲ್ಲಿ ಬೇಕಾದರೂ ಹಿಜಾಬ್‌ ಧರಿಸಬಹುದು ಎಂದು ನ್ಯಾ. ಧೂಲಿಯಾ ಅವರು ಹೇಳಿದ್ದರು. ಅಲ್ಲದೆ ಸದ್ಯ ಕರ್ನಾಟಕ ಹೈಕೋರ್ಟ್‌ ತೀರ್ಪೇ ಈಗಲೂ ಚಾಲ್ತಿಯಲ್ಲಿರುತ್ತದೆ ಎಂದು ತೀರ್ಪಿನ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಹೇಳಿದ್ದರು. ವಿಸ್ತೃತ ಪೀಠ ರಚನೆಗೂ ಕೋರಿದ್ದರು.

click me!