ಕೊರೋನಾ ನಿಯಂತ್ರಿಸಲು ಸಂಪೂರ್ಣ ವಿಫಲ: ಬಿಬಿಎಂಪಿಗೆ ಹೈಕೋರ್ಟ್‌ ಹಿಗ್ಗಾಮುಗ್ಗ ತರಾಟೆ

By Kannadaprabha News  |  First Published Jul 17, 2020, 7:38 AM IST

ಪಾಲಿಕೆಗೆ ಸಮರ್ಪಕ ಕಾರ‍್ಯ ವಿಧಾನವೇ ತಿಳಿದಿಲ್ಲ|ಅಗತ್ಯ ಇರೋರಿಗೆ ಆಹಾರ ನೀಡದ ಪಾಲಿಕೆಗೆ ಹೈಕೋರ್ಟ್‌ ಹಿಗ್ಗಾಮುಗ್ಗ ತರಾಟೆ| ಬೆಂಗಳೂರಿನಲ್ಲಿ 5,598 ಕಂಟೈನ್ಮೆಂಟ್‌ ವಲಯಗಳಿವೆ| ಅಲ್ಲಿ ಅಗತ್ಯವಿದ್ದವರಿಗೆ ಆಹಾರ ಪೂರೈಸಬೇಕೆಂದು ಎಸ್‌ಓಪಿ ಯಲ್ಲಿದೆ| ಆಹಾರದ ಅಗತ್ಯವಿರುವವರನ್ನು ಗುರುತಿಸಲು ಯತ್ನಿಸಿಲ್ಲ. ಕೊರೋನಾ ಹರಡುವುದನ್ನು ನಿಯಂತ್ರಿಸಲು ಬಿಬಿಎಂಪಿ ಎಲ್ಲಾ ಹಂತದಲ್ಲೂ ಸಂಪೂರ್ಣ ವಿಫಲವಾಗಿದೆ|


ಬೆಂಗಳೂರು(ಜು.17):  ನಗರದಲ್ಲಿನ ಕಂಟೈನ್ಮೆಂಟ್‌ ವಲಯಗಳಲ್ಲಿನ ಬಡ ಹಾಗೂ ನಿರ್ಗತಿಕರಿಗೆ ಆಹಾರ ಕಿಟ್‌ ಸೇರಿದಂತೆ ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು (ಎಸ್‌ಓಪಿ) ಸಮರ್ಪಕವಾಗಿ ಜಾರಿ ಮಾಡುವಲ್ಲಿ ವಿಫಲವಾದ ವಿಚಾರವಾಗಿ ಬಿಬಿಎಂಪಿಯನ್ನು ಹೈಕೋರ್ಟ್‌ ಗುರುವಾರ ಮತ್ತೆ ತರಾಟೆಗೆ ತೆಗೆದುಕೊಂಡಿದೆ.

"

Latest Videos

undefined

ಬೆಂಗಳೂರಿನಲ್ಲಿ 5,598 ಕಂಟೈನ್ಮೆಂಟ್‌ ವಲಯಗಳಿವೆ. ಅಲ್ಲಿ ಅಗತ್ಯವಿದ್ದವರಿಗೆ ಆಹಾರ ಪೂರೈಸಬೇಕೆಂದು ಎಸ್‌ಓಪಿ ಯಲ್ಲಿದೆ. ಆಹಾರದ ಅಗತ್ಯವಿರುವವರನ್ನು ಗುರುತಿಸಲು ಯತ್ನಿಸಿಲ್ಲ. ಕೊರೋನಾ ಹರಡುವುದನ್ನು ನಿಯಂತ್ರಿಸಲು ಬಿಬಿಎಂಪಿ ಎಲ್ಲಾ ಹಂತದಲ್ಲೂ ಸಂಪೂರ್ಣ ವಿಫಲವಾಗಿದೆ. ಹೀಗಾಗಿ, ಪಾಲಿಕೆಗೆ ಆಡಳಿತಾಧಿಕಾರಿ ನೇಮಿಸಲು ಹಾಗೂ ಆಯುಕ್ತರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ನಡೆಸಲು ನ್ಯಾಯಾಲಯ ಯೋಚಿಸಿತ್ತು. ಕೊರೋನಾ ತುರ್ತು ಪರಿಸ್ಥಿತಿ ಇರುವುದರಿಂದ ಸುಮ್ಮನಾಯಿತು ಎಂದು ಹೈಕೋರ್ಟ್‌ ಚಾಟಿ ಬೀಸಿತು.

ಬಿಬಿಎಂಪಿ ನಂಬಿಕೊಂಡರೆ ನಗರದಲ್ಲಿ ಭೀಕರ ಸ್ಥಿತಿ ಸೃಷ್ಟಿ: ಹೈಕೋರ್ಟ್‌ ಕಿಡಿ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಎದುರಾದ ಅನಾನುಕೂಲತೆ ವಿಚಾರವಾಗಿ ಸಲ್ಲಿಕೆಯಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಬಿಬಿಎಂಪಿ ವಿರುದ್ಧ ಕೆಂಡಾಮಂಡಲವಾಯಿತು.

ಕಂಟೈನ್ಮೆಂಟ್‌ ವಲಯಗಳಲ್ಲಿ ಅಗತ್ಯವಿರುವರನ್ನು ಗುರುತಿಸಿ ಆಹಾರ ಕಿಟ್‌ ಪೂರೈಸಿಲ್ಲ. ಆದರೆ, 25 ಸಾವಿರ ರೇಷನ್‌ ಕಿಟ್‌ಗಳನ್ನು ವಿತರಿಸುವುದಾಗಿ ಹೇಳುತ್ತದೆ. ಅಗತ್ಯ ಇರುವವರನ್ನು ಗುರುತಿಸದೆ ಆಹಾರ ಹಂಚಲು ಹೇಗೆ ಸಾಧ್ಯ? ರಾಜ್ಯದಲ್ಲಿ ದಿನನಿತ್ಯ ಕೊರೋನಾ ಸೋಂಕು ತಗುಲಿದವರ ಸಂಖ್ಯೆ ಎರಡು ಸಾವಿರ ದಾಟುತ್ತಿದೆ. ಇದರಿಂದ ಬಿಬಿಎಂಪಿಗೆ ಕಾರ್ಯಭಾರ ಹೆಚ್ಚಿರುವುದು ನಿಜ. ಆದರೆ, ಪಾಲಿಕೆಗೆ ಸಮರ್ಪಕ ಕಾರ್ಯ ವಿಧಾನವೇ ತಿಳಿದಿಲ್ಲ ಎಂದು ಹಿಗ್ಗಾಮುಗ್ಗಾ ಚಾಟಿ ಬೀಸಿತು.

ಎಸ್‌ಓಪಿ ಜಾರಿ ಹಾಗೂ ಆಹಾರ ಸಾಮಗ್ರಿ ವಿತರಣೆಗೆ ಸರ್ಕಾರವೇ ಉಸ್ತುವಾರಿ ಹೊರಬೇಕು. ಅದಕ್ಕಾಗಿ ಉಸ್ತುವಾರಿಯಾಗಿ ಹಿರಿಯ ಅಧಿಕಾರಿ ನೇಮಿಸುವುದು ಸೂಕ್ತ ಎಂದು ತಿಳಿಸಿತು. ಮಧ್ಯಾಹ್ನ ಕಲಾಪಕ್ಕೆ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಹಾಜರಾಗಿ, ನ್ಯಾಯಾಲಯದ ಸೂಚನೆಯಂತೆ ಹಿರಿಯ ಅಧಿಕಾರಿ ಜಿ.ಕುಮಾರ್‌ ನಾಯಕ್‌ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಅದನ್ನು ಒಪ್ಪಿದ ನ್ಯಾಯಪೀಠ, ನೇಮಕ ಸಂಬಂಧ ಸರ್ಕಾರ ನೋಟಿಫಿಕೇಷನ್‌ ಹೊರಡಿಸಬೇಕು. ಉಸ್ತುವಾರಿ ಜಿ.ಕುಮಾರ್‌ ನಾಯಕ್‌, ಎಸ್‌ಓಪಿ ಜಾರಿಗೆ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಬಿಬಿಎಂಪಿ ಆಯುಕ್ತರಿಗೆ ಸೂಕ್ತ ನಿರ್ದೇಶನ ನೀಡಬೇಕು. ಈ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿ ಜುಲೈ 24ಕ್ಕೆ ವಿಚಾರಣೆ ಮುಂದೂಡಿತು.

click me!