ಈ ರಾಜಕಾರಣಿಗಳ ಮೇಲೆ ಹೈಕೋರ್ಟ್ ಗರಂ : ಎಚ್ಚರಿಕೆ

By Kannadaprabha NewsFirst Published Nov 6, 2020, 7:21 AM IST
Highlights

ರಾಜ್ಯ ಸರ್ಕಾರದ ವಿರುದ್ಧ ಹೈ ಕೋರ್ಟ್ ಫುಲ್ ಗರಂ ಆಗಿದ್ದು, ಇಂತಹ ನಿರ್ಲಕ್ಷ್ಯ ದೋರಣೆ ವಿರುದ್ಧ ಅಸಮಾಧಾನ ಹೊರಹಾಕಿದೆ. 

ಬೆಂಗಳೂರು (ನ.06):  ಸಾಮಾನ್ಯ ಜನರು ಮಾಸ್ಕ್‌ ಹಾಕದೆ ಹಾಗೂ ಸಾಮಾಜಿಕ ಅಂತರ ಪಾಲಿಸದೆ ಕೋವಿಡ್‌-19 ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುತ್ತೀರಿ. ಅದೇ ನಿಯಮ ಉಲ್ಲಂಘಿಸಿದ ರಾಜಕಾರಣಿಗಳ ವಿರುದ್ಧ ಮಾತ್ರ ಯಾವುದೇ ಕ್ರಮ ಜರುಗಿಸಿಲ್ಲ. ಕೇವಲ ಸಾಮಾನ್ಯ ಜನರಿಗಷ್ಟೇ ಕಾನೂನು ಇದೆಯೇ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್‌ ಕಟುವಾಗಿ ಪ್ರಶ್ನಿಸಿದೆ.

ಕೊರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಲೆಟ್ಜ್ ಕಿಟ್‌ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ವೇಳೆ ಕೋವಿಡ್‌-19 ಮಾರ್ಗಸೂಚಿಗಳನ್ನು ರಾಜಕಾರಣಿಗಳು ಉಲ್ಲಂಘಿಘಿಸುತ್ತಿರುವ ಪ್ರಕರಣಗಳಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದಕ್ಕೆ ನ್ಯಾಯಪೀಠ ತೀವ್ರ ಬೇಸರ ವ್ಯಕ್ತಪಡಿಸಿತು.

ಜನಪ್ರತಿನಿಧಿಗಳು ಹಾಗೂ ಗಣ್ಯರು ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿರುವುದು ಫೋಟೋಗಳಲ್ಲೇ ಸ್ಪಷ್ಟವಾಗಿ ಕಾಣುತ್ತಿದೆ. ಆದರೆ, ಅವರ ವಿರುದ್ಧ ಸರ್ಕಾರ ಕ್ರಮ ಜರುಗಿಸಿಲ್ಲ. ಬದಲಿಗೆ ಕ್ರಮ ಜರುಗಿಸಲಾಗುತ್ತಿದೆ ಎಂಬುದಾಗಿ ಕಣ್ಣೊರೆಸುವ ಉತ್ತರ ನೀಡುತ್ತಿದೆ. ಅದೇ ಸಾಮಾನ್ಯ ಜನರು ಮಾಸ್ಕ್‌ ಹಾಕದೆ ಸಿಕ್ಕಿಬಿದ್ದರೆ 250 ರು. ದಂಡ ವಿಧಿಸುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಅಲ್ಲದೆ, ರಾಜಕಾರಣಿಗಳ ವಿರುದ್ಧ ಏಕೆ ಎಫ್‌ಐಆರ್‌ ದಾಖಲಿಸಿಲ್ಲ? ಕಠಿಣ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿರುವ ಸರ್ಕಾರವು ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತಿದೆ ಎಂದು ಸರ್ಕಾರಿ ವಕೀಲರನ್ನು ಖಾರವಾಗಿ ಪ್ರಶ್ನಿಸಿತು.

ಕೊರೋನಾ ವಿರುದ್ಧ ಹೋರಾಟ: ಅಜೀಂ ಪ್ರೇಮ್‌ಜಿ ಪ್ರತಿಷ್ಠಾನಕ್ಕೆ ಸುಧಾಕರ್‌ ಅಭಿನಂದನೆ ...

ಈ ವೇಳೆ ಬಿಬಿಎಂಪಿ ಪರ ವಕೀಲರು, ಈವರೆಗೂ ಮಾಸ್ಕ್‌ ಹಾಕದ 1.94 ಲಕ್ಷ ಜನರಿಗೆ ದಂಡ ವಿಧಿಸಲಾಗಿದೆ. ಅದರಿಂದ ಒಟ್ಟು 4.33 ಕೋಟಿ ರು. ಸಂಗ್ರಹವಾಗಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ಆಯುಕ್ತರಿಂದ ವಿವರಣೆಗೆ ಸೂಚನೆ :  ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷರೂ ಆಗಿರುವ ಸಂಸದ ತೇಜಸ್ವಿ ಸೂರ್ಯ ನಡೆಸಿದ ರಾರ‍ಯಲಿಯಲ್ಲಿ ಭಾಗವಹಿಸಿದ್ದವರ ವಿರುದ್ಧ ಹಾಗೂ ಆರ್‌.ಆರ್‌.ನಗರ ಚುನಾವಣಾ ಪ್ರಚಾರದಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ನಿಯಮ ಉಲ್ಲಂಘಿಸಿದವರ ವಿರುದ್ಧ ಎನ್‌ಸಿಆರ್‌ (ಅಸಂಜ್ಞೇಯ ಪ್ರಕರಣ) ದಾಖಲಿಸಿರುವುದಾಗಿ ಹೇಳಿದ್ದೀರಿ. ಈ ಸಂಬಂಧ ಕೈಗೊಂಡ ಕ್ರಮಗಳೇನು ಎಂದು ಪ್ರಶ್ನಿಸಿತು. ಜತೆಗೆ, ರಾರ‍ಯಲಿಯಲ್ಲಿ ಮಾಸ್ಕ್‌ ಧರಿಸದ ಹಾಗೂ ಸಾಮಾಜಿಕ ಅಂತರ ಪಾಲಿಸದವರ ವಿರುದ್ಧ ಪೋಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಖುದ್ದು ನಗರ ಪೊಲೀಸ್‌ ಆಯುಕ್ತರು ವಿವರಣೆ ನೀಡಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

click me!