
ಬೆಂಗಳೂರು (ಮೆ.14): ಕೊರೋನಾ ಲಸಿಕೆ ಕೊರತೆ ಮತ್ತು ವಿತರಣೆಯಲ್ಲಿ ಸೃಷ್ಟಿಯಾಗಿರುವ ಗೊಂದಲಗಳ ಕುರಿತಂತೆ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ತಕ್ಷಣಕ್ಕೆ ಅಗತ್ಯವಿರುವವರಿಗೆ 2ನೇ ಡೋಸ್ ಲಸಿಕೆ ಯಾವಾಗ ನೀಡುತ್ತೀರಿ? ನಿಮ್ಮಿಂದ ಆಗುವುದಿಲ್ಲ ಎನ್ನುವುದಾದರೆ ಅದನ್ನು ತಿಳಿಸಿ ಎಂದು ತರಾಟೆಗೆ ತೆಗೆದುಕೊಂಡಿದೆ.
ಕೊರೋನಾ ಲಸಿಕೆ ವಿತರಣೆ ಸಂಬಂಧ ಸಚಿವರು, ಶಾಸಕರು ವಾಸ್ತವಾಂಶವನ್ನು ಜನರ ಮುಂದಿಡಲಿ. ಅದನ್ನು ಹೊರತು ಪಡಿಸಿ ಮನಸೋ ಇಚ್ಛೆ ಹೇಳಿಕೆಗಳನ್ನು ನೀಡುವುದು ಬಿಡಬೇಕು ಎಂದು ನ್ಯಾಯಪೀಠ ತಾಕೀತು ಮಾಡಿದೆ.
ಕೊರೋನಾ ನಿರ್ವಹಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಆರವಿಂದ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
IISC ಲಸಿಕೆ ಉಳಿದೆಲ್ಲದಕ್ಕಿಂತ ಪರಿಣಾಮಕಾರಿ; ಡಾ. ಸುಧಾಕರ್ ಮಾಹಿತಿ
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಅಂಕಿ-ಅಂಶಗಳನ್ನು ಪರಿಶೀಲಿಸಿದ ನ್ಯಾಯಪೀಠ, ಕೋವಿಶೀಲ್ಡ್, ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದು, 2ನೇ ಡೋಸ್ ಪಡೆಯುವ ಅವಧಿ ಮುಗಿಯುವ ಹಂತದಲ್ಲಿರುವ ಮತ್ತು ಮುಗಿದಿರುವ 19.97 ಲಕ್ಷ ಮಂದಿಗೆ ತಕ್ಷಣ 2ನೇ ಡೋಸ್ ನೀಡಬೇಕಾಗಿದೆ. ಆದರೆ, ಸರ್ಕಾರದ ಬಳಿ ಸದ್ಯ ಇರುವುದು 11.24 ಲಕ್ಷ ಲಸಿಕೆಗಳು ಮಾತ್ರ. ತಕ್ಷಣ 2ನೇ ಡೋಸ್ ನೀಡಬೇಕಾದವರಿಗೂ 8.73 ಲಕ್ಷ ಲಸಿಕೆಗಳ ಕೊರತೆ ಆಗುತ್ತದೆ. ಕೇಂದ್ರ ಸರ್ಕಾರ ಪೂರೈಸುವ ಲಸಿಕೆಗಳಲ್ಲಿ ಶೇ.70ರಷ್ಟನ್ನು 2ನೇ ಡೋಸ್‌ಗೆ ಮೀಸಲಿಡಬೇಕು ಎಂದು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಯಾಕೆ ಪಾಲಿಸಿಲ್ಲ. ರಾಜ್ಯದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಶೇ.1ರಷ್ಟುಜನರಿಗೂ ಸಹ ಲಸಿಕೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತ ಪಡಿಸಿತು.
ಈ ವೇಳೆ ಪ್ರತಿಕ್ರಿಯಿಸಿದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆರ್. ಸುಬ್ರಮಣ್ಯ, ಸದ್ಯಕ್ಕೆ ಮೊದಲ ಡೋಸ್ ನೀಡುವುದನ್ನು ಸ್ಥಗಿತಗೊಳಿಸಲಾಗಿದ್ದು, 2ನೇ ಡೋಸ್‌ಗೆ ಆದ್ಯತೆ ನೀಡಲಾಗುವುದು ಎಂದರು. ಅಡ್ವೋಕೇಟ್ ಜನರಲ್ ಪ್ರಭುಲಿಂಗ್ ಕೆ. ನಾವದಗಿ, 3 ಕೋಟಿ ಲಸಿಕೆಗಳ ಖರೀದಿಗೆ ರಾಜ್ಯ ಸರ್ಕಾರದಿಂದ ಗ್ಲೋಬಲ್ ಟೆಂಡರ್ ಕರೆಯಲಾಗಿದೆ. ಶೇ.70ರಷ್ಟುಎರಡನೇ ಡೋಸ್‌ಗೆ ಮೀಸಲಿಡಬೇಕು ಎಂಬ ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪಾಲನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ವಿವರಣೆ ನೀಡುವುದಾಗಿ ಹೇಳಿದರು.
ಕೇಂದ್ರ ಸರ್ಕಾರಕ್ಕೂ ತರಾಟೆ: ಲಸಿಕೆ ಪೂರೈಕೆ ವಿಚಾರವಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, 1ನೇ ಡೋಸ್ ಪಡೆದುಕೊಂಡವರು 2ನೇ ಡೋಸ್ ತೆಗೆದುಕೊಳ್ಳುವುದು ಜನರ ಹಕ್ಕಲ್ಲವೇ. 19 ಲಕ್ಷ ಜನರಿಗೆ ತಕ್ಷಣ ಲಸಿಕೆಯ ಕೊರತೆಯಿದ್ದು, ಅದನ್ನು ಹೇಗೆ ನೀಗಿಸುತ್ತೀರಿ ಎಂದು ಕೇಂದ್ರ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ, 2ನೇ ಡೋಸ್ ವಿಳಂಬವಾದರೆ 1ನೇ ಡೋಸ್ ನಿಷ್ಫಲವಾಗುವುದಿಲ್ಲ. ಎರಡೂ ಡೋಸ್‌ಗಳ ನಡುವಿನ ಅವಧಿಯನ್ನು ಹೆಚ್ಚಿಸುವ ಬಗ್ಗೆ ತಜ್ಞರ ಸಮಿತಿ ಪರಿಶೀಲಿಸುತ್ತಿದೆ. ಶೇ.70 ರಷ್ಟುಲಸಿಕೆಯನ್ನು 2ನೇ ಡೋಸ್‌ಗೆ ಮೀಸಲಿಡಬೇಕು ಎಂದು ಕೇಂದ್ರ ಸರ್ಕಾರದ ಮಾರ್ಗಸೂಚಿ ಪಾಲಿಸಿದ್ದರೆ ಕರ್ನಾಟಕದಲ್ಲಿ ಇಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ ಎಂದು ವಿವರಣೆ ನೀಡಿದರು.
18 ವರ್ಷ ಮೇಲ್ಪಟ್ಟವರ ಲಸಿಕೆ ಅಭಿಯಾನಕ್ಕೆ ತಾತ್ಕಾಲಿಕ ಬ್ರೇಕ್; ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ! ...
ಮನವಿ ಸಲ್ಲಿಸಿ: ರಾಜ್ಯ ಮತ್ತು ಕೇಂದ್ರ ಸರ್ಕಾರದ ವಾದ ಆಲಿಸಿದ ನ್ಯಾಯಪೀಠ, ಎರಡನೇ ಡೋಸ್ ನೀಡದಿದ್ದರೆ ಜನರು ಆರೋಗ್ಯಯುತವಾಗಿ ಜೀವಿಸುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಲಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ 2ನೇ ಡೋಸ್‌ಗೆ ಎಷ್ಟುಪ್ರಮಾಣದ ವ್ಯಾಕ್ಸಿನ್ ಬೇಕು ಎಂಬುದರ ಬಗ್ಗೆ ಕೇಂದ್ರಕ್ಕೆ ಜಿಲ್ಲಾವಾರು ಅಂಕಿಅಂಶಗಳನ್ನು ಒದಗಿಸಬೇಕು. ಕೇಂದ್ರ ಸರ್ಕಾರ ಕೊರತೆ ಸರಿಪಡಿಸಲು ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ 3 ಮಾರ್ಗಸೂಚಿ ಪತ್ರ ಬರೆದಿದ್ದು, ಅದನ್ನು ರಾಜ್ಯ ಸರ್ಕಾರ ಏಕೆ ಪಾಲಿಸಿಲ್ಲ ಎಂಬುದಕ್ಕೆ ವಿವರಣೆ ನೀಡಬೇಕು. ಹಾಗೆಯೇ, 2 ನೇ ಡೋಸ್ ಲಸಿಕೆಗೆ ಕೈಗೊಂಡ ಕ್ರಮಗಳ ಕುರಿತು ವರದಿ ನೀಡಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಮೇ 19ಕ್ಕೆ ಮುಂದೂಡಿತು.
ಡಿವಿಎಸ್, ರವಿ ವಿರುದ್ಧ ಕೇಸ್ ಹಾಕಿ: ವಕೀಲ ಪತ್ರ
‘ಸ್ಪುಟ್ನಿಕ್’ ಮುಂದಿನ ವಾರ ಮಾರುಕಟ್ಟೆಗೆ
ನವದೆಹಲಿ: ರಷ್ಯಾದ ಸ್ಪುಟ್ನಿಕ್ ಲಸಿಕೆ ಮುಂದಿನ ವಾರ ಭಾರತದ ಮಾರುಕಟ್ಟರಗೆ ಬಿಡುಗಡೆಯಾಗಲಿದೆ. ಇದರ ಜೊತೆಗೆ ಹೊಸ ದೇಶೀ ಲಸಿಕೆಗಳಾದ ‘ಝೈಕೋವ್-ಡಿ’ ಹಾಗೂ ‘ಬಯೋಲಾಜಿಕಲ್ ಇ’ ಕ್ರಮವಾಗಿ ಜೂನ್ ಹಾಗೂ ಆಗಸ್ಟ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.
5 ತಿಂಗಳಲ್ಲಿ ಇಡೀ ದೇಶಕ್ಕೇ ಲಸಿಕೆ ರೆಡಿ
ನವದೆಹಲಿ: ದೇಶದಲ್ಲಿ ಕೊರೋನಾ ಲಸಿಕೆಗೆ ತೀವ್ರ ಹಾಹಾಕಾರ ಎದ್ದಿರುವಾಗಲೇ ಮುಂದಿನ 5 ತಿಂಗಳಿನಲ್ಲಿ ದೇಶದಲ್ಲಿ 210 ಕೋಟಿ ಡೋಸ್‌ಗೂ ಅಧಿಕ ಲಸಿಕೆ ಲಭ್ಯವಾಗಲಿದ್ದು, ದೇಶದ ಎಲ್ಲರಿಗೂ ಸಾಕಾಗುವಷ್ಟುಲಸಿಕೆ ದೊರೆಯಲಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ