ಬೀದಿ ನಾಯಿಗಳ ಸಂತಾನಹರಣ ವಿಚಾರಕ್ಕೆ ಸಂಬಂಧಿಸಿದಂತೆ ‘ಪ್ರಾಣಿಗಳ ಜನನ ನಿಯಂತ್ರಣ (ನಾಯಿ) ನಿಯಮ’ಗಳ ಜಾರಿ ಮಾಡಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಗೆ ಉತ್ತರಿಸದ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ.
ಬೆಂಗಳೂರು (ಅ.08): ಬೀದಿ ನಾಯಿಗಳ ಸಂತಾನಹರಣ ವಿಚಾರಕ್ಕೆ ಸಂಬಂಧಿಸಿದಂತೆ ‘ಪ್ರಾಣಿಗಳ ಜನನ ನಿಯಂತ್ರಣ (ನಾಯಿ) ನಿಯಮ’ಗಳ ಜಾರಿ ಮಾಡಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಗೆ ಉತ್ತರಿಸದ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. ಈ ಕುರಿತು ವಕೀಲ ಎಲ್.ರಮೇಶ್ ನಾಯಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯ ಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಇದೊಂದು ಸೂಕ್ಷ್ಮ ವಿಚಾರ. ಇಂತಹ ವಿಚಾರದಲ್ಲಿ ಉತ್ತರಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಸರ್ಕಾರದ ಧೋರಣೆ ಸರಿಯಲ್ಲ.
ಹಾಗಾಗಿ, ಮೂರು ವಾರಗಳಲ್ಲಿ ಅರ್ಜಿಗೆ ಸರ್ಕಾರ ಸಮರ್ಪಕ ಉತ್ತರ ಕೊಡಬೇಕು. ತಪ್ಪಿದರೆ ನ್ಯಾಯಾಲಯವೇ ಸೂಕ್ತ ಆದೇಶ ಹೊರಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ನ.15ಕ್ಕೆ ಮುಂದೂಡಿತು. ಇದಕ್ಕೂ ಮುನ್ನ ಅರ್ಜಿಗೆ ಉತ್ತರಿಸಲು ಸರ್ಕಾರದ ಪರ ವಕೀಲರು ಕಾಲಾವಕಾಶ ಕೋರಿದರು. ಇದರಿಂದ ಅಸಮಧಾನಗೊಂಡ ನ್ಯಾಯಪೀಠ, ಅರ್ಜಿಗೆ ಉತ್ತರಿಸುವುದಾಗಿ ತಿಳಿಸಿ ಈ ವರ್ಷದ ಜನವರಿಯಲ್ಲಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಕೊನೆಯ ಬಾರಿಗೆ ಕಾಲಾವಕಾಶ ಕೇಳಿದ್ದರು. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸರ್ಕಾರದ ಈ ನಡೆ ಒಪ್ಪುವುದಿಲ್ಲ ಎಂದು ನುಡಿಯಿತು.
ಅಲ್ಲದೆ, ಬೀದಿ ನಾಯಿಗಳಿಗೆ ಆಹಾರ ಪೂರೈಸುವುದು ಉತ್ತಮ ಕಾರ್ಯವಾಗಿದ್ದು, ನಿಗದಿತ ಸ್ಥಳದಲ್ಲಿ ಪೂರೈಸುವುದು ಒಳ್ಳೆಯ ಕ್ರಮ. ಇಲ್ಲವಾದರೆ ದಾರಿಹೋಕರು, ಆಯಾ ಪ್ರದೇಶದ ನಿವಾಸಿಗಳಿಗೆ ತೊಂದರೆ ಉಂಟಾಗುತ್ತದೆ. ಪ್ರಾಣಿಗಳ ಬಗ್ಗೆ ಅನುಕಂಪ ತೋರುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ, ಅವ್ಯವಸ್ಥೆ ಸೃಷ್ಟಿಯಾಗಬಾರದು ಎನ್ನುವುದು ನ್ಯಾಯಾಲಯದ ಕಳಕಳಿಯಾಗಿದೆ ಎಂದು ನ್ಯಾಯಪೀಠ ಹೇಳಿತು.
ಲಂಚ ಪಡೆದ ಹಣದಲ್ಲಿ ಬಿಟ್ ಕಾಯಿನ್ ಖರೀದಿಸಿದ್ದ ಬಿಎಂಟಿಸಿ ಅಧಿಕಾರಿಗಳು!
ಹಲವು ಸ್ಥಳಗಳಲ್ಲಿ ಬೆಳಗಿನ ಸಮಯದಲ್ಲಿ ಶಾಲೆಗೆ ಹೋಗುವ ಮಕ್ಕಳಿಗೂ ಇಂತಹ ಬೆಳವಣಿಗೆಯಿಂದ ತೊಂದರೆಯಾಗುವುದನ್ನು ತಳ್ಳಿ ಹಾಕುವಂತಿಲ್ಲ. ಆದ್ದರಿಂದ ಈ ವಿಚಾರದಲ್ಲಿ ಬೀದಿ ನಾಯಿಗಳು ಸೇರಿದಂತೆ ಇತರೆ ಪ್ರಾಣಿ-ಪಕ್ಷಿಗಳ ಬಗ್ಗೆ ಕಾಳಜಿ ತೋರುವವರು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಗಳನ್ನು ಪಾಲಿಸಬೇಕು. ನಾಗರಿಕರು ಸರ್ಕಾರದೊಂದಿಗೆ ಸೂಕ್ತವಾಗಿ ಸಹಕರಿಸಬೇಕು ಎಂದು ಹೇಳಿತು.