
ಬೆಂಗಳೂರು (ಮೇ.15): ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರ ವಿರುದ್ಧ ಕೃತಕ ಬುದ್ದಿಮತ್ತೆ (ಎಐ) ಬಳಕೆ ಮಾಡಿ ಮಾನಹಾನಿ ಉಂಟು ಮಾಡುವ ಫೋಟೋ, ವಿಡಿಯೋ ಮತ್ತು ಕಂಟೆಂಟ್ ಅನ್ನು ಸಾಮಾಜಿಕ ಜಾಲತಾಣಗಳಿಂದ ಒಂದು ವಾರದಲ್ಲಿ ತೆಗೆಯಲು ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ನಿರ್ದೇಶಕ ಶೀನಪ್ಪ, ನಂದೀಶ್ ಕುಮಾರ್ ಜೈನ್, ವೀರೇಂದ್ರ ಹೆಗ್ಗಡೆ ಸಹೋದರ ಪುತ್ರ ಡಿ.ನಿಶ್ಚಲ್ ಮತ್ತು ಪಿ.ಸುನೀಲ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ಸರ್ಕಾರಕ್ಕೆ ಈ ಸೂಚನೆ ನೀಡಿ ಅರ್ಜಿ ಇತ್ಯರ್ಥಪಡಿಸಿದೆ.
ಒಂದು ವಾರದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರೀಯ ವಿಭಾಗದ ಸಿಇಎನ್ ಪೊಲೀಸರು, ಎಲ್ಲಾ ಆಕ್ಷೇಪಾರ್ಹವಾದ ಫೋಟೋ, ವಿಡಿಯೋ ಮತ್ತು ಕಂಟೆಂಟ್ ಅನ್ನು ಕಾನೂನು ಅನ್ವಯ ತೆರವುಗೊಳಿಸಲು ಸಾಮಾಜಿಕ ಮಾಧ್ಯಮಗಳಾದ ಗೂಗಲ್, ಮೆಟಾ, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಂಗೆ ನಿರ್ದೇಶಿಸಬೇಕು ಎಂದು ಪೀಠ ಆದೇಶದಲ್ಲಿ ಸೂಚಿಸಿದೆ.
ಅರ್ಜಿದಾರರ ಪರ ವಕೀಲ ಎಸ್.ರಾಜಶೇಖರ್ ಅವರು, ವೀರೇಂದ್ರ ಹೆಗ್ಗಡೆ ಕುಟುಂಬದವರು ಯಾವುದೇ ಕ್ರಿಮಿನಲ್ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಅದಾಗ್ಯೂ, ಅವರ ವಿರುದ್ಧ ಮಾನಹಾನಿ ಮತ್ತು ತಿರುಚಿದ ಕಂಟೆಂಟ್ ಆನ್‌ಲೈನ್ ಮೂಲಕ ನಿರಂತರವಾಗಿ ಹಂಚಿಕೆ ಮಾಡಲಾಗುತ್ತಿದೆ. ಹೆಗ್ಗೆಡೆ ಮತ್ತವರ ಕುಟುಂಬ ತಮ್ಮದಲ್ಲದ ತಪ್ಪಿಗೆ ಮುಜುಗರ ಎದುರಿಸುವಂತಾಗಿದೆ. ಹಾಗಾಗಿ, ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಕೇವಲ ಮಧ್ಯಸ್ಥಿಕೆ ಸಂಸ್ಥೆಗಳಾಗಿವೆ. ಇಂಥ ಕಂಟೆಂಟ್ ಹಂಚಿಕೆ ಮಾಡದಂತೆ ನಿರ್ಬಂಧಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ರಾಜ್ಯ ಸರ್ಕಾರ ಮತ್ತು ಸಿಇಎನ್ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿದರು.
ಸರ್ಕಾರದ ಪರ ವಕೀಲರು, ಸೂಕ್ತ ಕಾಲಾವಕಾಶ ನೀಡಿದರೆ ಸಕ್ಷಮ ಪ್ರಾಧಿಕಾರ ಅರ್ಜಿದಾರರ ಮನವಿಯ ಆ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ