
ಬೆಂಗಳೂರು(ಮಾ.09): ಪತಿಯಿಂದ ದೂರವಾಗಿರುವ ಪತ್ನಿಯ ವಾಸ್ತವ್ಯಕ್ಕೆ ಪತಿ ಹಾಗೂ ಆತನ ಕುಟುಂಬದ ಇತರೆ ಸದಸ್ಯರು ವಾಸಿಸುತ್ತಿರುವ ಮನೆಯಲ್ಲಿಯೇ ಪ್ರತ್ಯೇಕ ಕೊಠಡಿ ಕಲ್ಪಿಸುವಂತೆ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ತಿದ್ದುಪಡಿ ಮಾಡಿರುವ ಹೈಕೋರ್ಟ್, ಪರ್ಯಾಯ ವಸತಿ ವ್ಯವಸ್ಥೆ ಮಾಡಿಕೊಳ್ಳಲು ಮಾಸಿಕ 5 ಸಾವಿರ ರು. ಪಾವತಿಸುವಂತೆ ಪತಿಗೆ ಆದೇಶಿಸಿದೆ.
ಬೀದರ್ ಜಿಲ್ಲೆಯ ಸುನಿಲ್‌ಕುಮಾರ್, ಮೊದಲನೆ ಪತ್ನಿ ಹಾಗೂ ಕುಟುಂಬದ ಇತರೆ ಸದಸ್ಯರು ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.
ಮಗು ಭೇಟಿ ಅವಕಾಶ ನೀಡುವ ಹಕ್ಕು ಆಯೋಗಕ್ಕಿಲ್ಲ: ಹೈಕೋರ್ಟ್
ಪ್ರಕರಣದಲ್ಲಿ ಅರ್ಜಿದಾರ ತನ್ನ ಮೊದಲನೇ ಪತ್ನಿ ಹಾಗೂ ಕುಟುಂಬದ ಇತರೆ ಸದಸ್ಯರೊಂದಿಗೆ ಮನೆಯೊಂದರಲ್ಲಿ ನೆಲೆಸಿದ್ದಾರೆ. ಸುನಿಲ್‌ಕುಮಾರ್ ಅವರು ಎಲಿಜಬೆತ್ ಎಂಬಾಕೆಯನ್ನು ಮದುವೆಯಾಗಿದ್ದು, ಸದ್ಯ ಆಕೆಯಿಂದ ದೂರವಾಗಿದ್ದಾರೆ. ‘ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣಾ ಕಾಯ್ದೆ’ ಅಡಿ ಎಲಿಜಿಬೆತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯವು 6 ಸಾವಿರ ರು. ಜೀವನಾಂಶ ಪಾವತಿಸಲು ಪತಿಗೆ ಆದೇಶಿಸುವ ಜೊತೆಗೆ ಪತ್ನಿ ಮತ್ತವರ ಕುಟುಂಬ ಸದಸ್ಯರು ನೆಲೆಸಿರುವ ಮನೆಯಲ್ಲಿಯೇ ವಾಸಿಸಲು ಎಲಜಿಬೆತ್‌ಗೂ ಒಂದು ಕೊಠಡಿ ಕಲ್ಪಿಸಲು ವಿಚಾರಣಾ ನ್ಯಾಯಾಲಯ ನಿರ್ದೇಶಿಸಿದೆ. ಆದರೆ, ವಿಚಾರಣಾ ನ್ಯಾಯಾಲಯದ ನಿರ್ದೇಶನದಂತೆ ಎಲಿಜಬೆತ್ ಅವರು ಪತ್ನಿ ಮತ್ತವರ ಕುಟುಂಬ ಸದಸ್ಯರೊಂದಿಗೆ ಒಂದೇ ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ವಾಸ ಮಾಡುವುದು ಪ್ರಯೋಗಿಕವಾಗಿ ಕಾರ್ಯಸಾಧುವಲ್ಲ. ಇದರಿಂದ ಕುಟುಂಬದ ಇತರೆ ಸದಸ್ಯರ ಜೊತೆಗೆ ಅಸಮಾಧಾನ ಏರ್ಪಟ್ಟು, ಸಿವಿಲ್ ಮತ್ತು ಕ್ರಿಮಿನಲ್ ವ್ಯಾಜ್ಯಕ್ಕೆ ಕಾರಣವಾಗಬಹುದು. ಆದ್ದರಿಂದ ಆಕೆ ಪ್ರತ್ಯೇಕ ಸ್ಥಳದಲ್ಲಿ ವಾಸ ಮಾಡುವುದು ಸೂಕ್ತವಾಗುತ್ತದೆ. ಅದಕ್ಕಾಗಿ ಪತಿ ಆಕೆಗೆ ಮಾಸಿಕ 5 ಸಾವಿರ ರು. ಪಾವತಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಅಲ್ಲದೆ, ಮಾಸಿಕ ಐದು ಸಾವಿರ ರು. ಪಾವತಿಯಿಂದ ಒಂದು ಕೊಠಡಿಗಿಂತ ಹೆಚ್ಚಿನ ಸ್ಥಳಾವಕಾಶವಿರುವ ಜಾಗ ಹುಡುಕಿಕೊಳ್ಳಲು ಎಲಿಜಿಬೆತ್‌ಗೆ ಸಾಧ್ಯವಾಗುತ್ತದೆ. ಆದ್ದರಿಂದ ವಿಚಾರಣಾ ನ್ಯಾಯಾಲಯದ ಆದೇಶದಂತೆ ಎಲಿಜಿಬೆತ್ ಅವರಿಗೆ ಮಾಸಿಕ 6 ಸಾವಿರ ರು. ಜೀವನಾಂಶ ನೀಡಬೇಕು. ಜೊತೆಗೆ ಚಿಟಗುಪ್ಪ ಅಥವಾ ಬೀದರ್‌ನಲ್ಲಿ ಎಲಿಜಿಬೆತ್ ತನ್ನಿಷ್ಟದಂತೆ ಪ್ರತ್ಯೇಕ ವಸತಿ ಸೌಲಭ್ಯ ಹೊಂದಲು ಹೆಚ್ಚುವರಿಯಾಗಿ 5 ಸಾವಿರ ರು. ನೀಡಬೇಕು ಎಂದು ಪತಿಗೆ ಆದೇಶಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ