ಮನೆ ಬಳಿ ಕಾರಲ್ಲಿ ಡ್ರಗ್ಸ್‌ ಸಿಕ್ಕರೆ ಮನೆ ಮಾಲೀಕ ಹೊಣೆ ಅಲ್ಲ: ಕರ್ನಾಟಕ ಹೈಕೋರ್ಟ್

Published : May 25, 2026, 06:31 AM IST
Karnataka High Court

ಸಾರಾಂಶ

ಮನೆ ಮುಂದೆ ನಿಲ್ಲಿಸಿದ್ದ ಸ್ನೇಹಿತರ ವಾಹನದಲ್ಲಿ ಮಾದಕ ವಸ್ತುಗಳು ಪತ್ತೆಯಾದ ಕಾರಣಕ್ಕೆ ಬಂಧಿತನಾಗಿದ್ದ ಮನೆ ಮಾಲೀಕನಿಗೆ ಹೈಕೋರ್ಟ್ ಜಾಮೀನು ನೀಡಿದೆ. ಎನ್‌ಡಿಪಿಎಸ್‌ ಕಾಯ್ದೆಯಡಿ ಅಪರಾಧಕ್ಕೆ ಜಾಗ ನೀಡಿದ್ದಾರೆ ಎಂದು ಮಾಲೀಕನ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ವೆಂಕಟೇಶ್‌ ಕಲಿಪಿ

ಬೆಂಗಳೂರು: ಮನೆ ಮುಂಭಾಗದಲ್ಲಿ ನಿಲುಗಡೆ ಮಾಡಿದ ಬೇರೊಬ್ಬರ ವಾಹನದಲ್ಲಿ ಮಾದಕ ಪದಾರ್ಥಗಳು ದೊರಕಿದೆ ಎಂಬ ಕಾರಣಕ್ಕೆ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ಕಾಯ್ದೆಯ (ಎನ್‌ಡಿಪಿಎಸ್‌) ನಿಬಂಧನೆಗಳಿಗೆ ಒಳಪಡುವ ಅಪರಾಧ ಕೃತ್ಯ ಎಸಗಲು ಅನುಕೂಲ ಮಾಡಿಕೊಟ್ಟ ಆರೋಪ ಮೇಲೆ ಮನೆ ಮಾಲೀಕನ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಹುಟ್ಟುಹಬ್ಬದ ಪಾರ್ಟಿ ವೇಳೆ ಮನೆ ಮುಂಭಾಗ ನಿಲುಗಡೆ ಮಾಡಿದ್ದ ಸ್ನೇಹಿತರ ಕಾರು ಹಾಗೂ ಬೈಕ್‌ನಲ್ಲಿ ಮಾದ‌ಕ ಪದಾರ್ಥಗಳು ದೊರಕಿತು ಎಂಬ ಕಾರಣಕ್ಕೆ ಬಂಧನಕ್ಕೆ ಒಳಗಾಗಿದ್ದ ಮನೆ ಮಾಲೀಕನಿಗೆ ಜಾಮೀನು ನೀಡಿದ ಹೈಕೋರ್ಟ್ ಈ ಆದೇಶ ಮಾಡಿದೆ‌.

ಜಾಮೀನು ಕೋರಿ ಚಾಮರಾಜನಗರ ಜಿಲ್ಲೆಯ ಹರವನಪುರ ನಿವಾಸಿ ಫಯಾಜ್ ಖಾನ್ ಎಂಬುವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ಪೀಠ, ಪ್ರಕರಣದಲ್ಲಿ ಪೊಲೀಸರ (ಪ್ರಾಸಿಕ್ಯೂಷನ್) ಪ್ರಕಾರವೇ ಅರ್ಜಿದಾರರ ಮನೆಯಲ್ಲಿ ಯಾವುದೇ ಮಾದಕ ವಸ್ತುಗಳು ದೊರೆತಿಲ್ಲ. ಅರ್ಜಿದಾರರ ಮನೆ ಮುಂದೆ ನಿಲುಗಡೆ ಮಾಡಿದ್ದ ಕಾರು/ಬೈಕಿನಲ್ಲಿ ದೊರೆಕಿದೆ. ಹಾಗಾಗಿ, ಪ್ರಕರಣದಲ್ಲಿ ಅರ್ಜಿದಾರರು ಅಮಾಯಕ ಎಂಬ ವಾದದಲ್ಲಿ ಬಲವಿದೆ ಎಂದು ನುಡಿದಿದೆ.

ಎನ್‌ಡಿಪಿಎಸ್‌ ಕಾಯ್ದೆಯ ಸೆಕ್ಷನ್ 25ರ ಪ್ರಕಾರ ಯಾವುದೇ ಮನೆ, ಕೊಠಡಿ, ಆವರಣ, ಪ್ರಾಣಿ, ಮಾಲೀಕ ಅಥವಾ ಸ್ಥಳದ ಮಾಲೀಕರು, ಅನುಭೋಗದಾರರು ಅಥವಾ ಅದರ ಮೇಲೆ‌ ನಿಯಂತ್ರಣ‌ ಹೊಂದಿರುವ ಅಥವಾ ಬಳಕೆ ಮಾಡುತ್ತಿರುವ ವ್ಯಕ್ತಿ, ಈ ಕಾಯ್ದೆಯಡಿಯ ಯಾವುದೇ ಅಪರಾಧವನ್ನು ಕಾರ್ಯರೂಪಕ್ಕೆ ತರಲು ಸಂಪೂರ್ಣ ಅರಿವಿನೊಂದಿಗೆ ಇತರ ವ್ಯಕ್ತಿಗೆ ಅನುಮತಿಸಿದರೆ‌ ಶಿಕ್ಷಾರ್ಹರಾಗಿರುತ್ತಾರೆ. ಈ ಅಂಶವು ದೂರಿನಲ್ಲಿಲ್ಲ ಎಂದು ಪೀಠ ಹೇಳಿದೆ

ಅಲ್ಲದೆ, ತಮ್ಮ ಆಸ್ತಿ (ಮನೆ) ಬಳಿ ನಿಲ್ಲಿಸಲಾದ ವಾಹನದಲ್ಲಿ ನಿಷಿದ್ಧ (ಮಾದಕ) ವಸ್ತು ಕಂಡು‌ ಬಂದಿರುವುದರಿಂದ ಪೊಲೀಸರು ಅರ್ಜಿದಾರರ ವಿರುದ್ಧ ಕಾಯ್ದೆಯ ಸೆಕ್ಷನ್ 25 ರ ನಿಬಂಧನೆಯ ಅನುಸಾರ ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದ ಪೀಠ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ವಿವರ:

ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅರ್ಜಿದಾರರಿಗೆ ಸೇರಿದ ಮನೆಯಲ್ಲಿ‌ 2026ರ ಏ.3ರಂದು ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ್ದರು. ಖಚಿತ ಆಧಾರದ ಮೇಲೆ ಕೊಳ್ಳೇಗಾಲ ಸರ್ಕಲ್ ಇನ್ಸ್‌ಪೆಕ್ಟರ್ ಅವರು ಪಾರ್ಟಿ ನಡೆಯುತ್ತಿದ್ದ ಮನೆಯನ್ನು ಶೋಧ ನಡೆಸಿದ್ದರು. ಆದರೆ ಮನೆಯಲ್ಲಿ ಯಾವುದೇ ಮಾದಕ ವಸ್ತುಗಳು ದೊರೆತಿರಲಿಲ್ಲ.

ಆದರೆ, ಶ್ವಾನಗಳ ನೆರವಿಂದ ಶೋಧ ನಡೆಸಿದಾಗ ಮನೆಯ ಮುಂಭಾಗ ನಿಲ್ಲಿಸಲಾಗಿದ್ದ ಅರ್ಜಿದಾರರ ಸ್ನೇಹಿತ ಹಾಗೂ ಪ್ರಕರಣ ಮೊದಲನೇ ಆರೋಪಿಗೆ ಸೇರಿದ ಕಾರಿನಲ್ಲಿ ಮಾದಕ ವಸ್ತುಗಳಾದ ಚರಸ್, ಬ್ರೌನ್ ಪೌಡರ್, ವೈಟ್ ಪೌಡರ್, ಮತ್ತು ಎರಡನೇ ಆರೋಪಿಯ ದ್ವಿಚಕ್ರ ವಾಹನದಲ್ಲಿ ಗಾಂಜಾ ದೊರಕಿತ್ತು. ಅವುಗಳನ್ನು ಇಟ್ಟುಕೊಳ್ಳಲು ಆರೋಪಿಗಳಲ್ಲಿ ಯಾವುದೇ ಪರವಾನಗಿ ಇರಲಿಲ್ಲ.

ಇದರಿಂದ‌ ಪೊಲೀಸರು ಪಾರ್ಟಿಯಲ್ಲಿ ಭಾಗವಹಿಸಿದ್ದ 50-60 ಜನರಿಗೆ ಮೂತ್ರ ಹಾಗೂ ಡ್ರಗ್ ಪರೀಕ್ಷೆ ನಡೆಸಿದ್ದರು. ಅರ್ಜಿದಾರರನ್ನು ಬಂಧಿಸಿ, ಪ್ರಕರಣದ ನಾಲ್ಕನೇ ಆರೋಪಿಯನ್ನಾಗಿಸಿದ್ದರು. ಎನ್‌ಡಿಪಿಎಸ್‌ ಕಾಯ್ದೆಯ ವಿವಿಧ ಆರೋಪದ‌ ಮೇಲೆ ಸರ್ಕಲ್ ಇನ್ಸ್‌ಪೆಕ್ಟರ್ ಅವರ ದೂರಿನ ಮೇರೆಗೆ ಕೊಳ್ಳೆಗಾಲ ಗ್ರಾಮೀಣ ಠಾಣಾ‌ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ಪ್ರಕರಣ ಜಿಲ್ಲಾ‌ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರನ ಪರ ವಕೀಲರು, ಅರ್ಜಿದಾರಿಗೆ ಸೇರಿದ ಮನೆಯಲ್ಲಿ ಯಾವುದೇ ಮಾದಕ ವಸ್ತು ಸಿಕ್ಕಿರಲಿಲ್ಲ. ‌ಮೊದಲನೆ ಹಾಗೂ ಎರಡನೇ ಆರೋಪಿಯ ಕಾರು/ಬೈಕ್ ನಲ್ಲಿ ನಿಷಿದ್ಧ ವಸ್ತುಗಳು ದೊರೆತಿವೆ. ಇದರಿಂದ ಎನ್‌ಡಿಪಿಎಸ್ ಕಾಯ್ದೆಯಡಿ ವ್ಯಾಪ್ತಿಗೆ ಅರ್ಜಿದಾರರನ್ನು ತರಲಾಗುವುದಿಲ್ಲ. ಆದ್ದರಿಂದ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.

ಸರ್ಕಾರದ ಪರ ವಕೀಲರು, ಪ್ರಕರಣದಲ್ಲಿ ಬಂಧಿತ 1ರಿಂದ 3ನೇ ಆರೋಪಿಗಳು ಅರ್ಜಿದಾರರಿಗೆ ಸೇರಿದ ಸ್ಥಳದಲ್ಲಿ ಹುಟ್ಟುಹಬ್ಬ ಆಚರಿಸಿದ್ದಾರೆ. ಹಾಗಾಗಿ, ಇದು ಎನ್‌ಡಿಪಿಎಸ್ ಕಾಯ್ದೆಯಡಿಯ ಅಪರಾಧದ ವ್ಯಾಪ್ತಿಗೆ ಬರಲಿದೆ. ಆದ್ದರಿಂದ ಜಾಮೀನು ಅರ್ಜಿ ತಿರಸ್ಕರಿಸಬೇಕು ಎಂದು ಮನವಿ ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜವಾಬ್ದಾರಿ ಸರ್ಕಾರವಾಗಿ ಎಸ್‌ಐಆರ್‌ ಜಾಗೃತಿ ಮೂಡಿಸುತ್ತಿದ್ದೇವೆ: ಡಿಸಿಎಂ ಡಿಕೆ ಶಿವಕುಮಾರ್
Bengaluru ಟೌನ್ ಹಾಲ್‌ ಬಳಿ ಸುಳಿಯದ ಕಾಕ್ರೋಚ್ ಜನತಾ ಪಕ್ಷದ ಕಾರ್ಯಕರ್ತರು; ಖಾಕಿ ಎಚ್ಚರಿಕೆ