ಮಂಕುತಿಮ್ಮನ ಕಗ್ಗ ಉಲ್ಲೇಖಿಸಿ ಬುದ್ಧಿ ಹೇಳಿದ ಹೈಕೋರ್ಟ್‌!

By Web DeskFirst Published Dec 1, 2018, 8:19 AM IST
Highlights

ಕರ್ನಾಟಕ ಹೈಕೋರ್ಟ್ ತಾಯಿಯನ್ನು ನಿರ್ಲಕ್ಷಿಸಿ ಆಸ್ತಿಗಾಗಿ ಹೋರಾಡಿದ ಮಗಳಿಗೆ ಬುದ್ಧಿ ಮಾತು ಹೇಳಿದ್ದು, ಈ ವೇಳೆ ಡಿವಿಜಿಯವರ ಮಂಕುತಿಮ್ಮನ ಕಗ್ಗವನ್ನು ಉಲ್ಲೇಖಿಸಿದ್ದು ಕುತೂಹಲಕಾರಿ ವಿಚಾರವಗಿದೆ.

ಬೆಂಗಳೂರು[ಡಿ.01]: ದಯೆಗಿಂತ ದೊಡ್ಡ ಧರ್ಮ ಮತ್ತೊಂದಿಲ್ಲ. ತಂದೆ ತಾಯಿಗಿಂತಲೂ ದೊಡ್ಡ ದೇವರಿಲ್ಲ. ಕ್ರೋಧಕ್ಕಿಂತಲೂ ದೊಡ್ಡ ಶತ್ರುವಿಲ್ಲ. ಮರ್ಯಾದೆಗಿಂತಲೂ ದೊಡ್ಡ ಸಂಪತ್ತು ಇಲ್ಲ. ಮಕ್ಕಳು ಪೋಷಕರ ತ್ಯಾಗ ಮರೆಯಬಾರದು ಹಾಗೂ ಅವರ ಮೇಲಿನ ಗೌರವ ಕಳೆಯಬಾರದು. ಇಳಿ ವಯಸ್ಸಿನಲ್ಲಿ ಪೋಷಕರನ್ನು ಶ್ರದ್ಧೆಯಿಂದ ಆರೈಕೆ ಮಾಡಬೇಕು’

ಪ್ರಕರಣವೊಂದರಲ್ಲಿ 82 ವರ್ಷದ ವೃದ್ಧೆ ತಾಯಿ ಆರೈಕೆ ಕಡೆಗಣಿಸಿ, ಕೇವಲ ತಾಯಿಯ ಸ್ಥಿರಾಸ್ತಿ ಮೇಲೆ ಹಕ್ಕು ಸಾಧಿಸುವುದಕ್ಕಾಗಿ ಕಾನೂನು ಹೋರಾಟ ಮಾಡುತ್ತಿದ್ದ ಮಗಳಿಗೆ ಹೈಕೋರ್ಟ್‌ ಹೇಳಿದ ಬುದ್ಧಿಮಾತು ಇದು.

ಈ ಹಿಂದೆ ನೀಡಿದ್ದ ಸ್ಥಿರಾಸ್ತಿ ದಾನಪತ್ರ ಹಿಂಪಡೆದ ತಾಯಿ ಕ್ರಮ ಪುರಸ್ಕರಿಸಿದ್ದ ಮೈಸೂರು ಜಿಲ್ಲಾಧಿಕಾರಿಯ ಆದೇಶ ರದ್ದು ಕೋರಿ ಎನ್‌.ಡಿ.ವನಮಾಲಾ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವೀರಪ್ಪ ಅವರಿದ್ದ ಏಕಸದಸ್ಯ ಪೀಠ, ಜಿಲ್ಲಾಧಿಕಾರಿಯ ಆದೇಶ ಎತ್ತಿಹಿಡಿದು ಅರ್ಜಿ ವಜಾಗೊಳಿಸಿತು.

ಅರ್ಜಿದಾರರ ನಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್‌, ಪ್ರೀತಿ ಮತ್ತು ವಿಶ್ವಾಸ ಮಾತ್ರವೇ ಮಕ್ಕಳು ಹಾಗೂ ಪೋಷಕರು ನಡುವಿನ ಬಾಂಧವ್ಯವನ್ನು ಭದ್ರವಾಗಿಡುತ್ತದೆ. ಮಕ್ಕಳು ಈ ದೇಶದ ಆಸ್ತಿಯಾಗಿದ್ದು, ಅವರಿಗೆ ಪೋಷಕರು ಸೂಕ್ತ ಶಿಕ್ಷಣ ಒದಗಿಸಿ ಹಾಗೂ ಹಿರಿಯರ ಬಗ್ಗೆ ಗೌರವ ತೋರುವಂತ ನಿಟ್ಟಿನಲ್ಲಿ ಬೆಳೆಸಬೇಕು. ಪೋಷಕರಿಲ್ಲದೆ ಮಕ್ಕಳು ಭೂಮಿ ಮೇಲೆ ಹುಟ್ಟಿಬರುವುದಿಲ್ಲ. ಪೋಷಕರು ಮಕ್ಕಳನ್ನು ಸಾಕಿ, ಶಿಕ್ಷಣ ನೀಡಿ ಬೆಳೆಸುತ್ತಾರೆ. ಇಳಿವಯಸ್ಸಿನಲ್ಲಿ ಪೋಷಕರನ್ನು ಮಕ್ಕಳು ಚೆನ್ನಾಗಿ ಆರೈಕೆ ಮಾಡಬೇಕೇ ಹೊರತು ಕಡೆಗಣಿಸಬಾರದು. ಮಕ್ಕಳು ಪೋಷಕರ ತ್ಯಾಗವನ್ನು ಹಾಗೂ ಮುಂದೊಂದು ದಿನ ತಮಗೂ ವೃದ್ಧಾಪ್ಯ ಬರುತ್ತದೆ ಎಂಬ ಸತ್ಯವನ್ನು ಮರೆಯಬಾರದು ಎಂದು ಅಭಿಪ್ರಾಯಪಟ್ಟಿತು.

ಕಗ್ಗದ 174ನೇ ಭಾಗ ಉಲ್ಲೇಖ

ಕನ್ನಡದ ಖ್ಯಾತ ಸಾಹಿತಿ ಡಿ.ವಿ.ಗುಂಡಪ್ಪ ಅವರ ಪ್ರಸಿದ್ಧ ಮಂಕುತಿಮ್ಮನ ಕಗ್ಗದ 174ನೇ ಭಾಗವಾದ ‘ತಂದೆ ಮಕ್ಕಳಿಗೆ ಹದಗೆಟ್ಟುದನು ಕಾಣೆಯಾ, ಹೊಂದಿರುವರವರ್‌ ಅಹಂತೆಯು ಮೊಳೆಯುವತನಕ, ತಂದೆಯಾರ್‌ ಮಕ್ಕಳಾರ್‌ ನಾನೆಂಬುದೆದ್ದುನಿಲೆ, ಬಂಧ ಮುರಿವುದು ಬಳಿಕ ಮಂಕುತಿಮ್ಮ’ ಎಂದು ಆದೇಶದಲ್ಲಿ ಉಲ್ಲೇಖಿಲಾಗಿದೆ. ಪ್ರತಿಯೊಬ್ಬರ ಮನಸ್ಸಲ್ಲೂ ಅಹಂಕಾರ ಎದ್ದು ನಿಂತರೆ ತಂದೆ ಯಾರೋ, ಮಕ್ಕಳಾರೋ, ಈ ಸಂಬಂಧಗಳ ಬಂಧವೇ ಮುರಿದು ಬೀಳುತ್ತದೆ ಎಂಬುದು ಈ ಕಗ್ಗದ ಅರ್ಥವಾಗಿದೆ.

click me!