ಕ್ರಿಮಿನಲ್‌ ಕೇಸ್‌ ಭೀತಿ: ಅಜೀಂ ಪ್ರೇಮ್‌ಜಿ ನಿರಾಳ

By Kannadaprabha NewsFirst Published Jan 21, 2021, 7:41 AM IST
Highlights

ಇಂಡಿಯಾ ಅವೇಕ್‌ ಫಾರ್‌ ಟ್ರಾನ್ಸ್‌ಪರೆನ್ಸಿ ಸಂಸ್ಥೆ ಸಲ್ಲಿಸಿದ್ದ ಅರ್ಜಿ| ದೂರಿಗೆ ಆರ್‌ಬಿಐ ಉತ್ತರ ನೀಡಿದ್ದರೂ ಅರ್ಜಿದಾರರು ಅಧೀನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು| 

ಬೆಂಗಳೂರು(ಜ.21): ಭಾರತೀಯ ರಿಸರ್ವ್‌ ಬ್ಯಾಂಕ್‌ ಕಾಯ್ದೆಯಡಿ ವಿಪ್ರೋ ಸಂಸ್ಥೆಯ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ವಿರುದ್ಧ ಕ್ರಿಮಿನಲ್‌ ಕ್ರಮ ಕೈಗೊಳ್ಳಲು ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.
ಈ ಕುರಿತು ಇಂಡಿಯಾ ಅವೇಕ್‌ ಫಾರ್‌ ಟ್ರಾನ್ಸ್‌ಪರೆನ್ಸಿ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರು ಈ ಆದೇಶ ನೀಡಿದರು.

ಆರ್‌ಬಿಐ ಕಾಯಿದೆ ಸೆಕ್ಷನ್‌ 451 ಎ ಪ್ರಕಾರ ನೋಂದಣಿ ಮಾಡಿಸದೆ ಬ್ಯಾಂಕಿಂಗೇತರ ಹಣಕಾಸು ವಹಿವಾಟು (ಎನ್‌ಬಿಎಫ್‌ಸಿ)ನಡೆಸುವಂತಿಲ್ಲ. ಆದರೆ, ಅಜೀಂ ಪ್ರೇಮ್‌ ಜಿ ಸೇರಿದಂತೆ ಕಂಪನಿಯ ಹಲವು ನಿರ್ದೇಶಕರು ಅನಧಿಕೃತವಾಗಿ ಬ್ಯಾಂಕಿಂಗೇತರ ಹಣಕಾಸು ವ್ಯವಹಾರ ನಡೆಸುತ್ತಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಿಮಿನಲ್‌ ಕ್ರಮ ಜರುಗಿಸುವಂತೆ ಕೋರಿ ಅರ್ಜಿದಾರರು ಆರ್‌ಬಿಐಗೆ ದೂರು ನೀಡಿದ್ದರು.

ಬೆಂಗಳೂರು ಪ್ರೆಸ್‌ ಕ್ಲಬ್ 2020ರ ವಾರ್ಷಿಕ ಪ್ರಶಸ್ತಿ ಪ್ರಕಟ

ದೂರಿಗೆ ಆರ್‌ಬಿಐ ಉತ್ತರ ನೀಡಿದ್ದರೂ ಅರ್ಜಿದಾರರು ಅಧೀನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಅದು 2020ರ ಜು.28ರಂದು ವಜಾಗೊಂಡ ಕಾರಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಅರ್ಜಿದಾರರು ಮಾಡಿದ್ದ ದೂರಿಗೆ ಆರ್‌ಬಿಐ 2017ರ ಸೆ.5ರಂದು ಸಮಗ್ರ ಉತ್ತರ ನೀಡಿದೆ. ಆದರೂ ಅರ್ಜಿಯನ್ನು ಸಲ್ಲಿಸಿ ನ್ಯಾಯಾಂಗವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅರ್ಜಿದಾರರಿಗೆ ಏನೇ ತಕರಾರು ಇದ್ದರೆ ಅವರು ಸೂಕ್ತ ವೇದಿಕೆಯಲ್ಲಿ ಪರಿಹಾರ ಕಂಡುಕೊಳ್ಳಬಹುದು. ಅದು ಬಿಟ್ಟು ಮ್ಯಾಜಿಸ್ಪ್ರೇಟ್‌ ಕೋರ್ಟ್‌ನಲ್ಲಿ ಖಾಸಗಿ ದೂರು ಸಲ್ಲಿಸುವುದು ಅಥವಾ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿತು.
 

click me!