ಜಿಂದಾಲ್‌ಗೆ ಭೂಮಿ ನೀಡುವುದಿಲ್ಲ ಎಂಬ ಬಗ್ಗೆ ನಿಲುವು ತಿಳಿಸಿ: ಹೈಕೋರ್ಟ್‌

By Kannadaprabha NewsFirst Published Jul 17, 2021, 8:30 AM IST
Highlights

* ನಾಡಿದ್ದು ತಿಳಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ
* ವಿಚಾರಣೆ ಮುಗಿಯುವವರೆಗೆ ಭೂಮಿ ನೀಡುವಂತಿಲ್ಲ
* ವಿಚಾರಣೆ ಮುಂದೂಡಿದ ನ್ಯಾಯಪೀಠ 
 

ಬೆಂಗಳೂರು(ಜು.17): ಜಿಂದಾಲ್‌ ಕಂಪನಿಗೆ ವಿಜಯನಗರ ಜಿಲ್ಲೆಯ ಸಂಡೂರಿನ ಒಟ್ಟು 3,667 ಎಕರೆ ಸರ್ಕಾರಿ ಜಮೀನು ಪರಭಾರೆ ಮಾಡುವ ಸಂಬಂಧ ನ್ಯಾಯಾಲಯದ ವಿಚಾರಣೆ ಮುಕ್ತಾಯ ಆಗುವವರೆಗೆ ಮಾರಾಟ ಕ್ರಯಪತ್ರ (ಸೇಲ್‌ ಡೀಡ್‌) ಮಾಡಿಕೊಡುವುದಿಲ್ಲ ಎಂದು ಭರವಸೆ ನೀಡುವ ಕುರಿತು ಸೋಮವಾರ ಮಧ್ಯಾಹ್ನದೊಳಗೆ ನಿಲುವು ತಿಳಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಜಮೀನು ಪರಭಾರೆಗೆ ಸರ್ಕಾರ ಕೈಗೊಂಡ ನಿರ್ಧಾರ ಪ್ರಶ್ನಿಸಿ ಬೆಂಗಳೂರಿನ ಕೆ.ಎ. ಪಾಲ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿತು. ಇದಕ್ಕೂ ಮುನ್ನ ರಾಜ್ಯ ಸರ್ಕಾರ ಪರ ವಕೀಲರು, ಸಚಿವ ಸಂಪುಟದ ಅಂತಿಮ ಒಪ್ಪಿಗೆ ದೊರೆಯುವವರೆಗೆ ಜಮೀನು ಮಾರಾಟ ಮಾಡುವುದಿಲ್ಲ. ಆ ಕುರಿತು ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಲಾಗಿದೆ ಎಂದು ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಜಮೀನು ಪರಭಾರೆ ಸಂಬಂಧ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆಯೆಲ್ಲಾ ಎಂದು ಪ್ರಶ್ನಿಸಿ, ಅರ್ಜಿಯ ವಿಚಾರಣೆ ಮುಕ್ತಾಯವಾಗುವರೆಗೂ ಕ್ರಯಪತ್ರ ಕೊಡುವುದಿಲ್ಲ ಎಂಬ ಬಗ್ಗೆ ನ್ಯಾಯಾಲಯಕ್ಕೆ ಭರವಸೆಯನ್ನು ಕೊಡಬೇಕು. ನಾಳೆಯೇ ಸಂಪುಟದ ಒಪ್ಪಿಗೆ ಪಡೆದು, ನಾಡಿದ್ದು ಕ್ರಯಪತ್ರ ಮಾಡಿಕೊಡಬಹುದು, ಹೀಗಾಗಿ, ಮೊದಲು ಸರ್ಕಾರ ನ್ಯಾಯಾಲಯಕ್ಕೆ ಭರವಸೆ ನೀಡಬೇಕು ಎಂದು ತಾಕೀತು ಮಾಡಿತು.
ಈ ವೇಳೆ ಜಿಂದಾಲ್‌ ಕಂಪನಿ ಪರ ವಕೀಲರು, ಅರ್ಜಿ ಸಂಬಂಧ ತಮ್ಮ ವಾದವನ್ನು ಅಲಿಸಬೇಕು ಎಂದು ನ್ಯಾಯಪೀಠವನ್ನು ಕೋರಿದರು.

ಭೂಮಿ ವಿಚಾರಕ್ಕೆ ಸರ್ಕಾರ ವಿರುದ್ಧವೇ ಕಾನೂನು ಸಮರಕ್ಕೆ ಜಿಂದಾಲ್ ತಯಾರಿ

ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿಗಳ ಸಂಬಂಧ ಇನ್ನೂ ರಾಜ್ಯ ಸರ್ಕಾರ ಆಕ್ಷೇಪಣೆಯನ್ನೇ ಸಲ್ಲಿಸಿಲ್ಲ. ಆದರೆ, ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಖಾಸಗಿಯವರಿಗೆ ಅವಕಾಶ ಮಾಡಿಕೊಡುತ್ತಿದೆ ಎಂದರು.
ರಾಜ್ಯ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಮಧ್ಯಪ್ರವೇಶಿಸಿ, ಭೂಮಿ ಪರಭಾರೆ ಸಂಬಂಧ ಕ್ರಯಪತ್ರ ಮಾಡಿಕೊಡುವುದಿಲ್ಲವೆಂದು ಭರವಸೆ ನೀಡುವ ಬಗ್ಗೆ ಸರ್ಕಾರದ ನಿಲುವು ತಿಳಿಸಲು ಸೋಮವಾರದವರೆಗೆ ಕಾಲಾವಕಾಶ ನೀಡುವಂತೆ ಕೋರಿದರು. ಅದಕ್ಕೆ ಒಪ್ಪಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.
 

click me!