
ಮೈಸೂರು (ಮೇ 06): ಹೈಕಮಾಂಡ್ ಹೇಳಿದರೆ ನಾನು ಪೂರ್ಣ 5 ವರ್ಷ ಮುಖ್ಯಮಂತ್ರಿಯಾಗಿ ಇರುತ್ತೇನೆ. ನಾನು ಕೇವಲ ಹೈಕಮಾಂಡ್ ಮಾತನ್ನಷ್ಟೇ ಕೇಳುವುದು. ನೀವು ಎಷ್ಟೇ ಬಾರಿ ಈ ಪ್ರಶ್ನೆ ಕೇಳಿದರೂ ನನ್ನ ಉತ್ತರ ಹೈಕಮಾಂಡ್ ಅಷ್ಟೇ. ನನ್ನನ್ನು ಇರಿ ಎಂದರೇ ಇರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಮತ್ತು ಶೃಂಗೇರಿ ಕ್ಷೇತ್ರದ ಮರು ಎಣಿಕೆ ಫಲಿತಾಂಶದ ಕುರಿತು ಎದ್ದಿರುವ ಚರ್ಚೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿನಲ್ಲಿ ಖಡಕ್ ಉತ್ತರ ನೀಡಿದ್ದಾರೆ. ಅಧಿಕಾರಾವಧಿ, ದೆಹಲಿ ಪ್ರವಾಸ ಮತ್ತು ಶೃಂಗೇರಿ ಉಪಚುನಾವಣೆಯ ವಿವಾದಗಳ ಬಗ್ಗೆ ಸಿಎಂ ನೀಡಿರುವ ಹೇಳಿಕೆಗಳು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ.
ಮೈಸುರಿನಲ್ಲಿ ಮಾಧ್ಯಮಗಳೊಂದಿಗೆ ಬುಧವಾರ ಮಾತನಾಡುತ್ತಾ, ಮಾಧ್ಯಮಗಳಿಂದ ಎದುರಾದ ತಮ್ಮ ಅಧಿಕಾರಾವಧಿಯ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದರು. 'ಹೈಕಮಾಂಡ್ ಹೇಳಿದರೆ ನಾನು ಪೂರ್ಣ 5 ವರ್ಷ ಮುಖ್ಯಮಂತ್ರಿಯಾಗಿ ಇರುತ್ತೇನೆ. ನಾನು ಕೇವಲ ಹೈಕಮಾಂಡ್ ಮಾತನ್ನಷ್ಟೇ ಕೇಳುವುದು. ನೀವು ಎಷ್ಟೇ ಬಾರಿ ಈ ಪ್ರಶ್ನೆ ಕೇಳಿದರೂ ನನ್ನ ಉತ್ತರ ಹೈಕಮಾಂಡ್ ಅಷ್ಟೇ. ನನ್ನನ್ನು ಇರಿ ಎಂದರೇ ಇರುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 5 ವರ್ಷ ಸುಭದ್ರವಾಗಿರುತ್ತದೆ. ಬೇರೆ ಯಾರು ಏನೇ ಮಾತನಾಡಿದರೂ ಅದು ಅವರ ವೈಯಕ್ತಿಕ ಹೇಳಿಕೆ' ಎಂದು ಸ್ಪಷ್ಟಪಡಿಸಿದರು.
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಯ ಡಿ.ಎನ್. ಜೀವರಾಜ್ ಗೆದ್ದಿರುವ ವಿಚಾರವಾಗಿ ಮಾತನಾಡಿದ ಸಿಎಂ, ಬಿಜೆಪಿಯ ವಿರುದ್ಧ ಗಂಭೀರ ಆರೋಪ ಮಾಡಿದರು. 'ಇದು ಬಿಜೆಪಿಯವರು ಮಾಡಿರುವ ಕ್ರಿಮಿನಲ್ ಪಿತೂರಿ (Criminal Conspiracy). ಅಂದು ಫಲಿತಾಂಶ ಬರುವಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಅವರ ನಿರ್ದೇಶನದಂತೆ ಚುನಾವಣಾ ಸಿಬ್ಬಂದಿಗಳು ಮತ್ತು ಜೀವರಾಜ್ ಸೇರಿಕೊಂಡು ಅಂಚೆ ಮತಗಳನ್ನು ತಿದ್ದಿದ್ದಾರೆ. ಅಂದು ಮತ ಪತ್ರದಲ್ಲಿ ಇಲ್ಲದ ಗೆರೆಗಳು ಈಗ ಹೇಗೆ ಬಂದವು? ಇದು ಖಚಿತವಾಗಿ ನಡೆದಿರುವ ಪಿತೂರಿ. ಈ ವಿಚಾರವಾಗಿ ನಾವು ಸುಮ್ಮನೆ ಕೂರುವುದಿಲ್ಲ, ನ್ಯಾಯಾಲಯದ ಮೊರೆ ಹೋಗುತ್ತೇವೆ' ಎಂದು ಗುಡುಗಿದರು.
ರಾಹುಲ್ ಗಾಂಧಿ ಭೇಟಿ ಮತ್ತು ಸಂಪುಟ ಪುನಾರಚನೆಯ ಕುರಿತಾದ ಊಹಾಪೋಹಗಳಿಗೆ ತೆರೆ ಎಳೆದ ಸಿಎಂ, 'ರಾಹುಲ್ ಗಾಂಧಿ ಅವರು ಇಲ್ಲಿಯವರೆಗೆ ನನ್ನನ್ನು ದೆಹಲಿಗೆ ಕರೆದಿಲ್ಲ. ನಾನು ಕೂಡ ಅವರ ಅಪಾಯಿಂಟ್ ಮೆಂಟ್ ಕೇಳಿಲ್ಲ. ಅವರು ಕರೆದರೆ ನಾನು ಹೋಗುತ್ತೇನೆ. ಅಪಾಯಿಂಟ್ಮೆಂಟ್ ಫಿಕ್ಸ್ ಆದ ಮೇಲೆ ಸಂಪುಟ ಪುನಾರಚನೆಯೋ ಅಥವಾ ವಿಸ್ತರಣೆಯೋ ಎಂಬುದು ಗೊತ್ತಾಗಲಿದೆ. ಸದ್ಯಕ್ಕಂತೂ ನನ್ನ ದೆಹಲಿ ಪ್ರವಾಸ ನಿಗದಿಯಾಗಿಲ್ಲ' ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ