ಸ್ವಾಮೀಜಿಗಳ ಜತೆ ನಡೆದ ಸಂವಾದಲ್ಲಿ ಶ್ರೀಗಳಿಗೆ ಮಹತ್ವದ ಸಲಹೆ ನೀಡಿದ ಮೋಹನ್‌ ಭಾಗವತ್‌

By Suvarna NewsFirst Published Jul 12, 2022, 6:28 PM IST
Highlights

* ಚಿತ್ರದುರ್ಗದ ಶ್ರೀ ಶಿವ ಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಮೋಹನ್ ಭಾಗವತ್ ಸಂವಾದ
* ಅಸ್ಪೃಶ್ಯತೆ, ಶೋಷಣೆ ನಿವಾರಣೆ, ಸಮಾನತೆ ಕುರಿತು ಮಠಾಧೀಶರೊಂದಿಗೆ ಮೋಹನ್ ಭಾಗವತ್ ಚರ್ಚೆ
* ಎಲ್ಲರೂ ಮುಖ್ಯ ವಾಹಿನಿಯಲ್ಲಿ ಒಗ್ಗಟ್ಟಿನಿಂದ, ಸಾಮರಸ್ಯದಿಂದ ಸಾಗಬೇಕು ಎಂದು ಭಾಗವತ್ ಸಲಹೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ, (ಜುಲೈ.12):
 ಚಿತ್ರದುರ್ಗದ ಶ್ರೀ ಶಿವ ಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿಇಂದು(ಮಂಗಳವಾರ) ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ.ಮೋಹನ್‌ ಭಾಗವತ್‌  ದಲಿತ, ಹಿಂದುಳಿದ ವರ್ಗಗಳ ೨೧ ಮಠಾಧೀಶರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂವಾದದಲ್ಲಿ ಅನೇಕ ಸ್ವಾಮೀಜಿಗಳು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರ ಕೊಟ್ಟರು.

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋಹನ್‌ ಭಾಗವತ್, ಸಂಘಕ್ಕೆ ಹೆಚ್ಚು ಹೊಂದುವುದು ರಾಜಕೀಯ ಅಲ್ಲ. ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆ. ಹಾಗಾಗಿ ನಮಗೆ ಸಂಘಕ್ಕೆ ರಾಜಕೀಯದವರಿಗಿಂತ ಸ್ವಾಮೀಜಿಗಳೇ ಹೆಚ್ಚು ಹತ್ತಿರವಾಗುತ್ತಾರೆ ಎಂದರು

Latest Videos

ನಮ್ಮ ಸಮಾಜದಲ್ಲಿ ಕೆಲವು ಭಾಗ ಹಿಂದುಳಿದಿದ್ದರಿಂದ ಸಂಪರ್ಕ ಮುರಿದು ಹೋಯಿತು. ಹಿಂದೂ ಸಮಾಜದ ಎಲ್ಲಾ ಅಂಗಗಳನ್ನು ಸುಸ್ಥಿತಿಯಲ್ಲಿಡುವುದು ನಮ್ಮ ಕರ್ತವ್ಯ. ಮತ್ತೆ ಮತ್ತೆ ಸೇರುವುದರಿಂದ ಇದು ಸರಿಯಾಗುತ್ತದೆ, ಇದೇ ಸಮರಸತೆ. ಸಮಾಜದ ಎಲ್ಲಾ ಅಂಗಗಳ ಬಗ್ಗೆ ಸಂವೇದನೆ ಇರಬೇಕು. ಪರಸ್ಪರ ಆಗಾಗ ಸೇರುವುದರಿಂದ ನಮಗೆ ಪರಸ್ಪರರ ಬಗ್ಗೆ ಅರಿವು ಹೆಚ್ಚಾಗುತ್ತದೆ. ಅರಿವು ಹೆಚ್ಚಾದಾಗ ಸಂಶಯಗಳು, ಅಪನಂಬಿಕೆಗಳು ದೂರವಾಗುತ್ತವೆ. ಆಗ ಮನಸ್ಸುಗಳು ಒಂದಾಗುತ್ತವೆ. ರಾ.ಸ್ವ.ಸಂಘ ಮತ್ತು ಮಠಗಳು ಹಾಗೂ ಸ್ವಾಮೀಜಿಗಳೂ ಪರಸ್ಪರ ಮತ್ತೆ ಮತ್ತೆ ಭೇಟಿ ಮಾಡುತ್ತಿರಬೇಕು ಎಂದು ಹೇಳಿದರು.

Chitradurga: ಮಾದಾರ ಚನ್ನಯ್ಯ ಗುರುಪೀಠಕ್ಕೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ!

ಹಿಂದೂ ಸಮಾಜದ ಪ್ರಮುಖ ಸಮಸ್ಯೆಗಳಾದ ಅಸ್ಪೃಶ್ಯತೆ, ವಿಷಮತೆ, ಅಸಮಾನತೆ ಇವುಗಳು ಮುಖ್ಯವಾಗಿ ಇರುವುದು ನಮ್ಮ ಮನಸ್ಸಿನಲ್ಲಿ. ಶಾಸ್ತ್ರಗಳಲ್ಲಿ ಸಮಸ್ಯೆ ಇಲ್ಲ. ಮತ್ತು ಈ ಸಮಸ್ಯೆಗಳು ಹಲವಾರು ಶತಮಾನಗಳಿಂದ ನಮ್ಮ ಮನಸ್ಸಿನಲ್ಲಿ ಉಳಿದಿವೆ. ಹಾಗಾಗಿ ಇದರ ಪರಿಹಾರಕ್ಕೂ ಸಮಯ ತಗುಲುವುದು. ನಿಧಾನವಾಗಿ ಇದನ್ನು ಮನಸ್ಸಿನಿಂದ ತೆಗೆಯುವ ಕೆಲಸವಾಗಬೇಕಿದೆ. ಅಲ್ಲಿಯವರೆಗೂ ಸಹನೆ ಮತ್ತು ಧೈರ್ಯವನ್ನು ನಾವು ಹೊಂದಬೇಕು. ಭಾರತ ಭಾರತವಾಗಿ ಉಳಿಯಬೇಕಾದರೆ, ನಾವು ನಾವಾಗಿ ಉಳಿಯಬೇಕು. ಇಲ್ಲದಿದ್ದರೆ ಭಾರತ ಭಾರತವಾಗಿ ಉಳಿಯುವುದಿಲ್ಲ. ಹಾಗಾಗಿ ಧರ್ಮವು ಎಲ್ಲ ಕಡೆ ಓತಪ್ರೋತವಾಗಿ ಇರುವಂತಾಗಬೇಕು ತಿಳಿಸಿದರು.

ಮತಾಂತರ ನಮ್ಮಲ್ಲಿ ಪ್ರತ್ಯೇಕತೆಯನ್ನು ತರುತ್ತದೆ.  ಹಾಗಾಗಿ ನಾವು ಮತಾಂತರವನ್ನು ತಡೆಯುವ ಪ್ರಯತ್ನ ಮಾಡಬೇಕು. ಆಧುನಿಕ ವಿದ್ಯಾಭ್ಯಾಸದೊಂದಿಗೆ ಶಿಕ್ಷಣ ಸಿಗುತ್ತಿದೆ. ಆದರೆ ಸಂಸ್ಕಾರ ಸ್ವಲ್ಪ ದೂರ ಆಗುತ್ತಿದೆ. ಸಂಸ್ಕಾರ, ನಿಷ್ಠೆ ದೃಢವಾಗಬೇಕು ಎಂದರೆ ಏನಾದರೂ ಒಂದು ರೀತಿಯ ಉಪಾಸನೆಯನ್ನು ಜೋಡಿಸಿಕೊಳ್ಳಬೇಕು. ನೀವು, ಸ್ವಾಮೀಜಿಗಳು. ಸಾಧನೆ, ನಿಯಮಿತ ತಪಸ್ಸನ್ನು  ಮಾಡುವವರು. ನಿಮ್ಮ ಜೀವನದ ಕಾರಣಕ್ಕಾಗಿ ನೀವು ಇದನ್ನು ಕೊಡಲು ಅಧಿಕಾರಿಗಳು. ನೀವು ಸಮಾಜವನ್ನು ಸಂಸ್ಕಾರವಂತ ಸಮಾಜವನ್ನಾಗಿ ಎಬ್ಬಿಸಿ ನಿಲ್ಲಿಸಬೇಕು. ಎಲ್ಲರೂ ಒಟ್ಟಾಗಿ ಮುನ್ನಡೆಯಬೇಕು. ಸೇವೆ ಮತ್ತು ಸಂಸ್ಕಾರದ ಮೂಲಕ ನಾವು ಸಮಾಜವನ್ನು ಕಟ್ಟಿ ಬೆಳೆಸಬೇಕಿದೆ. ಸತ್ಯದ ಸಾಧನೆ ಮಾಡುತ್ತಾ ಸರ್ವರ ಸೇವೆ ಮಾಡಬೇಕಿದೆ ಎಂದರು.

ಇಂದು ನೀವೆಲ್ಲಾ ಮಠಾಧೀಶರು ಮಾಡುತ್ತಿರುವ ಪ್ರಯತ್ನ ಬೀಜರೂಪದಲ್ಲಿದೆ. ಇದು ಖಂಡಿತವಾಗಿ ಹೆಮ್ಮರವಾಗಿ ಬೆಳೆಯುತ್ತದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ನಿಮ್ಮ ಜೊತೆ ಇದೆ.  ನಮ್ಮದೇ ಒಂದು ಶೈಲಿ ಇದೆ. ನೀವು ಸಂಘವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿ, ನಾವೆಲ್ಲರೂ ಹಿಂದೂ ಸಮಾಜದ ಅವಿಭಾಜ್ಯ ಅಂಗ  ಎಂದು ಹೇಳಿದರು. ಇನ್ನೂ ಕಾರ್ಯಕ್ರಮದಲ್ಲಿ ಹಿಂದುಳಿದ ಮತ್ತು ದಲಿತ ಒಕ್ಕೂಟದ 21ಕ್ಕೂ ಹೆಚ್ಚಿನ ಶ್ರೀಗಳು ಭಾಗವಹಿಸಿದ್ದರು‌.

ಮಾದಾರ ಚನ್ನಯ್ಯ ಶ್ರೀ ಹೇಳಿಕೆ
ಸಭೆ ಮುಗಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಭಾಗವತ್ ಅವರು ನಮ್ಮ ಮಠಕ್ಕೆ ಭೇಟಿ ಅಪೇಕ್ಷೆ ಹಿನ್ನೆಲೆ ಮಠಾಧೀಶರ ಸಭೆ ನಡೆಸಲಾಯಿತು. ಹಿಂದುಳಿದ, ದಲಿತ ಮಠಾಧೀಶರ ಜತೆ ನಡೆದ ಭಾಗವತ್ ಅವರ ಸೌಹಾರ್ದ ಸಭೆ ನಡೆದಿದೆ. ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ಆಯ್ತು. ಅಸ್ಪೃಶ್ಯತೆ,  ಶೋಷಣೆ ನಿವಾರಣೆ, ಸಮಾನತೆ ಬಗ್ಗೆ ಚರ್ಚೆ. ಒಗ್ಗಟ್ಟಿನಿಂದ ಕೆಲಸ ಮಾಡುವ ಬಗ್ಗೆ ಮಠಾಧೀಶರ ಜತೆ ಚರ್ಚೆ. ಎಲ್ಲರೂ ಮುಖ್ಯ ವಾಹಿನಿಯಲ್ಲಿ ಸಾಮರಸ್ಯದಿಂದ ಸಾಗುವ ಬಗ್ಗೆ ಚರ್ಚೆ ಕೂಡ ನಡೆಯಿತು ಎಂದು ತಿಳಿಸಿದರು.

 ಮತಾಂತರಕ್ಕೆ ಕಾರಣವೇನು , ಪರಿಹಾರಗಳೇನು ಎಂಬುದರ ಚರ್ಚೆ. ಸಮುದಾಯಗಳನ್ನು ಉಳಿಸಿಕೊಂಡು ಅಭಿವೃದ್ಧಿ ಚಿಂತನೆ. ನ್ಯಾಯಯುತ ಮೀಸಲಾತಿ ಕುರಿತು ಭಾಗವತ್ ದನಿಗೂಡಿಸಿದರು. ಕಳೆದ ಒಂದೂವರೆ ದಶಕದಿಂದ ಮೋಹನ್ ಭಾಗವತ್ ಸಂಪರ್ಕ. ಅನೇಕ ಸಲ ಭಾಗವತ್ ಅವರಿಗೆ ಆಮಂತ್ರಣ ನೀಡಿದ್ದೆವು. ಕೋವಿಡ್ ಇತರೆ ಕಾರಣದಿಂದ ಮಠಕ್ಕೆ ಭೇಟಿ ಸಾಧ್ಯವಾಗಿರಲಿಲ್ಲ ಅದು ಈಗ ಕೂಡಿ ಬಂದಿತು ಎಂದರು. 

ಮೀಸಲಾತಿಗೆ ಎಲ್ಲ ಸಮುದಾಯಗಳ ಬೇಡಿಕೆಯಿದೆ. ಮೀಸಲಾತಿ ವಿಚಾರದಲ್ಲಿ ಎಲ್ಲ ಸಮುದಾಯಗಳನ್ನು ನ್ಯಾಯಯುತವಾಗಿ ನೋಡಬೇಕು. ಈ ವಿಚಾರದಲ್ಲಿ ಭಾಗವತ್ ಸಹ ದನಿಗೂಡಿಸಿದರು. ಮತಾಂತರಕ್ಕೆ ಕಾರಣವೇನು ಎಂಬುದರ ಬಗ್ಗೆಯೂ ಚರ್ಚೆಯಾಯಿತು. ನಮ್ಮ ಸಮುದಾಯದ ಮಠಾಧೀಶರು ಈ ಚರ್ಚೆಯಲ್ಲಿ ಭಾಗವಹಿಸಿದರು. ಮಠಾಧೀಶರಿಂದಲೇ ಭಾಗವತ್ ಈ ಬಗ್ಗೆ ಉತ್ತರ ಪಡೆದರು ಯಾವುದೇ ಬಲವಂತವಿಲ್ಲದೆ ಸಮುದಾಯಗಳನ್ನು ಉಳಿಸಿಕೊಳ್ಳುವ ಕುರಿತು ಚರ್ಚೆ ನಡೆಯಿತು  ಹೇಳಿದರು.

click me!