ಸುಬ್ರಹ್ಮಣ್ಯದಲ್ಲಿ ಮಳೆ ಅರ್ಭಟ: ಕುಕ್ಕೆ ಸ್ನಾನಘಟ್ಟಮುಳುಗಡೆ, ಭಕ್ತರಿಗೆ ನಿರ್ಬಂಧ

By Kannadaprabha News  |  First Published Jul 24, 2023, 4:34 AM IST

  ಪಶ್ಚಿಮಘಟ್ಟಭಾಗದ ಪುಷ್ಪಗಿರಿ ಅರಣ್ಯ ಪ್ರದೇಶಗಳಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಈ ಭಾಗದ ನದಿಗಳಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಭಕ್ತರಿಗೆ ನದಿಗಿಳಿಯದಂತೆ ನಿರ್ಬಂಧ ವಿಧಿಸಲಾಗಿದೆ.


ಸುಬ್ರಹ್ಮಣ್ಯ (ಜು.24) :  ಪಶ್ಚಿಮಘಟ್ಟಭಾಗದ ಪುಷ್ಪಗಿರಿ ಅರಣ್ಯ ಪ್ರದೇಶಗಳಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಈ ಭಾಗದ ನದಿಗಳಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಭಕ್ತರಿಗೆ ನದಿಗಿಳಿಯದಂತೆ ನಿರ್ಬಂಧ ವಿಧಿಸಲಾಗಿದೆ.

ಕುಮಾರಧಾರಾ ಸ್ನಾನಘಟ್ಟದ ಪಕ್ಕದ ಶೌಚಾಲಯ, ಡ್ರೆಸ್ಸಿಂಗ್‌ ರೂಂ, ಲಗೇಜ್‌ ಕೊಠಡಿ ಪ್ರವಾಹದಿಂದಾಗಿ ಜಲಾವೃತವಾಗಿದೆ. ಭಕ್ತರು ನದಿಗಿಳಿಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು, ಗೃಹರಕ್ಷಕ ದಳದ ಕಾವಲು ಹಾಕಲಾಗಿದೆ.

Tap to resize

Latest Videos

ಇಷ್ಟಾದರೂ ಭಾರೀ ಮಳೆಯ ನಡುವೆಯೂ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ಕುಮಾರಧಾರ ಸ್ನಾನ ಘಟ್ಟದ ದಡದಲ್ಲಿ ತೀರ್ಥಸ್ನಾನ ನೆರವೇರಿಸಿ ದೇವರ ದರ್ಶನ ಮಾಡಿದ್ದಾರೆ.

ಕೆಂಪು ಮಿಶ್ರಿತ ನೀರು: ಪುಷ್ಪಗಿರಿ ಭಾಗದಲ್ಲಿ ಆಗುತ್ತಿರುವ ಭರ್ಜರಿ ಮಳೆಯಿಂದಾಗಿ ಸುಬ್ರಹ್ಮಣ್ಯದ ಕಲ್ಮಕಾರು, ಕೊಲ್ಲಮೊಗ್ರ, ಹರಿಹರ ಪ್ರದೇಗಳಲ್ಲಿನ ನದಿಗಳಲ್ಲಿ ಕೆಂಪು ಮಿಶ್ರಿತ ನೀರು ಪ್ರವಾಹ ರೀತಿಯಲ್ಲಿ ಹರಿಯುತ್ತಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ. ಕಳೆದ ವರ್ಷ ಕಡಮಕಲ್ಲು ಎಸ್ಟೇಟ್‌ ಬಳಿ ನಡೆದ ಭೂಕುಸಿತದಿಂದ ಮಣ್ಣು, ಮರ ಕೊಚ್ಚಿ ಬಂದು ಭಾರೀ ಅನಾಹುತ ಸಂಭವಿತ್ತು. ಈ ಬಾರಿಯೂ ನದಿಗಳಲ್ಲಿ ಕೆಂಪುನೀರಿನೊಂದಿಗೆ ಬೃಹತ್‌ ಗಾತ್ರದ ಮರಗಳು ನದಿಯಲ್ಲಿ ಹರಿಯುತ್ತಿರುವುದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ.

Karnataka rains: ಮಲೆನಾಡು, ಕೊಡಗು, ಕರಾವಳಿ ಭಾರೀ ಮಳೆ; 9 ಜಿಲ್ಲೆಗೆ ಪ್ರವಾಹ ಭೀತಿ!

ಅಪಾಯಕ್ಕೆ ಸಿಲುಕಿದ ಪಿಕಪ್‌

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೆದಿಲ ಎಂಬಲ್ಲಿನ ಮುಳುಗು ಸೇತುವೆ ಮೇಲೆ ಪ್ರವಾಹದ ನೀರು ಹರಿಯುತ್ತಿದ್ದರೂ ಲೆಕ್ಕಿಸದೆ ದಾಟಲು ಯತ್ನಿಸಿದ್ದ ಪಿಕಪ್‌ ವಾಹನ ಸೇತುವೆ ನಡುವೆ ಪ್ರವಾಹಕ್ಕೆ ಸಿಲುಕಿತ್ತು. ತಕ್ಷಣ ಸ್ಥಳೀಯರು ವಾಹನದಲ್ಲಿದ್ದವರನ್ನು ರಕ್ಷಿಸಿದರು. ಬಳಿಕ ವಾಹನವನ್ನು ಸುರಕ್ಷಿತವಾಗಿ ದಡಕ್ಕೆ ತರಲಾಯಿತು.

ಶೃಂಗೇರಿಯಲ್ಲಿ ಪ್ರವಾಹ

ಚಿಕ್ಕಮಗಳೂರು: ತುಂಗಾ ನದಿ ನೀರಿನಮಟ್ಟಏರಿಕೆಯಾಗಿ ಶೃಂಗೇರಿ ಪಟ್ಟಣ ಸೇರಿ ನದಿಯ ತೀರ ಪ್ರದೇಶಗಳಿಗೆ ನೀರು ನುಗ್ಗಿ, ಆತಂಕ ಮನೆ ಮಾಡಿದೆ. ತುಂಗಾ ನದಿ ಅಪಾಯ ಮಟ್ಟಮೀರಿ ಹರಿಯುತ್ತಿರುವುದರಿಂದ ಶೃಂಗೇರಿ- ಮಂಗಳೂರು ರಸ್ತೆಯಲ್ಲಿ ನೆಮ್ಮಾರ್‌ನ ಕುರದಮನೆ ಬಳಿ ರಸ್ತೆ ಜಲಾವೃತವಾಗಿದೆ. ಶೃಂಗೇರಿ ಪೇಟೆಯ ವಿದ್ಯಾರಣ್ಯಪುರ- ದುರ್ಗ ದೇವಸ್ಥಾನದ ರಸ್ತೆಯ ಸಮೀಪಕ್ಕೆ ತುಂಗಾ ನದಿಯ ನೀರು ಬಂದಿದೆ. ಶೃಂಗೇರಿ ದೇಗುಲದ ಕಪ್ಪೆ ಶಂಕರ ದೇವಾಲಯ ಮುಳುಗಡೆಯಾಗಿದ್ದು, ಭೋಜನ ಶಾಲೆಗೂ ನೀರು ನುಗ್ಗಿದೆ.

ಟಿಬಿ ಡ್ಯಾಂಗೆ 2 ದಿನದಲ್ಲಿ 1 ಲಕ್ಷ ಕ್ಯುಸೆಕ್‌ ನೀರು

ಮುನಿರಾಬಾದ್‌/ಶಿವಮೊಗ್ಗ: ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಳೆದೆರಡು ದಿನಗಳಿಂದ ಏರುತ್ತಲೇ ಇದೆ. ತುಂಗಭದ್ರಾ ಜಲಾಶಯಕ್ಕೆ ಭಾನುವಾರ 59,500 ಸಾವಿರ ಕ್ಯುಸೆಕ್‌ ನೀರು ಹರಿದು ಬಂದಿದೆ. ಈಮೂಲಕ ಕಳೆದೆರಡು ದಿನಗಳಿಂದ ಡ್ಯಾಂಗೆ 1 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿದು ಬಂದಂತಾಗಿದೆ. ಸದ್ಯ ಜಲಾಶಯದಲ್ಲಿ 21 ಟಿಎಂಸಿ ನೀರು ಶೇಖರಣೆಯಾಗಿದೆ. ಆದರೆ ಕಳೆದ ವರ್ಷ ಈ ಅವಧಿಯಲ್ಲಿ ಜಲಾಶಯ ಬಹುತೇಕ ಭರ್ತಿಯಾಗಿತ್ತು.

ಲಿಂಗನಮಕ್ಕಿಯಲ್ಲಿ 3 ಅಡಿ ಏರಿಕೆ: ಇನ್ನು ಶಿವಮೊಗ್ಗ ಜಿಲ್ಲೆ ಸಾಗರದ ಲಿಂಗನಮಕ್ಕಿ ಡ್ಯಾಂಗೆ ಭಾನುವಾರ 52,374 ಕ್ಯುಸೆಕ್‌ನಷ್ಟುನೀರುಹರಿದು ಬಂದಿದ್ದು, ಒಂದೇ ದಿನ ಜಲಾಶಯದ ನೀರಿ​ನಮಟ್ಟ3 ಅಡಿಯಷ್ಟುಏರಿಕೆಯಾಗಿದೆ. ನೀರಿನ ಸಂಗ್ರಹ ಪ್ರಮಾಣ 40.54 ಟಿಎಂಸಿಗೆ ಹೆಚ್ಚಿದೆ. ಜಲಾಶಯದಲ್ಲಿ ಪ್ರಸ್ತುತ ಶೇ.26ರಷ್ಟುನೀರಿದೆ.

ಚಿಕ್ಕಮಗಳೂರಲ್ಲಿ ಮಳೆ ಆರ್ಭಟ: ರಸ್ತೆ ಸೇತುವೆಗಳ ಸಂಪರ್ಕ ಕಡಿತ, ಪ್ರವಾಹದ ಭೀತಿ

ಜಲಪಾತಗಳಲ್ಲಿ ಮತ್ತೆ ವೈಭೋಗ

ಜೂನ್‌ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ರಾಜ್ಯದ ಬಹುತೇಕ ಜಲಪಾತಗಳು ನೀರಿಲ್ಲದೆ ಸೊರಗಿದ್ದವು. ಆದರೆ, ಜುಲೈ ಎರಡನೇ ವಾರದಿಂದ ಭರ್ಜರಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜೋಗ ಸೇರಿ ರಾಜ್ಯದ ಪ್ರಮುಖ ಜಲಪಾತಗಳು ಮತ್ತೆ ಧುಮ್ಮಿಕ್ಕಿ ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. ಲಿಂಗನಮಕ್ಕಿ ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಸಾಗರದ ಜೋಗಜಲಪಾತ ಮತ್ತೆ ತನ್ನ ಹಳೇ ವೈಭವಕ್ಕೆ ಮರಳಿದೆ. ಅದೇ ರೀತಿ ಬೆಳಗಾವಿಯ ಗೋಕಾಕಫಾಲ್ಸ್‌, ಕೊಡಗಿನ ಅಬ್ಬಿಫಾಲ್ಸ್‌ ಮೈದುಂಬಿ ಹರಿಯುತ್ತಿದ್ದು, ಸಾವಿರಾರು ಮಂದಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕುಶಾಲನಗರದ ಗುಡ್ಡೆಹೊಸೂರು ಸಮೀಪದ ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಆದರೆ, ಕೆಆರ್‌ಎಸ್‌ನಿಂದ ಇನ್ನೂ ನದಿಗೆ ನೀರು ಬಿಡದ ಕಾರಣ ಮಂಡ್ಯದ ಗಗನಚುಕ್ಕಿ, ಚಾಮರಾಜನಗರದ ಭರಚುಕ್ಕಿ ಜಲಪಾತಗಳು ಮಾತ್ರ ಸೊರಗಿವೆ.

click me!