ಮಂಗಳೂರು(ಮೇ.16): ಭಾರತಕ್ಕೆ ನಿಗದಿತ ಸಮಯಕ್ಕೂ ಮೊದಲೇ ಮುಂಗಾರು ಪ್ರವೇಶವಾಗಿದೆ. ಇದರ ಪರಿಣಾಮ ದೇಶದ ಬಹುತೇಕ ರಾಜ್ಯಗಳಲ್ಲಿ ಮಳೆ ಅಬ್ಬರ ಆರಂಭಗೊಂಡಿದೆ. ಇದೀಗ ದಕ್ಷಿಣ ಕರ್ನಾಟಕದ ಹಲವು ಭಾಗದಲ್ಲಿ ಭಾರಿ ಮಳೆಯಾಗಿದೆ. ಕರಾವಳಿಯಲ್ಲಿ ಸುರಿದ ಭಾರಿ ಮಳೆಗೆ ವಿಟ್ಲ ಮಂಗಳೂರು ರಸ್ತೆ ಮುಳುಗಡೆಯಾಗಿದೆ.
ಬೊಬ್ಬೆಕೇರಿ ಭಾಗದಲ್ಲಿ ನೆರೆ ನೀರು ಏರಿದ ಪರಿಣಾಮ ತಾಸುಗಟ್ಟಲೆ ಜಲಾವೃತಗೊಂಡಿದೆ. ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ವಾಹನ ಸವಾರರು ಪರದಾಡಿದರು. ರಸ್ತೆ ಕಾಮಗಾರಿ ಹಿನ್ನೆಲೆ ಚರಂಡಿಗಳಲ್ಲಿ ಮಳೆನೀರು ಹರಿಯಲು ಸ್ಥಳಾವಕಾಶವಿಲ್ಲದೇ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ.
6 ದಿನಕ್ಕೂ ಮೊದಲೇ ಅಂಡಮಾನ್ ನಿಕೋಬಾರ್‌ಗೆ ಮುಂಗಾರು ಪ್ರವೇಶ!
ಪಾಣೆಮಂಗಳೂರು ನರಿಕೊಂಬು ಮಧ್ಯೆ ಮೊಗರ್ನಾಡಿನಲ್ಲಿ ಮರಗಳು ರಸ್ತೆಗಳುರುಳಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿದೆ. ಇನ್ನು ಗಾಳಿ ಸಹಿತ ಮಳೆಯಿಂದ ಹಲವು ಮನೆಯ ಮೆಲ್ಚಾವಣಿಗಳು ಹಾರಿ ಹೋಗಿದೆ. ಭಾರಿ ಮಳೆ ಗಾಳಿಗೆ ಗ್ರಾಮೀಣ ಪ್ರದೇಶಗಳ ಜನ ಹೈರಾಣಾಗಿದ್ದಾರೆ.
ದಕ್ಷಿಣ ಕನ್ನಡದ ಜಿಲ್ಲೆಯಾದ್ಯಂತ ನೂರಾರು ಎಕರೆ ಬೆಳೆ , ತೋಟಗಳು ಹಾಳಾಗಿದೆ. ಇಂದು ಸಂಜೆಯಿಂಂದಲೇ ಸುರಿಯುತ್ತಿರುವ ಗುಡುಗ ಸಹಿತ ಭಾರಿ ಮಳೆಗೆ ಹಲವು ಕಡೆ ವಿದ್ಯುತ್ ಕಂಬಗಳು ಧರೆಗುರುಳಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೋಮವಾರ ಧಾರಾಕಾರ ಮಳೆಯಾಗಿದೆ. ದಿಢೀರನೆ ಸುರಿದ ಮಳೆಯಿಂದಾಗಿ ನಗರದ ಅನೇಕ ಕಡೆಗಳಲ್ಲಿ ಕೃತಕ ಪ್ರವಾಹದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿತ್ತು.ಬೆಳಗ್ಗಿನಿಂದಲೇ ಜಿಲ್ಲೆಯ ಅನೇಕ ಕಡೆಗಳಲ್ಲಿ ಮಳೆ ಆರಂಭವಾಗಿದ್ದರೂ ಮಧ್ಯಾಹ್ನದವರೆಗೆ ಗಮನಾರ್ಹವಾಗಿ ಸುರಿದಿರಲಿಲ್ಲ. ಮಧ್ಯಾಹ್ನದ ಬಳಿಕ ದಿಢೀರನೆ ಗುಡುಗು ಸಿಡಿಲಿನೊಂದಿಗೆ ಆರಂಭವಾದ ಮಳೆ ಸಂಜೆವರೆಗೂ ಧಾರಾಕಾರವಾಗಿ ಸುರಿಯಿತು.
ನಿರಂತರ ಸುರಿದ ಮಳೆಯಿಂದಾಗಿ ಮಂಗಳೂರಿನಲ್ಲಿ ಕೃತಕ ಪ್ರವಾಹ ಉಂಟಾಗಿತ್ತು. ನಗರದಾದ್ಯಂತ ಅನೇಕ ಕಾಮಗಾರಿಗಳು ನಡೆಯುತ್ತಿರುವ ಪ್ರದೇಶಗಳಲ್ಲೆಲ್ಲ ನೀರು ನಿಂತು ವಾಹನ ಸವಾರರು, ಪಾದಚಾರಿಗಳಿಗೆ ಸಂಚರಿಸಲು ತೊಡಕಾಗಿತ್ತು.
ಕೇರಳದಲ್ಲಿ ಮುಂಗಾರು ಪೂರ್ವ ಮಳೆಯಬ್ಬರ: ರೆಡ್ ಅಲರ್ಟ್ ಪ್ರಕಟ
ಬಲ್ಮಠ ರಸ್ತೆ, ಕುದ್ರೋಳಿ, ಕೆಎಸ್ ರಾವ್ ರಸ್ತೆ, ಕೊಟ್ಟಾರ, ಪಂಪ್‌ವೆಲ್ ಪ್ರದೇಶಗಳಲ್ಲಿ ರಸ್ತೆಯಲ್ಲೇ ಪ್ರವಾಹೋಪಾದಿಯಲ್ಲಿ ನೀರು ಹರಿಯುತ್ತಿತ್ತು. ಅನೇಕ ಕಡೆಗಳಲ್ಲಿ ಮ್ಯಾನ್‌ಹೋಲ್‌ಗಳು ಉಕ್ಕೇರಿ ಪರಿಸ್ಥಿತಿ ಅಸಹನೀಯವಾಗಿತ್ತು.
ಉಡುಪಿ
ಬಂಗಾಳಕೊಲ್ಲಿಯ ಆಸಾನಿ ಚಂಡಮಾರುತ ಪ್ರಭಾವ ಕಡಿಮೆಯಾಗಿದ್ದರೂ, ಕರಾವಳಿ ಜಿಲ್ಲೆಗಳಿಗೆ ಮುಂದಿನ ಒಂದು ವಾರ ಭಾರಿ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಬುಧವಾರ ಕರಾವಳಿಯಲ್ಲಿ ರೆಡ್ ಅಲರ್ಚ್ ಘೋಷಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಮಂಗಳವಾರದಿಂದ ಮೇ 19ರ ವರೆಗೆ ಕರಾವಳಿಯ ಜಿಲ್ಲೆಗಳಲ್ಲಿ ಜನರು ಮುಂಜಾಗ್ರತೆ ವಹಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ.
ಮೇ 17 ಮತ್ತು 19ರಂದು ಭಾರಿ ಮಳೆಯಾಗುವ ಬಗ್ಗೆ ಜಿಲ್ಲಾಡಳಿತ ಆರೆಂಜ್ ಅಲರ್ಚ್ ಘೋಷಿಸಿದೆ. 18ರಂದು ಮಾತ್ರ ಇನ್ನೂ ಹೆಚ್ಚು ಮಳೆಯಾಗುವ ಬಗ್ಗೆ ರೆಡ್ ಅಲರ್ಚ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ, ಸಾರ್ವಜನಿಕರು ನದಿಗಳಿಗೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಹಾವೇರಿ
ಹಾವೇರಿ ಜಿಲ್ಲೆಯಾದ್ಯಂತ ಭಾರಿ ಗಾಳಿ ಮಳೆ ಸುರಿದಿದೆ. ಇದರ ಪರಿಣಾಮ ಹಲವು ಮರಗಳು ನೆಲಕ್ಕುರುಳಿದೆ. ತೀವ್ರ ಮಳೆಗೆ ಕೆಲ ಮನೆಗಳು ಕುಸಿದು ಬಿದ್ದಿದೆ. ಹಾವೇರಿ ಜಿಲ್ಲೆಯ ಹಲವು ಭಾಗದಲ್ಲಿ ಬೆಳೆಗಳು ನಾಶವಾಗಿದೆ.