
ಬೆಂಗಳೂರು(ಮೇ.18): ಕಳೆದೊಂದು ವಾರದಿಂದ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಬೇಸಿಗೆ ಮಳೆ ಮಂಗಳವಾರ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲೂ ಪ್ರಬಲವಾಗಿದೆ. ಮಳೆಯೊಂದಿಗೆ ಬಡಿದ ಸಿಡಿಲಿಗೆ ಮಹಿಳೆ ಸೇರಿ ಇಬ್ಬರು ಮೃತಪಟ್ಟು, ಒಬ್ಬ ಗಂಭೀರವಾಗಿ ಗಾಯಗೊಂಡಿರುವ ಪ್ರತ್ಯೇಕ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು, ಕಲಬುರಗಿ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಅನೇಕ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಒಟ್ಟಾರೆ ರಾಜ್ಯದಲ್ಲಿ ಮಳೆ ಸಂಬಂಧಿ ಕಾರಣಗಳಿಗೆ 80ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.
ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಕುರಿಗಾಹಿ ನಿಂಗಪ್ಪ(30) ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೀದರ್ ಜಿಲ್ಲೆಯ ಜಿಲ್ಲೆಯ ಖಟಕಚಿಂಚೋಳಿ ಗ್ರಾಮದ ಹೊಲದಲ್ಲಿ ತೊಗರಿ ಬೆಳೆಯ ಕಳೆ ತೆಗೆಯುತ್ತಿದ್ದ ಪಾರ್ವತಿ ನಂದಕುಮಾರ್ ಕಂಠಿ (48) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದಲ್ಲಿ 14 ಕುರಿಗಳು, ರಾಯಚೂರು ಜಿಲ್ಲೆಯ ಮುದಗಲ್ ತಾಲೂಕಿನ ಮಟ್ಟೂರ ಗ್ರಾಮದಲ್ಲಿ 10 ಆಡು, 10 ಕುರಿಗಳು ಸಿಡಿಲಿಗೆ ಮೃತಪಟ್ಟಿವೆ. ದಾವಣಗೆರೆ ಜಿಲ್ಲೆಯಲ್ಲಿ ಒಟ್ಟಾರೆ 562 ಎಕರೆಯಷ್ಟುಭತ್ತ, ಅಡಕೆ, ಬಾಳೆ ಬೆಳೆಗಳಿಗೆ ಹಾನಿಯಾಗಿವೆ.
ಅಸಾನಿ ಎಫೆಕ್ಟ್, ಊಟಿಯಂತಾದ ಚಿತ್ರದುರ್ಗದ ಜೋಗಿಮಟ್ಟಿ ವನ್ಯಧಾಮ
ಉತ್ತರ ಕನ್ನಡದಲ್ಲಿ ರೆಡ್ ಅಲರ್ಟ್:
ಉತ್ತರ ಕನ್ನಡದಲ್ಲಿ ಸೋಮವಾರ ರಾತ್ರಿ ಬಿರುಗಾಳಿಸಹಿತ ಭಾರೀ ಮಳೆ ಸುರಿದಿದ್ದು, ಮೇ18 ಬುಧವಾರ ರೆಡ್ ಅಲರ್ಟ್ ಘೋಷಿಸಲಾಗಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು ಭಟ್ಕಳದಲ್ಲಿ ನಾಲ್ಕು ಬೋಟ್ ಮುಳುಗಿದೆ. ಇನ್ನುಳಿದಂತೆ ಮೈಸೂರು, ಮಂಡ್ಯ, ಚಾಮರಾಜನಗರ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯನಗರ, ಚಿತ್ರದುರ್ಗ ಜಿಲ್ಲೆಗಳ ವಿವಿಧೆಡೆ ಉತ್ತಮ ಮಳೆ ಸುರಿದಿದೆ.
ಬೆಂಗ್ಳೂರಲ್ಲಿ 10 ದಿನದ ಬಳಿಕ ವಿರಾಮ ಕೊಟ್ಟ ವರುಣ: ಚಳಿಯ ವಾತಾವರಣ
ಶಾಲಾ ಕಟ್ಟಡ ಕುಸಿತ:
ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಮಂಗಳೂರು ಹೊರವಲಯದಲ್ಲಿರುವ ಉಳ್ಳಾಲ ಸಮೀಪದ ಕಿನ್ಯಾ ಬೆಳರಿಂಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ಕುಸಿದು ಬಿದ್ದಿದೆ. ಆ ಕಟ್ಟಡದಲ್ಲಿ ತರಗತಿಗಳನ್ನು ನಡೆಸುತ್ತಿರಲಿಲ್ಲ. ಜೊತೆಗೆ ರಾತ್ರಿ ವೇಳೆ ಕಟ್ಟಡ ಕುಸಿದು ಬಿದ್ದಿರುವುದರಿಂದ ಸಂಭಾವ್ಯ ಅನಾಹುತ ತಪ್ಪಿದೆ.
ಕಾರಿಂಜದಲ್ಲಿ ಉರುಳಿದ ಬಂಡೆ:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ಕಾರಿಂಜಬೆಟ್ಟದೇವಸ್ಥಾನದ ಬಲಭಾಗದಿಂದ ಬೃಹತ್ ಗಾತ್ರದ ಬಂಡೆ ಕಲ್ಲೊಂದು ಮಂಗಳವಾರ ಬೆಳಗ್ಗೆ ಉರುಳಿ ಕೆಳಗೆ ಬಿದ್ದಿದ್ದು ಇದರಿಂದ ಅನೇಕ ಮರಗಳು ಧರಾಶಾಹಿಯಾಗಿವೆ. ಇದರಿಂದ ಮಂಗಳೂರು-ಧರ್ಮಸ್ಥಳ ರಸ್ತೆಯಲ್ಲಿ ಅನೇಕ ಕಾಲ ಸಂಚಾರಕ್ಕೆ ಆಡಚಣೆಯುಂಟಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ