ಕರ್ನಾಟಕದ ಹಲವೆಡೆ ಇಂದು ಭಾರೀ ಮಳೆ: ‘ರೆಡ್‌ ಅಲರ್ಟ್‌’ ಎಚ್ಚರಿಕೆ

By Kannadaprabha NewsFirst Published Jul 5, 2023, 2:30 AM IST
Highlights

ಕರಾವಳಿಯ 3 ಜಿಲ್ಲೆಗಳಿಗೆ ಇಂದು ‘ರೆಡ್‌ ಅಲರ್ಟ್‌’, 20 ಸೆಂ.ಮೀ.ವರೆಗೂ ಮಳೆಯಾಗುವ ಸಂಭವ ಹವಾಮಾನ ಇಲಾಖೆ ಮುನ್ಸೂಚನೆ, ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು ಶಾಲೆ-ಕಾಲೇಜು ರಜೆ, ಭಾರೀ ಮಳೆಯಿಂದಾಗಿ ಭಟ್ಕಳದ ರಾಷ್ಟ್ರೀಯ ಹೆದ್ದಾರಿ ಮುಳುಗಡೆ. 

ಬೆಂಗಳೂರು(ಜು.05):  ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮುಂದಿನ 24 ಗಂಟೆಯಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆಯು ಈ ಮೂರು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಎಚ್ಚರಿಕೆ ನೀಡಿದೆ.

ಮುಂದಿನ 24 ಗಂಟೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ 20 ಸೆಂ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮುಂದುವರೆದು, ಕರಾವಳಿ ಜಿಲ್ಲೆಗಳಿಗೆ ಜುಲೈ 6 ಮತ್ತು 7ಕ್ಕೆ ಆರೆಂಜ್‌, 8 ಮತ್ತು 9ಕ್ಕೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

ಚಿಕ್ಕಮಗಳೂರಲ್ಲಿ ವರುಣನ ಅಬ್ಬರಕ್ಕೆ ಧರೆಗುರುಳಿದ ಮರಗಳು: ಮುಂದಿನ 3 ದಿನ ಭಾರೀ ಮಳೆ..!

ಉಳಿದಂತೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಮತ್ತು ಆರೆಂಜ್‌ ಅಲರ್ಟ್‌ ನೀಡಲಾಗಿದೆ.

ಇನ್ನು ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ 17 ಸೆಂ.ಮೀ. ಮಳೆಯಾಗಿದೆ. ಪಣಂಬೂರು, ಮಂಗಳೂರಿನಲ್ಲಿ ತಲಾ 15, ಉತ್ತರ ಕನ್ನಡದ ಅಂಕೋಲಾದಲ್ಲಿ 12, ಶಿರಾಲಿ, ಹೊನ್ನಾವರ, ಮಂಕಿಯಲ್ಲಿ ತಲಾ 9, ಗೋಕರ್ಣ, ಬೇಲಿಕೇರಿ, ಕುಂದಾಪುರದಲ್ಲಿ ತಲಾ 8, ಗೇರಸೊಪ್ಪಾ, ಕಾರವಾರ, ಕೋಟ ಹಾಗೂ ಉಡುಪಿಯಲ್ಲಿ ತಲಾ 7 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

click me!