ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಸೋಮವಾರ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲ ಭಾಗಗಳಲ್ಲಿ 20 ಸೆಂ.ಮೀ.ಗೂ ಹೆಚ್ಚಿನ ಮಳೆ ಸುರಿದಿದೆ. ಮಂಗಳವಾರ ಮತ್ತು ಬುಧವಾರ ಮಳೆಯ ಅಬ್ಬರ ಕೊಂಚ ಕಡಿಮೆಯಾಗಲಿದೆಯಾದರೂ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯಲಿದೆ. ಹೀಗಾಗಿ ಕರಾವಳಿ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ
ಬೆಂಗಳೂರು(ಜು.25): ಮುಂದಿನ ಮೂರು ದಿನಗಳ ಕಾಲ ಸಮುದ್ರದಲ್ಲಿ ಪ್ರತಿ ಗಂಟೆಗೆ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜತೆಗೆ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಉಳಿದೆಲ್ಲ ಜಿಲ್ಲೆಗಳಲ್ಲೂ ಭಾರಿ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ.
ಪ್ರಮುಖವಾಗಿ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಸೋಮವಾರ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲ ಭಾಗಗಳಲ್ಲಿ 20 ಸೆಂ.ಮೀ.ಗೂ ಹೆಚ್ಚಿನ ಮಳೆ ಸುರಿದಿದೆ. ಮಂಗಳವಾರ ಮತ್ತು ಬುಧವಾರ ಮಳೆಯ ಅಬ್ಬರ ಕೊಂಚ ಕಡಿಮೆಯಾಗಲಿದೆಯಾದರೂ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯಲಿದೆ. ಹೀಗಾಗಿ ಕರಾವಳಿ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಉಳಿದಂತೆ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಿರಲಿದ್ದು, ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಉಳಿದೆರಡು ಭಾಗಗಳಿಗಿಂತ ಮಳೆಯ ಪ್ರಮಾಣ ಕಡಿಮೆಯಿರಲಿದ್ದು, ‘ಯಲ್ಲೋ ಅಲರ್ಟ್’ ಘೋಷಿಸಲಾಗಿದೆ.
ಇನ್ನು ಸಮುದ್ರದಲ್ಲಿ ಗಾಳಿ ಪ್ರತಿ ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಬೀಸಲಿದ್ದು, ಮಳೆಯ ಪ್ರಮಾಣವೂ ಹೆಚ್ಚಿರಲಿದೆ. ಹೀಗಾಗಿ ಮುಂದಿನ ಮೂರು ದಿನಗಳ ಕಾಲ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಿದೆ.
ಕರ್ನಾಟಕದ 7 ಜಿಲ್ಲೆಗಳಲ್ಲಿ ನೆರೆಯಬ್ಬರ: ಮಲೆನಾಡಿನಲ್ಲಿ ಭೂಕುಸಿತ
ರಾಜ್ಯದಲ್ಲಿ ಶೇ.4ಕ್ಕೆ ಕುಸಿದ ಮಳೆ ಕೊರತೆ
ಕಳೆದೊಂದು ವಾರದಿಂದ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಳೆ ಕೊರತೆ ಕ್ರಮೇಣ ಕಡಿಮೆಯಾಗುತ್ತಿದ್ದು, ಸೋಮವಾರದವರೆಗೆ ರಾಜ್ಯದಲ್ಲಿ ಮಳೆ ಕೊರತೆ ಪ್ರಮಾಣ ಶೇ. 4ಕ್ಕೆ ಇಳಿದಿದೆ. ವಾಡಿಕೆಯಂತೆ ಜೂನ್ 1ರಿಂದ ಜುಲೈ 24ರವರೆಗೆ ರಾಜ್ಯದಲ್ಲಿ 40 ಸೆಂ.ಮೀ. ಮಳೆಯಾಗಬೇಕಿದ್ದು, ಸದ್ಯ 38 ಸೆಂ.ಮೀ. ಮಳೆಯಾಗಿದೆ. ಅದರಲ್ಲಿ ಉತ್ತರ ಒಳನಾಡಿನಲ್ಲಿ ವಾಡಿಕೆಯಂತೆ ಶೇ.6ರಷ್ಟುಕೊರತೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ವಾಡಿಕೆಯಂತೆ 30 ಸೆಂ.ಮೀ. ಮಳೆ ಬದಲು 26 ಸೆಂ.ಮೀ. ಮಾತ್ರ ಮಳೆಯಾಗಿದ್ದು, ಶೇ. 15ರಷ್ಟುಕೊರತೆಯಾಗಿದೆ. ಮುಂದಿನ ನಾಲ್ಕು ದಿನಗಳವರೆಗೆ ಮಳೆಯ ಪ್ರಮಾಣ ಮತ್ತಷ್ಟುಹೆಚ್ಚಲಿದ್ದು, ಒಟ್ಟಾರೆ ಮಳೆ ಕೊರತೆ ಪ್ರಮಾಣ ಇಳಿಕೆಯಾಗಿ ವಾಡಿಕೆ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಿತ್ರದುರ್ಗದಲ್ಲಿ ಮಳೆ ಹೆಚ್ಚು:
ಚಿತ್ರದುರ್ಗ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 60 ಹೆಚ್ಚು ಮಳೆ ಸುರಿದಿದೆ. ಬೀದರ್, ಹಾವೇರಿ, ಕಲಬುರಗಿ, ದಾವಣಗೆರೆ ಜಿಲ್ಲೆಗಳಲ್ಲೂ ಮಳೆ ಪ್ರಮಾಣ ಹೆಚ್ಚಿದೆ. ದಕ್ಷಿಣ ಕನ್ನಡ, ಬಳ್ಳಾರಿ, ಶಿವಮೊಗ್ಗ ಸೇರಿದಂತೆ 12 ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆಯಾಗಿದೆ. ರಾಜ್ಯದ 13 ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದ್ದು, ರಾಮನಗರ ಜಿಲ್ಲೆಯಲ್ಲಿ ಅತಿಹೆಚ್ಚು ವಾಡಿಕೆಗಿಂತ ಶೇ. 46 ಮಳೆ ಕಡಿಮೆಯಾಗಿದೆ. ಕೊಡಗು ಶೇ. 40, ಹಾಸನ ಮತ್ತು ವಿಜಯಪುರದಲ್ಲಿ ಶೇ. 29ರಷ್ಟು ಕಡಿಮೆಯಾಗಿದೆ.