ಬೆಂಗಳೂರಿಗರೇ ಎಚ್ಚರ : ಮತ್ತೆ ನಾಲ್ಕು ದಿನ ಗುಡುಗು ಸಹಿತ ಭಾರೀ ಮಳೆ

By Web DeskFirst Published Oct 5, 2018, 8:43 AM IST
Highlights

ಈಗಾಗಲೇ ಬೆಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಇನ್ನೂ ನಾಲ್ಕರಿಂದ ಐದು ದಿನಗಳ ಕಾಲ ಹೆಚ್ಚಿನ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 

ಬೆಂಗಳೂರು :  ಬಿಸಿಲ ಬೇಗೆಯಿಂದ ಬೆಂದು ಬೆವರು ಹರಿಸತೊಡಗಿದ್ದ ಬೆಂಗಳೂರಿಗರಿಗೆ ಗುರುವಾರ ಮಳೆರಾಯ ತಂಪೆರೆದಿದ್ದಾನೆ. ಗುರುವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಉಂಟಾಗಿತ್ತು. ನಗರದ ಹಲವೆಡೆ ಮಳೆಯಾಗಿದೆ, ಸಂಜೆಯ ತನಕ ಆಗಾಗ ತುಂತುರು ಮಳೆಯಿಂದಾಗಿ ಜನರು ಕಿರಿ ಕಿರಿ ಅನುಭವಿಸಿದರು.

ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ನಗರದಲ್ಲಿ ಮಳೆಯಾಗುತ್ತಿದ್ದು, ಇನ್ನು ಎರಡು-ಮೂರು ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೆಲವೆಡೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ.

ಗುರುವಾರ ಸುರಿದ ಮಳೆಗೆ ವಸಂತ ನಗರದ ಕನ್ನಿಂಗ್‌ಹಾಮ್‌ ರಸ್ತೆ, ಜೈನ್‌ ಆಸ್ಪತ್ರೆ ಮುಂಭಾಗ ಮಳೆ ನೀರು ರಸ್ತೆಗೆ ಹರಿದ ಪರಿಣಾಮ ಬೈಕ್‌ ಹಾಗೂ ಕಾರುಗಳು ತೇಲಿದವು. ಯಲಹಂಕ, ಲಾಲ್‌ಬಾಗ್‌, ನಾಯಂಡಹಳ್ಳಿ, ಯಶವಂತಪುರ, ಜಯನಗರ, ಶಾಂತಿನಗರ, ಕೆಂಪೇಗೌಡ ಬಸ್‌ ನಿಲ್ದಾಣ, ವರ್ತೂರು, ಕೆ.ಆರ್‌.ಪುರ ಸೇರಿದಂತೆ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡಿದರು.

ಚಾಲುಕ್ಯ ವೃತ್ತ, ಓಕಳೀಪುರ ಜಂಕ್ಷನ್‌, ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣದ ಬಳಿಯ ಅಂಡರ್‌ ಪಾಸ್‌ ಸೇರಿದಂತೆ ವಿವಿಧ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು.

ಹೊಯ್ಸಳನಗರದಲ್ಲಿ ಹೆಚ್ಚು ಮಳೆ:

ನಗರದಲ್ಲಿ ಗುರುವಾರ ರಾತ್ರಿ ವೇಳೆಗೆ 22.5 ಮಿ.ಮೀ ಸರಾಸರಿ ಮಳೆಯಾದ ವರದಿಯಾಗಿದೆ. ಹೊಯ್ಸಳನಗರ ಹೆಚ್ಚು 17.5 ಮಿ.ಮೀ ಮಳೆಯಾದ ವರದಿಯಾಗಿದೆ. ವರ್ತೂರು 15.5, ದೊಡ್ಡಾನೆಕುಂದಿ 14.5, ಕೆ.ಆರ್‌.ಪುರ 13, ಎಚ್‌ಎಸ್‌ಆರ್‌ ಲೇಔಟ್‌ 11, ದೊಡ್ಡಬಾಣಹಳ್ಳಿ, ಯಲಹಂಕ, ಗೊಟ್ಟಿಗೆಹಳ್ಳಿ ತಲಾ 9.5 , ಲಾಲ್‌ಬಾಗ್‌ 9, ಬಸವನಗುಡಿ 8.5, ಅಗ್ರಹಾರ ದಾಸರಹಳ್ಳಿ 7, ದೊಮ್ಮಸಂದ್ರ 6.5, ದೊಡ್ಡಗುಬ್ಬಿ ತಲಾ 5.5, ಬಿದರಹಳ್ಳಿ 5, ಚಿಕ್ಕಬಾಣವಾರ 4.5 ಹಾಗೂ ದಾಸನಪುರ ಮತ್ತು ಯಶವಂತಪುರ ತಲಾ 3.5 ಮಿ.ಮೀ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.

ಮುನ್ನೆಚ್ಚರಿಕೆ ವಹಿಸಲು ಮೇಯರ ಸೂಚನೆ

ನಗರದಲ್ಲಿ ನಾಲ್ಕೈದು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರು ಬಿಬಿಎಂಪಿ ಕೇಂದ್ರ ಕಚೇರಿಯ ತುರ್ತು ಸಹಾಯವಾಣಿ ಕೇಂದ್ರದಲ್ಲಿ ಕುಳಿತು ಎಲ್ಲ ವಲಯದ ಅಧಿಕಾರಿಗಳಿಗೆ ಕರೆ ಮಾಡಿ ಸಾರ್ವಜನಿಕರ ನೆರವಿಗೆ ತಕ್ಷಣ ಧಾವಿಸುವಂತೆ ಸೂಚನೆ ನೀಡಿದ್ದಾರೆ. ಮಳೆಯ ಅನಾಹುತಗಳನ್ನು ತಪ್ಪಿಸುವುದಕ್ಕೆ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಸೂಚಿಸಿದ್ದಾರೆ. ಅಲ್ಲದೆ, ಯಾವುದೇ ರಸ್ತೆಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ನೀರು ಸರಾಗವಾಗಿ ಚರಂಡಿಗಳಿಗೆ ಹರಿದುಹೋಗಲು ವ್ಯವಸ್ಥೆ ಮಾಡಬೇಕೆಂದು ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಚಿಸಿದ್ದಾರೆ.

click me!