* ರಾಜ್ಯದ 14 ಜಿಲ್ಲೆಗಳಲ್ಲಿ ಮಳೆಯ ‘ರೆಡ್ ಅಲರ್ಟ್’
*ಜು. 21ರವರೆಗೆ ಭಾರೀ ಮಳೆ ಮುನ್ಸೂಚನೆ
* ಕಳೆದ 24 ಗಂಟೆಯಲ್ಲಿ ಉತ್ತರ ಕನ್ನಡದ ಭಟ್ಕಳದಲ್ಲಿ 21ಸೆಂ.ಮೀ. ಅತ್ಯಧಿಕ ಮೆಳೆ ದಾಖಲು
ಬೆಂಗಳೂರು(ಜು.19): ಹವಾಮಾನ ವೈಪರಿತ್ಯ ಪರಿಣಾಮ ರಾಜ್ಯದಲ್ಲಿ ಜು.21ರವರೆಗೆ ಗುಡುಗು ಸಹಿತ ಧಾರಾಕಾರ ಮಳೆಯಾಗಲಿದ್ದು, ಎರಡು ದಿನ 14 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಷೋಷಿಸಲಾಗಿದೆ.
ರಾಜ್ಯದ ಕರಾವಳಿ ಸಮೀಪ ಅರಬ್ಬಿ ಸಮುದ್ರದಲ್ಲಿ ಗೊಂಡಿದೆ. ಜು.21ರಂದು ಬಂಗಾಳಕೊಲ್ಲಿಯಲ್ಲಿ ಸಹ ವಾಯುಭಾರ ಕುಸಿಯುವ ಎಲ್ಲ ಲಕ್ಷಣಗಳು ಇವೆ. ಈ ಕಾರಣದಿಂದ ರಾಜ್ಯದಲ್ಲಿ ತಂಪು ಗಾಳಿ ಬೀಸುವಿಕೆ ಪ್ರಮಾಣ ಹೆಚ್ಚಾಗಿದೆ. ರಾಜ್ಯಾದ ಕೆಲವೆಡೆ 20 ಸೆಂ.ಮೀ.ಗಿಂತಲೂ ಅತ್ಯಧಿಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಈಗಾಗಲೇ ಜೋರಾಗಿದ್ದು, ಅದು ಮುಂದಿನ ಎರಡು ದಿನ ಇನ್ನಷ್ಟುಹೆಚ್ಚಾಗಲಿದೆ. ಉಡುಪಿ, ಉತ್ತರಕನ್ನಡ, ದಕ್ಷಿಣಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳ ಕೆಲವೆಡೆ ಜು.19 ಮತ್ತು ಜು.20ರಂದು ಅತ್ಯಧಿಕ ಮಳೆ ಬೀಳಲಿರುವ ಹಿನ್ನೆಲೆಯಲ್ಲಿ ‘ರೆಡ್‌ಅಲರ್ಟ್’ ನೀಡಲಾಗಿದೆ. ಇದೇ ಜಿಲ್ಲೆಗಳಲ್ಲಿ ಜು.21ರಂದು ಮಳೆ ಅಬ್ಬರ ತುಸು ತಗ್ಗಲಿದ್ದು ಅಂದು ‘ಆರೆಂಜ್ ಅಲರ್ಟ್’ ಕೊಡಲಾಗಿದೆ. ಕರಾವಳಿ ಭಾಗದಲ್ಲಿ ಗಾಳಿಯ ವೇಗ ಗಂಟೆಗೆ ಸುಮಾರು 65 ಕಿ.ಮೀ.ತಲುಪುವ ಸಾಧ್ಯತೆ ಇದ್ದು, ಮೀನುಗಾರಿಕೆಗೆ ಇಳಿಯದಂತೆ ಎಚ್ಚರಿಸಲಾಗಿದೆ.
ಭಟ್ಕಳ; ಸಿನಿಮೀಯ ರೀತಿ ಹತ್ತು ಮೀನುಗಾರರ ರಕ್ಷಣೆ
ಉತ್ತರ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಬಿದ್ದ ಸಾಧಾರಣ ಮಳೆ ಸೋಮವಾರದಿಂದ ಮತ್ತಷ್ಟು ಚುರುಕಾಗುವ ಸಾಧ್ಯತೆ ಇದೆ. ಹೀಗಾಗಿ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಿಗೆ ಜು.19 ಮತ್ತು 20ರಂದು ‘ಆರೆಂಜ್ ಅಲರ್ಟ್’ ಮತ್ತು ಉಳಿದ ಕೆಲವು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಇದೇ ವೇಳೆ ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ತುಮಕೂರು, ಮೈಸೂರು ಜಿಲ್ಲೆಗಳಲ್ಲಿ ಅಲಲ್ಲಿ ಸಾಧಾರಣ ಮಳೆ ಬೀಳಲಿದೆ.
ಎಲ್ಲಿ ಎಷ್ಟು ಮಳೆ?:
ಕಳೆದ 24 ಗಂಟೆಯಲ್ಲಿ ಉತ್ತರ ಕನ್ನಡದ ಭಟ್ಕಳದಲ್ಲಿ 21ಸೆಂ.ಮೀ. ಅತ್ಯಧಿಕ ಮೆಳೆ ದಾಖಲಾಗಿದೆ. ದಾವಣಗೆರೆಯ ಉಚ್ಚಂಗಿದುರ್ಗ 20, ಉತ್ತರ ಕನ್ನಡದ ಶಿರಾಲಿ, ಶಿವಮೊಗ್ಗದ ಆಗುಂಬೆಯಲ್ಲಿ ತಲಾ 18 ಸೆಂ.ಮೀ, ಉಡುಪಿ ಜಿಲ್ಲೆಯ ಕುಂದಾಪುರ, ಚಿಕ್ಕಬಳ್ಳಾಪುರದ ತೊಂಡೆಬಾವಿ 16, ದಾವಣಗೆರೆ 15, ದಕ್ಷಿಣ ಕನ್ನಡದ ಸುಬ್ರಹ್ಮಣ್ಯದಲ್ಲಿ 13 ಸೆಂ.ಮೀ. ಮಳೆ ಬಿದ್ದಿದೆ. ಬೀದರ್ (34ಡಿ.ಸೆ) ಹಾಗೂ ಕಲಬುರಗಿ (32ಡಿ.ಸೆ)ಯಲ್ಲಿ ಮಾತ್ರ ಗರಿಷ್ಠ ತಾಪಮಾನ ದಾಖಲಾದದ್ದು ಬಿಟ್ಟರೆ ಬೇರೆಲ್ಲೂ ಅಷ್ಟಾಗಿ ಬಿಸಿಲು ಕಂಡು ಬರಲಿಲ್ಲ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.