* ಉತ್ತರ ಕನ್ನಡದಲ್ಲಿ ಮನೆ ಗೋಡೆ ಕುಸಿದು ಮಹಿಳೆ ಸಾವು
* ಬಸವಸಾಗರ ಜಲಾಶಯ ಬಹುತೇಕ ಭರ್ತಿ
* ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರಲ್ಲೂ ದಿನವಿಡೀ ಸುರಿದ ಮಳೆ
ಬೆಂಗಳೂರು(ಜು.14): ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ದಿನವಿಡೀ ಮಳೆಯಾಗಿದ್ದು, ಉತ್ತರ ಕನ್ನಡದಲ್ಲಿ ಮನೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಈ ಮಧ್ಯೆ, ಜು.18ರ ವರೆಗೆ ಕರಾವಳಿಯಲ್ಲಿ ಭಾರೀ ಗಾಳಿ ಮಳೆಯಾಗುವ ಮುನ್ಸೂಚನೆ ಇದ್ದು, ಜು.18ರ ವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಉತ್ತಮ ಮಳೆಯಾಗಿದ್ದು, ಮಲೆನಾಡು ಜಿಲ್ಲೆಗಳಾದ ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರಲ್ಲೂ ದಿನವಿಡೀ ಮಳೆ ಸುರಿದಿದೆ. ಧಾರವಾಡ, ಗದಗ, ಹಾವೇರಿ, ಬೀದರ್, ಕಲಬುರಗಿ, ರಾಯಚೂರು ಹಾಗೂ ಯಾದಗಿರಿಯಲ್ಲಿ ಆಗಾಗ ಬಿಟ್ಟು ಬಿಟ್ಟು ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ, ಕುಮಟಾ, ಮುಂಡಗೋಡ, ಸಿದ್ದಾಪುರದಲ್ಲಿ ಮಳೆ ಅಬ್ಬರ ಜೋರಾಗಿದ್ದು, ಶಿರಸಿಯ ಮುಂಡಿಗೆಹಳ್ಳಿಯಲ್ಲಿ ಶಿಥಿಲಗೊಂಡಿದ್ದ ಮನೆ ಗೋಡೆ ಕುಸಿದಿದ್ದರಿಂದ ಯಶೋದಾ ಬಂಗಾರ್ಯ ಗೌಡ (31) ಮೃತರಾಗಿದ್ದಾರೆ.
ಹೂವಿನಹಡಗಲಿ: ಭಾರೀ ಮಳೆಗೆ 300 ಎಕರೆ ಬೆಳೆಹಾನಿ
ಬಸವಸಾಗರ ಜಲಾಶಯ ಬಹುತೇಕ ಭರ್ತಿ-ಯಾದಗಿರಿ ಜಿಲ್ಲೆಯ ನಾರಾಯಣಪುರದಲ್ಲಿರುವ ಬಸವಸಾಗರ ಡ್ಯಾಂಗೆ ಆಲಮಟ್ಟಿಯಿಂದ ಹೆಚ್ಚಿನ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂ ಬಹುತೇಕ ಭರ್ತಿಯಾಗುವ ಹಂತ ತಲುಪಿದೆ. ಡ್ಯಾಂನ ಗರಿಷ್ಠ ಮಟ್ಟ 492.25 ಮೀ. ಇದ್ದು, ಈಗಾಗಲೇ 491.70 ಮೀ. ನೀರು ಸಂಗ್ರಹವಾಗಿದೆ.