ತಿರುಚ್ಚಿ (ಜು.16): ಮೇಕೆದಾಟು ಡ್ಯಾಂ ವಿಷಯವಾಗಿ ತಮಿಳುನಾಡು ಬಿಜೆಪಿ ಘಟಕ ಸರ್ಕಾರದ ಪರ ನಿಲ್ಲುತ್ತದೆ ಎಂದು ನೂತನ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಅಣ್ಣಾಮಲೈ ಗುರುವಾರ ಹೇಳಿಕೆ ನೀಡಿದ್ದಾರೆ.
ತಿರುಚ್ಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ವಿಷಯವಾಗಿ ನಮ್ಮ ಪಕ್ಷದ ನಿಲುವು ಸ್ಪಷ್ಟವಾಗಿದೆ. ನಾವು ಈ ವಿಷಯವಾಗಿ ರಾಜಕೀಯ ಮಾಡಲು ಬಯಸುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಆಡಳಿತದ ಸರ್ಕಾರವಿದ್ದರೂ, ತಮಿಳುನಾಡು ಬಿಜೆಪಿ ತಮಿಳುನಾಡು ಜನರು ಮತ್ತು ರೈತರ ಹಿತಾಸಕ್ತಿಯ ಪರವಾಗಿ ಕಾರ್ಯನಿರ್ವಹಿಸಲಿದೆ. ತಮಿಳುನಾಡು ರೈತರಿಗೆ ಯಾವುದೇ ಸಮಸ್ಯೆಯನ್ನು ಎದುರಿಸಬಾರದು. ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ತನ್ನ ಪಾಲಿನ ಕಾವೇರಿ ನೀರನ್ನು ಪಡೆಯಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಮಸ್ಯೆ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಪಾತ್ರ ನಿಭಾಯಿಸುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ, ಎಲ್ಲಾ ಪಕ್ಷಗಳು ಈ ವಿಷಯವಾಗಿ ಸಂಘಟಿತ ತೀರ್ಮಾನ ಕೈಗೊಳ್ಳಲಿವೆ. ಅದಕ್ಕೆ ತಾವೂ ಬದ್ಧವಾಗಿರುವುದಾಗಿ ಹೇಳಿದ್ದಾರೆ.
ಚುನಾವಣೆಯಲ್ಲಿ ಸೋತು ನಿರಾಸೆಯಲ್ಲಿದ್ದ ಅಣ್ಣಾಮಲೈಗೆ ಒಲಿದು ಬಂತು ಮಹತ್ವದ ಹುದ್ದೆ
ಮೇಕೆದಾಟು ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಆಗಲಿರುವ ಸರ್ವಪಕ್ಷ ನಿಯೋಗದಲ್ಲಿ ಬಿಜೆಪಿ ಮುಖಂಡರು ಕೂಡ ಭಾಗಿಯಾಗಲಿದ್ದಾರೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ಅಣ್ಣಾಮಲೈ ಅವರು ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಹೆಸರು ಮಾಡಿದ್ದರು. ಬಳಿಕ ಅವರು ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿದ್ದರು.