
ಬೆಂಗಳೂರು (ಜು.18): ರಾಜಧಾನಿ ಬೆಂಗಳೂರು, ಕರಾವಳಿ, ಮಲೆನಾಡು ಸೇರಿ 14 ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್‌ನ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದಲ್ಲಿ ಮುಂಗಾರು ಮಾರುತಗಳು ಮತ್ತೆ ಸಕ್ರಿಯವಾಗಿದ್ದು ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ.
ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಕೋಲಾರ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಜು.19ರಿಂದ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ. ಅದೇ ರೀತಿ ಮಲೆನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ನ ಮುನ್ಸೂಚನೆ ನೀಡಲಾಗಿದೆ.
ಉಳಿದಂತೆ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಕಾಲ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಮುಲ್ಕಿಯಲ್ಲಿ ಅತಿ ಹೆಚ್ಚು 30 ಸೆಂ.ಮೀ. ಮಳೆಯಾಗಿದೆ. ಮಂಗಳೂರು ವಿಮಾನನಿಲ್ದಾಣ ಹಾಗೂ ಶಕ್ತಿನಗರದಲ್ಲಿ ತಲಾ 21, ಮಾಣಿ 19, ಮಂಕಿ 18, ಮಂಗಳೂರು 17, ಸುಳ್ಯ 16, ಪುತ್ತೂರು 15, ಕೋಟ, ಬಂಟ್ವಾಳದಲ್ಲಿ ತಲಾ 14, ಕಾರವಾರ 12, ಉಡುಪಿ, ಶಿರಾಲಿ, ಕಾರ್ಕಳ, ಭಾಗಮಂಡಲದಲ್ಲಿ ತಲಾ 11, ಕುಂದಾಪುರ 10, ಮೂಡಬಿದಿರೆ, ಆಗುಂಬೆಯಲ್ಲಿ ತಲಾ 9 ಸೆಂ.ಮೀ. ಮಳೆಯಾದ ವರದಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚುರುಕುಗೊಂಡ ಪುನರ್ವಸು ಮಳೆ: ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಚುರುಕಾಗಿದೆ. ಶಿವಮೊಗ್ಗ ಜಿಲ್ಲೆಯ ಶೃಂಗೇರಿಯಲ್ಲಿ ಭಾರೀ ಮಳೆಯಾಗಿದ್ದು ನದಿಗಳು ತುಂಬಿ ಹರಿಯುತ್ತಿವೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ಮಳೆ ಅಬ್ಬರಿಸುವ ಮುನ್ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಪುರ ಬಳಿ ಜಲಪಾತವೊಂದರಲ್ಲಿ ಏಕಾಏಕಿ ನೀರು ಹೆಚ್ಚಿದ್ದರಿಂದ ಪ್ರವಾಸಿಗರು ಸಿಲುಕಿ ಸಂಕಷ್ಟಕ್ಕೆ ಈಡಾದ ಘಟನೆ ನಡೆದಿದೆ. ಪುನರ್ವಸು ಮಳೆಯು ರಾಜ್ಯದಲ್ಲಿ ಬುಧವಾರದಿಂದ ಚುರುಕುಗೊಂಡಿದೆ. ಶಿವಮೊಗ್ಗ ಜಿಲ್ಲೆಯ ಶೃಂಗೇರಿ ತಾಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರಿದಿದೆ.
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದೆಲ್ಲೆಡೆ ಭಾರೀ ಮಳೆ ಸುರಿಯಿತು. ಮಂಗಳವಾರ ರಾತ್ರಿಯಿಡೀ ಆರ್ಭಟಿಸಿದ ಮಳೆಯಿಂದ ನದಿಗಳೆಲ್ಲ ತುಂಬಿ ಹರಿಯುತ್ತಿದೆ. ತುಂಗಾ ನದಿ, ನಂದಿನಿ, ನಳಿನಿ ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಶೃಂಗೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಸಂದರ್ಭದಲ್ಲಿ ಮಣ್ಣು ತೆಗೆದ ಕಡೆಯೆಲ್ಲಾ ಗುಡ್ಡ ಕುಸಿತ, ಭೂಕುಸಿತ ಉಂಟಾಗುತ್ತಿದ್ದು ಮನೆಗಳು ಕುಸಿದು ಬೀಳುತ್ತಿವೆ. ಇನ್ನು ಕೆಲವು ಅಪಾಯದಂಚಿನಲ್ಲಿದೆ.ಇನ್ನು ಉಡುಪಿ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇವುಗಳ ಜೊತೆಗೆ ಕೊಡಗಿನಲ್ಲಿ ಪದವಿ ಪೂರ್ವ ಕಾಲೇಜುಗಳಿಗೂ ರಜೆ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ