ಬೆಂಗಳೂರಿಗೆ ರಾಹುಲ್ ಗಾಂಧಿ, 15 ಸೆಕ್ಟರ್‌ಗಳಾಗಿ ವಿಭಜನೆ 6000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

Published : Aug 07, 2025, 06:28 PM IST
Rahul Gandhi

ಸಾರಾಂಶ

ರಾಹುಲ್ ಗಾಂಧಿಯವರ ಬೆಂಗಳೂರು ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್. 15 ಸೆಕ್ಟರ್‌ಗಳಲ್ಲಿ 6000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ. ತುರ್ತು ಸೇವೆಗಳು, ಆರೋಗ್ಯ ಸಿಬ್ಬಂದಿ ಸಜ್ಜು.

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬೆಂಗಳೂರು ಪ್ರವಾಸದ ವೇಳೆ ನಡೆಸಲಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತೆಗಾಗಿ ಭಾರೀ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ನಗರವನ್ನು 15 ಸೆಕ್ಟರ್‌ಗಳಾಗಿ ವಿಭಜಿಸಿ, ಪ್ರತಿಯೊಂದು ಸೆಕ್ಟರ್‌ಗೆ ಒಬ್ಬ ಡಿಸಿಪಿಯವರ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಒಟ್ಟು 6000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಫ್ರೀಡಂ ಪಾರ್ಕ್‌ನಲ್ಲಿ ತಾತ್ಕಾಲಿಕ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸುವ ಜನರನ್ನು ನಿಗದಿತ ಸ್ಥಳಗಳಲ್ಲಿ ನಿಭಾಯಿಸಲು ಸುಮಾರು 500 ಪೊಲೀಸರನ್ನೇ ವಿಶೇಷವಾಗಿ ನಿಯೋಜಿಸಲಾಗಿದೆ. ಮುಖ್ಯ ರಸ್ತೆಗಳು ಹಾಗೂ ಪ್ರಮುಖ ಜಂಕ್ಷನ್‌ಗಳಾದ ಮಹಾರಾಣಿ ಕಾಲೇಜು ಜಂಕ್ಷನ್, ಶೇಷಾದ್ರಿ ರಸ್ತೆ, ಮೆಜೆಸ್ಟಿಕ್, ಉಪ್ಪಾರಪೇಟೆ, ಕಾಟನ್ ಪೇಟೆ, ಕೆಂಪೇಗೌಡ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಇಳಿಸುಲೆಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಡಿಸಿಪಿಗಳ ನೇತೃತ್ವದಲ್ಲಿ 15 ಸೆಕ್ಟರ್‌ಗಳಲ್ಲಿ ಒಟ್ಟು 2500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಗರುಡ ಫೋರ್ಸ್ ಮತ್ತು ಡಿ-ಸ್ವಾಟ್ ಪಡೆಗಳನ್ನು ನಿಯೋಜಿಸಲಾಗಿದೆ. ಆರೋಗ್ಯ ಮತ್ತು ತುರ್ತು ಸೇವೆಗಳೂ ಸಜ್ಜಾಗಿವೆ. ಎಮರ್ಜೆನ್ಸಿಗೆ ಅಂಬ್ಯುಲೆನ್ಸ್‌ಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಅಗ್ನಿಶಾಮಕ ದಳದ ವಾಹನಗಳು, ಕ್ವಿಕ್ ರೆಸ್ಪಾನ್ಸ್ ಟೀಮ್ ಹಾಗೂ 5 ವಾಯುವಜ್ರ ಬಸ್ ಸೇರಿ ಒಟ್ಟು 15 ಬಸ್‌ಗಳನ್ನೂ ನಿಯೋಜನೆ ಮಾಡಲಾಗಿದೆ. ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯ ಸಹಕಾರವೂ ಲಭ್ಯವಿದೆ.

ಪ್ರತಿಭಟನಾ ಮೆರವಣಿಗೆ ಸಾಗಲಿರುವ ಮಾರ್ಗದಲ್ಲಿ – ಮಹಾರಾಣಿ ಜಂಕ್ಷನ್, ಮುಖ್ಯ ಚುನಾವಣಾಯುಕ್ತರ ಕಚೇರಿ, ಕಾವೇರಿ ಗೆಸ್ಟ್ ಹೌಸ್, ಬಿಎಂಸಿ ಹಾಸ್ಟೆಲ್, ಓಣಿ ಆಂಜನೇಯ ದೇವಸ್ಥಾನ, ಜ್ಞಾನಜ್ಯೋತಿ ಆಡಿಟೋರಿಯಂ, ಪ್ಯಾಲೇಸ್ ರಸ್ತೆ ಜಂಕ್ಷನ್ ಮುಂತಾದಲ್ಲಿ ನಿಖರವಾದ ಬಂದೋಬಸ್ತ್ ಕಲ್ಪಿಸಲಾಗಿದೆ.

ವೈ. ರಾಮಚಂದ್ರ ರಸ್ತೆ, ಕುರುಬರ ಸಂಘ ಸರ್ಕಲ್, ಸಾಗರ್ ಜಂಕ್ಷನ್, ಗಾಂಧಿನಗರ, ಪೋತಿಸ್ ಜಂಕ್ಷನ್ ಮುಂತಾದ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಸಂಪೂರ್ಣ ತಯಾರಿಯಲ್ಲಿದ್ದು, ಟ್ರಾಫಿಕ್ ಜಾಮ್ ಆಗದಂತೆ ಟ್ರಾಫಿಕ್ ಪೊಲೀಸರನ್ನೂ ನಿಯೋಜನೆ ಮಾಡಲಾಗಿದೆ.

ಪ್ರತಿಭಟನೆಗೆ ಪೊಲೀಸರು ಎಲ್ಲ ಭದ್ರತೆ ತಗೊಂಡಿದ್ದಾರೆ: ಗೃಹ ಸಚಿವ

ಫ್ರೀಡಂ ಪಾರ್ಕ್‌ನಲ್ಲಿ ನಡೆದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಕಾಂಗ್ರೆಸ್ ಆಯೋಜಿಸಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಅವರು ವಿವರವಾಗಿ ಹೇಳಿದಂತೆ, ಚುನಾವಣಾ ಆಯೋಗದ ಕಚೇರಿಗೆ ಎಷ್ಟು ಮಂದಿ ಹೋಗಬೇಕು ಎಂಬುದರ ಬಗ್ಗೆ ಅಂತಿಮ ನಿರ್ಧಾರವನ್ನು ಪೊಲೀಸರು ತೆಗೆದುಕೊಳ್ಳುತ್ತಾರೆ. ಕೊನೆಯ ಘಟ್ಟದಲ್ಲಿ ಆಯೋಗದ ಅಧಿಕಾರಿಗಳನ್ನು ಭೇಟಿಯಾದ ನಂತರ, ಭಾಗವಹಿಸುವವರ ಸಂಖ್ಯೆ ಕುರಿತು ಅನುಮತಿ ನೀಡಲಾಗುತ್ತದೆ ಎಂದರು.

ಪಾದಯಾತ್ರೆ ನಡೆಸಲು ನ್ಯಾಯಾಲಯ ನಿರ್ಬಂಧ ಹೇರಿರುವುದರಿಂದ, ಯಾವುದೇ ಮೆರವಣಿಗೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. “ದೇಶದಾದ್ಯಂತ ಅಕ್ರಮಗಳು ನಡೆಯುತ್ತಿವೆ. ನಮ್ಮ ಕರ್ನಾಟಕದಲ್ಲಿಯೂ, ವಿಶೇಷವಾಗಿ ಮಹದೇವಪುರದಲ್ಲಿ ಇದೇ ರೀತಿಯ ಘಟನೆಗಳು ನಡೆದಿವೆ,” ಎಂದು ಗೃಹ ಸಚಿವರು ಆರೋಪಿಸಿದರು.

ನಾಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತಷ್ಟು ಮಾಹಿತಿಗಳನ್ನು ಬಹಿರಂಗಪಡಿಸಲಿದ್ದಾರೆ ಎಂದು ಅವರು ಭವಿಷ್ಯವಾಣಿ ಮಾಡಿದರು. ಚುನಾವಣಾ ಆಯೋಗ ಏನೆಲ್ಲಾ ಮಾಹಿತಿ ಕೇಳಿದ್ದದೆಯೋ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.

ಒಳ ಮೀಸಲಾತಿ ಕುರಿತ ವರದಿಯು ಈಗಾಗಲೇ ಸಂಪುಟದ ಮುಂದಿಡಲಾಗಿದೆ. ಆದರೆ ಈ ವಿಷಯದ ಬಗ್ಗೆ ಇಂದು ಯಾವುದೇ ಚರ್ಚೆ ನಡೆದಿಲ್ಲ. ಈ ವರದಿಗೆ ಸಂಬಂಧಿಸಿದ ವಿಶೇಷ ಸಭೆಯನ್ನು ಶೀಘ್ರದಲ್ಲೇ ಕರೆಯಲಾಗುತ್ತದೆ ಎಂಬ ನಿರೀಕ್ಷೆಯಿದೆ. ಸಭೆಯ ದಿನಾಂಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಲಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ
ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ