
ಬೆಂಗಳೂರು (ಜೂ.21): ಹೊರ ರಾಜ್ಯಗಳಿಂದ ಬರುವ ಹಾಲಿನ ಗುಣಮಟ್ಟದ ಬಗ್ಗೆ ಸಂಶಯ ಬಂದ ಹಿನ್ನೆಲೆಯಲ್ಲಿ ಗಡಿ ಭಾಗಗಳಲ್ಲೇ ಹಾಲಿನ ಗುಣಮಟ್ಟ ಪರೀಕ್ಷಿಸಲಾಗುತ್ತಿದೆ. ಕಲಬೆರಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಖಾಸಗಿ ಕಂಪನಿಗಳ ಹಾಲಿನಲ್ಲಿ ಕಲಬೆರಕೆ ಮಾಡಲಾಗುತ್ತಿದ್ದು, ಆರೋಗ್ಯಕ್ಕೆ ಹಾನಿಕಾರಕ ಅಂಶಗಳು ಇವೆ ಎಂಬ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಬರುವ ಹಾಲನ್ನು ಗಡಿ ಭಾಗಗಳಲ್ಲೇ ತಪಾಸಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಸಾಕಷ್ಟು ನಂದಿನಿ ಹಾಲು ಲಭ್ಯವಿದ್ದರೂ ಕೆಲವರು ತಮಿಳುನಾಡಿನ ಕೃಷ್ಣಗಿರಿ ಮತ್ತಿತರ ಭಾಗಗಳಿಂದ ಹಾಲು ತರಿಸುತ್ತಿದ್ದಾರೆ. ಹೀಗಾಗಿ ಗುಣಮಟ್ಟ ಪರೀಕ್ಷಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ಜನೌಷಧಿ ಕೇಂದ್ರಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿಲ್ಲ. ಔಷಧಿಗಳು ಗುಣಮಟ್ಟ ಹೊಂದಿವೆಯೇ ಎಂದು ಪರಿಶೀಲಿಸಿದ್ದಾರೆ. ಜನೌಷಧಿ ಹೆಸರಲ್ಲಿ ಯಾವ್ಯಾವುದೋ ಔಷಧಿ ನೀಡಿದರೆ ಸಹಿಸುವುದಿಲ್ಲ. ಎಲ್ಲ ಸರಿ ಇದ್ದರೆ ಜನೌಷಧಿ ಕೇಂದ್ರದವರು ಆತಂಕಪಡಬೇಕಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಬಾಬ್, ಶವರ್ಮಾ, ಗೋಬಿ ಸೇರಿ ಯಾವುದೇ ಆಹಾರ ಪದಾರ್ಥಗಳಿಗೆ ವಿಷಕಾರಿ ಬಣ್ಣ ಬಳಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹೋಟೆಲ್‌ನವರು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಲರ್‌ಗಳನ್ನು ಬಳಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ