* ರಾಜ್ಯದಲ್ಲಿ ಕೋವಿಡ್ ಮಧ್ಯೆ ಬ್ಲ್ಯಾಕ್ ಫಂಗಸ್ ಅಟ್ಟಹಾಸ
* ಬ್ಲ್ಯಾಕ್ ಫಂಗಸ್ ಬಗ್ಗೆ ಸ್ಪಷ್ಟನೆ ಕೊಟ್ಟ ಸಚಿವ ಡಾ.ಕೆ.ಸುಧಾಕರ್
* ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದ ಆರೋಗ್ಯ ಸಚಿವರು
ದಾವಣಗೆರೆ, (ಮೇ.21): ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕಿನ ಮಧ್ಯೆ ಬ್ಲ್ಯಾಕ್ ಫಂಗಸ್ ಆತಂಕ ಶುರುವಾಗಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಬ್ಲ್ಯಾಕ್ ಫಂಗಸ್ ಸೋಂಕು ಕಂಡುಬಂದಿದ್ದು, ಕೆಲವರು ಇದರಿಂದ ಸಾವನ್ನಪ್ಪಿದ್ದಾರೆ.
ಇನ್ನು ಇದೊಂದು ಒಬ್ಬರಿಂದ ಮತ್ತೊಬ್ಬರಿಗೆ ಹರಡಡುವ ಸಾಂಕ್ರಾಮಿಕ ರೋಗ ಎಂಬ ಚರ್ಚೆಗಳು ನಡೆದಿದ್ದು, ಜನರು ಭಯಬೀತರಾಗಿದ್ದಾರೆ. ಇನ್ನು ಈ ಬಗ್ಗೆ ಸ್ವತಃ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಹತ್ವದ ಸ್ಪಷ್ಟನೆಯೊಂದನ್ನು ಕೊಟ್ಟಿದ್ದಾರೆ.
ಈ ಬಗ್ಗೆ ದಾವಣಗೆರೆಯಲ್ಲಿ ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಲ್ಯಾಕ್ ಫಂಗಸ್ ಸೋಂಕು ಕಂಡುಬಂದಿದ್ದು, ಇದು ಸಾಂಕ್ರಾಮಿಕ ರೋಗವಲ್ಲ. ಆದ್ದರಿಂದ ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ನೋಡಿ ಅಪಾಯಕಾರಿ ಬ್ಲ್ಯಾಕ್ ಫಂಗಸ್ ಲಕ್ಷಣಗಳು! ನಿರ್ಲಕ್ಷ್ಯ ಬೇಡ
ಜಿಲ್ಲೆಯಲ್ಲಿಯೂ ಈವರೆಗೆ 15 ರಿಂದ 20 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಸೋಂಕಿಗೆ ಚಿಕಿತ್ಸೆ ದೊರಕುವಂತೆ ಮಾಡಲಾಗಿದೆ. ಸೋಂಕು ನಿವಾರಣೆಗೆ ಅಗತ್ಯವಿರುವ ಔಷಧಿ ಪೂರೈಕೆಗೂ ಕ್ರಮ ವಹಿಸಲಾಗಿದ್ದು, ಇದು ಸಾಂಕ್ರಾಮಿಕ ರೋಗವಲ್ಲ, ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದರು.
ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು, ಕೋವಿಡ್ ಚಿಕಿತ್ಸೆಯಲ್ಲಿ ಅತಿಯಾದ ಸ್ಟಿರಾಯ್ಡ್ ಬಳಕೆ, ಅನಿಯಂತ್ರಿತ ಮಧುಮೇಹ ಮುಂತಾದ ಕಾರಣಗಳಿಂದ ಈ ಸೋಂಕು ಉಂಟಾಗುತ್ತಿದೆ. ಕೋವಿಡ್ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಹೊಂದಿರುವವರ ಆರೋಗ್ಯ ತಪಾಸಣೆಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಬಿಡುಗಡೆಯಾದ ದಿನದಿಂದ 3, 7, 15 ದಿನಗಳ ಅವಧಿಯಲ್ಲಿ ಅವರಿಗೆ ಯಾವ ಬಗೆಯ ಪರೀಕ್ಷೆ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.