ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಾವಿಗೀಡಾದ ಘಟನೆ ಕುರಿತು ತನಿಖೆ ನಡೆಯುತ್ತಿದೆ. ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇದನ್ನು ಸರ್ಕಾರಿ ಪ್ರಾಯೋಜಿತ ಕೊಲೆ ಎನ್ನುತ್ತಾರೆ. ಹಾಗಾದರೆ, ಅವರ ಅಧಿಕಾರಾವಧಿಯಲ್ಲಿ ಕೆಪಿಎಂಇ ಮಸೂದೆ ಜಾರಿಯಾಗುವಾಗ ವೈದ್ಯರು ನಡೆಸಿದ ಮುಷ್ಕರದಿಂದ 70-80 ರೋಗಿಗಳ ಸಾವಿಗೀಡಾದರು.
ಬೆಂಗಳೂರು (ಸೆ.18): ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಾವಿಗೀಡಾದ ಘಟನೆ ಕುರಿತು ತನಿಖೆ ನಡೆಯುತ್ತಿದೆ. ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇದನ್ನು ಸರ್ಕಾರಿ ಪ್ರಾಯೋಜಿತ ಕೊಲೆ ಎನ್ನುತ್ತಾರೆ. ಹಾಗಾದರೆ, ಅವರ ಅಧಿಕಾರಾವಧಿಯಲ್ಲಿ ಕೆಪಿಎಂಇ ಮಸೂದೆ ಜಾರಿಯಾಗುವಾಗ ವೈದ್ಯರು ನಡೆಸಿದ ಮುಷ್ಕರದಿಂದ 70-80 ರೋಗಿಗಳ ಸಾವಿಗೀಡಾದರು. ಅದಕ್ಕೆ ಸಿದ್ದರಾಮಯ್ಯ ಕಾರಣ ಎಂದು ಹೇಳಬಹುದಾ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಮ್ಸ್ ಆಸ್ಪತ್ರೆಯಲ್ಲಿ ಸಂಭವಿಸಿದ ಸಾವಿನ ಘಟನೆ ಸಂಬಂಧ ತನಿಖೆ ನಡೆಯುತ್ತಿದ್ದು, ಘಟನೆಗೆ ಯಾರೇ ಕಾರಣವಾಗಿದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುವುದು. ಭಾನುವಾರ ನಾನೇ ಬಳ್ಳಾರಿಗೆ ಭೇಟಿ ನೀಡಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಿದ್ದೇನೆ. ಸರ್ಕಾರ ಯಾವುದೇ ಅಂಶವನ್ನು ಮುಚ್ಚಿಡುವುದಿಲ್ಲ. ಪ್ರತಿಯೊಬ್ಬರ ಜೀವವೂ ಸರ್ಕಾರಕ್ಕೆ ಬಹಳ ಮುಖ್ಯ ಎಂದರು.
ಬಳ್ಳಾರಿ ವಿಮ್ಸ್ ರೋಗಿಗಳ ಸಾವು ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್:ನಿರ್ದೇಶಕರ ಮೇಲಿನ ಸಿಟ್ಟಿಗೆ ಕರೆಂಟ್ ಕಟ್!
ಡಾ.ಸ್ಮಿತಾ ಅಧ್ಯಕ್ಷತೆಯಲ್ಲಿ ಉನ್ನತ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಸಮಿತಿಯವರು ಈಗಾಗಲೇ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು, ಕೆಲ ಎಲೆಕ್ಟ್ರಿಕ್ ಎಂಜಿನಿಯರ್‌ಗಳನ್ನು ಅಲ್ಲಿಗೆ ಕರೆದೊಯ್ಯಬೇಕು ಎಂದು ಸಮಿತಿಯವರು ತಿಳಿಸಿದ್ದರಿಂದ ಅದಕ್ಕೂ ವ್ಯವಸ್ಥೆ ಮಾಡಲಾಗಿದೆ. ಶೀಘ್ರದಲ್ಲಿಯೇ ಈ ಕುರಿತ ವರದಿ ಬರಲಿದ್ದು, ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದವರು. ಅವರು ಸರ್ಕಾರಿ ಪ್ರಾಯೋಜಿತ ಹತ್ಯೆ ಎಂಬ ಹೇಳಿಕೆ ನೀಡಿರುವುದು ವೈಯಕ್ತಿಕವಾಗಿ ನೋವಾಗಿದೆ. ಇದು ಒಬ್ಬ ನಾಯಕ ಹೇಳುವ ಮಾತಲ್ಲ. ದುರ್ಘಟನೆ ಬಗ್ಗೆ ಸಿದ್ದರಾಮಯ್ಯ ಜವಾಬ್ದಾರಿಯಿಂದ ವ್ಯಾಖ್ಯಾನ ಮಾಡಬೇಕು. 2017ರಲ್ಲಿ ಅವರು ಕೆಪಿಎಂಇ ಮಸೂದೆ ಜಾರಿಗೆ ಮುಂದಾದಾಗ ಬೆಳಗಾವಿ ಅಧಿವೇಶನ ವೈದ್ಯರು ಮುಷ್ಕರ ನಡೆಸಿದ್ದರು. ಆಗ ರಾಜ್ಯದಲ್ಲಿ 70-80 ಸಾವಾಗಿದ್ದು, ಇದಕ್ಕೆ ಸಿದ್ದರಾಮಯ್ಯ ಕಾರಣ ಎಂದು ಹೇಳಬಹುದಾ? ಎಂದು ಪ್ರಶ್ನಿಸಿದರು.
ಭಾನುವಾರ ಬಳ್ಳಾರಿಗೆ: ದುರ್ಘಟನೆಯಿಂದಾಗಿ ನಮಗೂ ನೋವಾಗಿದೆ. ಸಾವಿಗೀಡಾದ ರೋಗಿಗಳು ಆಸ್ಪತ್ರೆಗೆ ದಾಖಲಾದಾಗ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ. ಆದರೂ ಸರ್ಕಾರದಿಂದ ತನಿಖೆ ನಡೆಸಲಾಗುತ್ತಿದೆ. ನೊಂದವರ ಕುಟುಂಬಕ್ಕೆ ಈಗಾಗಲಾ ತಲಾ ಐದು ಲಕ್ಷ ರು. ಪರಿಹಾರವನ್ನು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಭಾನುವಾರ ನಾನೇ ಬಳ್ಳಾರಿಗೆ ಭೇಟಿ ನೀಡಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಿದ್ದೇನೆ. ಸರ್ಕಾರ ಯಾವುದೇ ಅಂಶವನ್ನು ಮುಚ್ಚಿಡುವುದಿಲ್ಲ. ಪ್ರತಿಯೊಬ್ಬರ ಜೀವವೂ ಸರ್ಕಾರಕ್ಕೆ ಬಹಳ ಮುಖ್ಯ ಎಂದರು.
ಆರೋಗ್ಯ ಸಚಿವರಿಗೆ ಅನಾರೋಗ್ಯ: ಅಧಿವೇಶನದಿಂದ ದೂರ ಉಳಿದ ಸುಧಾಕರ್
ಯಾವುದೇ ಶಾಸಕರು ಹೇಳಿದಾಕ್ಷಣ ಆಸ್ಪತ್ರೆಗೆ ನಿರ್ದೇಶಕರನ್ನು ನೇಮಿಸಲು ಸಾಧ್ಯವಿಲ್ಲ. ನಿರ್ದೇಶಕರನ್ನು ನೇಮಿಸಲು ಕೆಲ ನಿಯಮಗಳಿರುತ್ತವೆ. ಅರ್ಹರಾದವರನ್ನು ಮಾತ್ರ ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡಲಾಗುತ್ತದೆ. ಸಾರಿಗೆ ಸಚಿವ ಶ್ರೀರಾಮುಲು, ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್ ಸೇರಿದಂತೆ ಶಾಸಕರೆಲ್ಲಾ ಬಳ್ಳಾರಿಯಲ್ಲಿದ್ದಾರೆ. ಈ ಪ್ರಕ್ರಿಯೆ ಹೇಗೆ ನಡೆದಿದೆ ಎಂಬುದು ಅವರೆಲ್ಲರಿಗೂ ಗೊತ್ತಿದೆ. ಇದರಲ್ಲಿ ರಾಜಕಾರಣ ಮಾಡುವವರ ಘನತೆಯೇ ಕಡಿಮೆಯಾಗುತ್ತದೆ. ಇಂತಹ ವಿಚಾರದಲ್ಲಿ ಆರೋಪ ಮಾಡುವುದು ಬಹಳ ಸುಲಭ ಎಂದು ತಿಳಿಸಿದರು.