ಲಕ್ಷಣರಹಿತ ಕೊರೋನಾ ಸೋಂಕಿತರಿಗೆ ಇನ್ನು 7 ದಿನ ಕ್ವಾರಂಟೈನ್‌..!

Kannadaprabha News   | Asianet News
Published : Aug 12, 2020, 09:20 AM IST
ಲಕ್ಷಣರಹಿತ ಕೊರೋನಾ ಸೋಂಕಿತರಿಗೆ ಇನ್ನು 7 ದಿನ ಕ್ವಾರಂಟೈನ್‌..!

ಸಾರಾಂಶ

ಡಿಸ್ಚಾರ್ಜ್‌ ವೇಳೆ ಮತ್ತೆ ಕೋವಿಡ್‌ ಪರೀಕ್ಷೆ ಬೇಡ|ಆರೋಗ್ಯ ಇಲಾಖೆ ಪರಿಷ್ಕೃತ ಮಾರ್ಗಸೂಚಿ| ಎಚ್‌ಐವಿ, ಕಸಿ ಚಿಕಿತ್ಸೆಗೆ ಒಳಗಾದ ಸೋಂಕಿತರಿಗೆ ಸಂಪೂರ್ಣ ಗುಣಮುಖರಾದ ಬಳಿಕ ಒಮ್ಮೆ ಸೋಂಕು ಪರೀಕ್ಷೆ ಮಾಡಿ ಆಸ್ಪತ್ರೆಯಿಂದ ಬಿಡುಗಡೆ| ನಂತರ ಅವರು 14 ದಿನ ಹೋಂ ಐಸೋಲೇಷನ್‌ನಲ್ಲಿ ಇರಬೇಕು|

ಬೆಂಗಳೂರು(ಆ.12):  ಲಕ್ಷಣವಿಲ್ಲದ (ಎಸಿಮ್ಟಮ್ಯಾಟಿಕ್‌), ಸೌಮ್ಯ ಲಕ್ಷಣದ ಸೋಂಕಿತರ ಬಿಡುಗಡೆ ವೇಳೆ ಮತ್ತೆ ಕೋವಿಡ್‌ ಪರೀಕ್ಷೆ ನಡೆಸುವ ಅಗತ್ಯವಿಲ್ಲ, ಬಿಡುಗಡೆಯಾದ ಬಳಿಕ 14 ದಿನದ ಬದಲು ಇನ್ನು ಮುಂದೆ ಏಳು ದಿನ ಹೋಂ ಐಸೋಲೇಷನ್‌ನಲ್ಲಿದ್ದರೆ ಸಾಕು ಎಂದು ಆರೋಗ್ಯ ಇಲಾಖೆ ಪರಿಷ್ಕೃತ ಆದೇಶ ಪ್ರಕಟಿಸಿದೆ.

ಗಂಭೀರ ಸಮಸ್ಯೆ ಅಥವಾ ಲಕ್ಷಣಗಳಿರುವ ಸೋಂಕಿತರ ಆರೋಗ್ಯ ಸುಧಾರಿಸಿದ ಬಳಿಕ ಬಿಡುಗಡೆಗೂ ಮುನ್ನ ಕೋವಿಡ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಇರಬೇಕು. ಪಾಸಿಟಿವ್‌ ಬಂದರೆ ನಂತರದ 72 ಗಂಟೆಗಳಿಗೆ ಮತ್ತೆ ಪರೀಕ್ಷೆ ನಡೆಸಬೇಕು. ಬಿಡುಗಡೆ ಬಳಿಕ ಈ ಹಿಂದಿನಂತೆ 14 ದಿನಗಳ ಹೋಂ ಐಸೋಲೇಷನ್‌ನಲ್ಲಿರಬೇಕೆಂದು ತಿಳಿಸಿದೆ.

ಈವರೆಗೆ ಮನೆ (ಹೋಂ ಕೇರ್‌), ಆಸ್ಪತ್ರೆ ನಿಗಾ ಕೇಂದ್ರ, ಕೋವಿಡ್‌ ಚಿಕಿತ್ಸಾ ಕೇಂದ್ರಗಳಲ್ಲಿನ ಲಕ್ಷಣ ರಹಿತ, ಸೌಮ್ಯ ಲಕ್ಷಣವಿರುವವರು ಗುಣಮುಖರಾಗಿ ಬಿಡುಗಡೆಯಾದ ಬಳಿಕ ಕಡ್ಡಾಯವಾಗಿ 14 ದಿನಗಳ ಹೋಂ ಕ್ವಾರಂಟೈನ್‌ ಇರಬೇಕಿತ್ತು. ಸದ್ಯ ಇದನ್ನು ಏಳು ದಿನಗಳಿಗೆ ಇಳಿಸಲಾಗಿದೆ.

ಜಾಗೃತಿ ಕೊರತೆಯಿಂದಾಗಿ ಕೊರೋನಾ ಸೋಂಕು ಹೆಚ್ಚಳ

10 ದಿನಕ್ಕೆ ಬಿಡುಗಡೆ:

ಎಸಿಮ್ಟಮ್ಯಾಟಿಕ್‌, ಸೌಮ್ಯ ಹಾಗೂ ಸಾಧಾರಣ ಲಕ್ಷಣದ ಪ್ರಕರಣಗಳಲ್ಲಿ ಸೋಂಕು ದೃಢಪಟ್ಟನಂತರದ 10ನೇ ದಿನಕ್ಕೆ ಬಿಡುಗಡೆ ಮಾಡಬಹುದು. ಆದರೆ, ಬಿಡುಗಡೆಯ ಹಿಂದಿನ ಮೂರು ದಿನ ಅವರಿಗೆ ಯಾವುದೇ ಲಕ್ಷಣಗಳಿರಬಾರದು. ಈ ವೇಳೆ ಮತ್ತೆ ಪರೀಕ್ಷೆಯೂ ಅಗತ್ಯವಿಲ್ಲ. ಒಂದು ವೇಳೆ ಬಿಡುಗಡೆ ಬಳಿಕ ಸೋಂಕು ಲಕ್ಷಣ ಕಾಣಿಸಿಕೊಂಡರೆ ಸಮೀಪ ಆಸ್ಪತ್ರೆ ತೆರಳಿ ತಪಾಸಣೆಗೆ ಒಳಗಾಗಬೇಕು ಎಂದು ಸೂಚಿಸಿದೆ.

ಗಂಭೀರ ಲಕ್ಷಣ ಕಾಣಿಸಿಕೊಂಡು ಚಿಕಿತ್ಸೆ ಬಳಿಕ ಗುಣಮುಖರಾದವರನ್ನು ಕೊನೆಯ ಮೂರು ದಿನ ಯಾವುದೇ ಸೋಂಕು ಲಕ್ಷಣ ಇಲ್ಲದಿದ್ದರೆ 10ನೇ ದಿನ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು. ಒಂದು ವೇಳೆ 14 ದಿನವೂ ಸೋಂಕು ಲಕ್ಷಣ ಮುಂದುವರೆದರೆ ನಂತರದ ಮೂರು ದಿನ ಬಳಿಕ- ಅಂದರೆ 17ನೇ ದಿನ ಸೋಂಕು ಪರೀಕ್ಷೆ ಮಾಡದೇ ಬಿಡುಗಡೆ ಮಾಡಬಹುದು. ಉಳಿದಂತೆ ಎಚ್‌ಐವಿ, ಕಸಿ ಚಿಕಿತ್ಸೆಗೆ ಒಳಗಾದ ಸೋಂಕಿತರಿಗೆ ಸಂಪೂರ್ಣ ಗುಣಮುಖರಾದ ಬಳಿಕ ಒಮ್ಮೆ ಸೋಂಕು ಪರೀಕ್ಷೆ ಮಾಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು. ನಂತರ ಅವರು 14 ದಿನ ಹೋಂ ಐಸೋಲೇಷನ್‌ನಲ್ಲಿ ಇರಬೇಕು ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!