
ಬೆಂಗಳೂರು (ಜೂ.10): ರಾಜ್ಯದಲ್ಲಿ ಕೋವಿಡ್ ಆತಂಕವಿದ್ದರು ವಿದ್ಯುತ್ ಬೆಲೆ ಏರಿಕೆ ಮಾಡಿರುವ ಬಗ್ಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಲೆ ಏರಿಕೆ ಜನರ ಜೀವನದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ವಿದ್ಯುತ್ ಬೆಲೆ ಏರಿಕೆ ಸಂಬಂಧ ಟ್ವೀಟ್ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರ ವಿದ್ಯುತ್ ದರ ಏರಿಸಿದೆ. ಯೂನಿಟ್ ವಿದ್ಯುತ್ ಮೇಲೆ 30 ಪೈಸೆ ಏರಿಸಲಾಗಿದೆ. ಏ. 1ರಿಂದ ದರ ಪೂರ್ವಾನ್ವಯವೂ ಆಗಲಿದೆ. ಹಿಂಬಾಕಿಯನ್ನು ಅಕ್ಟೋಬರ್–ನವೆಂಬರ್‌ನಲ್ಲಿ ವಸೂಲಿ ಮಾಡಲಾಗುತ್ತದೆ. ಕೊರೊನಾ ಕಾಲದಲ್ಲಿ ಹಲವು ರಾಜ್ಯಗಳು ವಿದ್ಯುತ್ ಬಿಲ್ ರದ್ದು ಮಾಡಿರುವಾಗ ರಾಜ್ಯ ಸರ್ಕಾರ ದರ ಏರಿಕೆ ಜೊತೆ ಬಾಕಿ ವಸೂಲಿಗೂ ನಿಂತಿದೆ ಎಂದು ಹೇಳಿದ್ದಾರೆ.
ತೈಲ ದರ ಏರಿಕೆ ಮಧ್ಯೆ ರಾಜ್ಯಕ್ಕೆ ವಿದ್ಯುತ್ ಶಾಕ್: ಹೀಗಿದೆ ಹೊಸ ದರ! .
ಕೋವಿಡ್ ಮತ್ತು ಲಾಕ್‌ಡೌನ್‌ಗಳಲ್ಲಿ ಜನ ಕಷ್ಟಪಟ್ಟು ಜೀವ ಉಳಿಸಿಕೊಂಡಿದ್ದಾರೆ. ತ್ರಾಸದ ಜೀವನ ನಡೆಸಿದ್ದಾರೆ. ಇನ್ನಷ್ಟೇ ದುಡಿದು ಜೀವನ ನಡೆಸಬೇಕಾದ ಜನರ ಮೇಲೆ ಸರ್ಕಾರಕ್ಕೆ ಏಕೆ ದ್ವೇಷ? ಲಾಕ್‌ಡೌನ್ ಘೋಷಿಸಿದ್ದ ಸರ್ಕಾರ ವಾಸ್ತವದಲ್ಲಿ ವಿದ್ಯುತ್, ನೀರಿನ ಬಿಲ್‌ಅನ್ನು 3 ತಿಂಗಳು ರದ್ದು ಮಾಡಬೇಕಿತ್ತು. ಆದರೀಗ ವಸೂಲಿ ಮಾಡಲಾಗುತ್ತಿದೆ ಇದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.
ಹಲವು ದೇಶಗಳಲ್ಲಿ, ಅಷ್ಟೇ ಏಕೆ... ಪಕ್ಕದ ಕೇರಳ, ತಮಿಳುನಾಡು ರಾಜ್ಯಗಳಲ್ಲಿ ವಿದ್ಯುತ್ ಬಿಲ್ ತಡೆಯಲಾಗಿದೆ. ಅಥವಾ ಕಡಿಮೆ ಮಾಡಲಾಗಿದೆ. ಕೋವಿಡ್ ಪ್ಯಾಕೇಜ್‌ನಲ್ಲಿ ಇದನ್ನು ಘೋಷಿಸಲಾಗಿದೆ. ಪ್ಯಾಕೇಜ್‌ನಲ್ಲಿ ಸಮಾನ್ಯ ಜನರನ್ನು ವಂಚಿಸಿದ ರಾಜ್ಯದ ಬಿಜೆಪಿ ಸರ್ಕಾರ ಈಗ ದರ ಏರಿಕೆ, ಬಾಕಿ ವಸೂಲಿ ಮೂಲಕ ದೌರ್ಜನ್ಯದ ಕ್ರಮಕ್ಕೆ ಮುಂದಾಗಿದೆ.
ಗ್ರಾಹಕರಿಗೆ ಶಾಕ್ , ತೈಲಬೆಲೆ ಏರಿಕೆ ಆಯ್ತು, ಈಗ ವಿದ್ಯುತ್ ಯುನಿಟ್ ದರವೂ ಏರಿಕೆ
ಕೇಂದ್ರದ ಬಿಜೆಪಿ ಸರ್ಕಾರ ಪೆಟ್ರೋಲಿಯಂ ದರ ಏರಿಸಿ ಜನರನ್ನು ಸುಲಿಯುತ್ತಿದ್ದರೆ, ಇಲ್ಲಿನ ಬಿಜೆಪಿ ಸರ್ಕಾರ ವಿದ್ಯುತ್ ದರ ಏರಿಸಿ ಹಿಂಡುತ್ತಿದೆ. ಬಸ್ ಟಿಕೆಟ್ ದರ ಏರಿಸುವ ಮುನ್ಸೂಚನೆಯನ್ನೂ ನೀಡಿದೆ. ಜನರಿಗೆ ಬಿಜೆಪಿ ತೋರಿದ ಅಚ್ಚೇದಿನದ ಕನಸು ಇದೇನಾ? ಅದು ಕನಸಾಗಿ ಉಳಿದಿದ್ದರೆ ಚನ್ನಾಗಿರುತ್ತಿತ್ತು. ಈಗ ದುಸ್ವಪ್ನವಾಗಿ ಕಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
‘ನಷ್ಟ ಸರಿದೂಗಿಸಲು, ಸಂಪನ್ಮೂಲ ಸಂಗ್ರಹಿಸಲು ದರ ಏರಿಕೆ ಅನಿವಾರ್ಯ,‘ ಎಂಬ ಸಿದ್ಧ ಉತ್ತರವನ್ನು ಸರ್ಕಾರ ಹೇಳಬಾರದು. ಕರ್ನಾಟಕದ ಆರ್ಥಿಕ ಪರಿಸ್ಥಿತಿ, ಸಂಪನ್ಮೂಲ ಉತ್ತಮವಾಗಿಯೇ ಇದೆ. ಎರಡು ಬಾರಿ ಸಿಎಂ ಆದ ನನಗೆ ಅದರ ಸ್ಪಷ್ಟ ಅರಿವಿದೆ. ತಿಂದು ತೇಗುವುದನ್ನು ನಿಲ್ಲಿಸಿದರೆ ದರ ಏರಿಕೆಯೇ ಬೇಕಿಲ್ಲ. ಈಗಿನ ವಿದ್ಯುತ್ ದರ ಏರಿಕೆಯೂ ಅನಗತ್ಯ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದ ಸಂಕಷ್ಟದ ಕಾಲದಲ್ಲಿ ಬಿಜೆಪಿಯಲ್ಲಿ ಉಂಟಾಗಿರುವ ಅಧಿಕಾರದ ಲಾಲಸೆ, ಅದನ್ನು ಬಳಸಿಕೊಂಡು ಅಧಿಕಾರಕ್ಕೆ ಬರಲು ಕೋವಿಡ್ ನಿಯಮಗಳನ್ನೆಲ್ಲ ಮೀರಿ ಬೀದಿಗೆ ಬಿದ್ದಿರುವ ಕಾಂಗ್ರೆಸ್ ಪಕ್ಷಗಳೆರಡೂ ಆತ್ಮಾವಲೋಕನೆ ಮಾಡಿಕೊಳ್ಳಬೇಕು. ಸಂಕಷ್ಟದ ಪರಿಸ್ಥಿತಿಯನ್ನೇ ಅಧಿಕಾರಕ್ಕೇರಲು ಏಣಿ ಮಾಡಿಕೊಳ್ಳುತ್ತಿರುವ ಈ ಪಕ್ಷಗಳ ನಡೆಯನ್ನು ಜನ ಗಮನಿಸಬೇಕು
ಕುಮಾರಸ್ವಾಮಿ ಟ್ವೀಟ್ ಗೆ ಪ್ರತಿಕ್ರಿಯೆ : ಮಾಜಿ ಸಿಎಂ ಎಚ್‌ಡಿಕೆ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸಚಿವ ನಾರಾಯಣ ಗೌಡ ನಮ್ಮ ಸರ್ಕಾರದಲ್ಲಿ ಒಳ್ಳೆ ಮುಖ್ಯಮಂತ್ರಿಗಳು ಇದ್ದಾರೆ. ಕೆಲವರಿಗೆ ಟೀಕೆ ಮಾಡಿದರೇನೇ ರಾಜಕೀಯ ಮಾಡಲು ಆಗೋದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ