
ಬೆಂಗಳೂರು(ಜೂ.29): ‘ಈಗ ವಿದ್ಯುತ್ ದರ ಹೆಚ್ಚಳ ಮಾಡಿ, ಇನ್ನೇನು ಚುನಾವಣೆ ದಿನಾಂಕ ಹತ್ತಿರದಲ್ಲಿದೆ ಎನ್ನುವಾಗ ದರ ಇಳಿಸುವ ಸ್ಟಂಟ್ ಇದರ ಹಿಂದೆ ಇದೆ. ವೆಚ್ಚ ಹೊಂದಾಣಿಕೆಯ ಹೊಸ ಐಡಿಯಾ ಎಂದರೆ ಇದೇನಾ?’ ಎಂದು ಸರ್ಕಾರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ರಾಜ್ಯದಲ್ಲಿ ಉತ್ತಮ ಮಳೆಯಾಗಿ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ವಿದ್ಯುತ್ ಉತ್ಪಾದನೆಯೂ ಚೆನ್ನಾಗಿದೆ. ಹೆಚ್ಚುವರಿ ವಿದ್ಯುತ್ ಇದೆ ಎಂದು ಸರ್ಕಾರವೇ ಹೇಳುತ್ತಿದೆ. ಹೀಗಿದ್ದರೂ ದರ ಏರಿಕೆ! ಇದರ ಹಿಂದಿನ ಹುನ್ನಾರ ಏನು? ಮಾಸಿಕ 100 ಯೂನಿಟ್ ಬಳಸುವ ಗ್ರಾಹಕರು ಹೆಚ್ಚು ಬೆಲೆ ತೆರಬೇಕು. ಅಂದರೆ ಬಡವರು ಮತ್ತು ಮಧ್ಯಮ ವರ್ಗದ ಜನರು ವಿದ್ಯುತ್ ಬಳಸದೆ ಕತ್ತಲಲ್ಲಲಿ ಕೊಳೆಯಬೇಕೇ? ಗತಿಶಕ್ತಿ ಯೋಜನೆ ಮೂಲಕ ದೇಶಕ್ಕೆ ಹೊಸ ಗತಿ ಕಾಣಿಸುವುದು ಎಂದರೆ ಇದೇನಾ?’ ಎಂದು ಪ್ರಶ್ನಿಸಿದ್ದಾರೆ.
ಆರ್‌ಎಸ್‌ಎಸ್, ಎಚ್‌ಡಿಕೆಗೆ ನನ್ನ ಕಂಡ್ರೆ ಭಯ: ಸಿದ್ದರಾಮಯ್ಯ
‘ಇಂಧನ ಇಲಾಖೆಯ ಅಸಮರ್ಪಕ ನಿರ್ವಹಣೆ ಮತ್ತು ವಿದ್ಯುತ್ ಸೋರಿಕೆಯನ್ನು ತಡೆಯಲಾಗದ ಅದಕ್ಷತೆ ಬಗ್ಗೆ ಜನಕ್ಕೆ ಗೊತ್ತಿದೆ. ಆ ಹೊರೆಯನ್ನು ಜನರ ಮೇಲೆ ಹೇರಿ ಮೊದಲೇ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಲೂಟಿಗೆ ತುತ್ತಾಗಿರುವ ಜನರನ್ನು ಮತ್ತಷ್ಟುಸುಲಿಗೆ ಮಾಡುವ ಪ್ರಯತ್ನ ಇದಾಗಿದೆ. ಬಿಜೆಪಿ ಎಂದರೆ ಬೆಲೆ ಏರಿಕೆ. ಬೆಲೆ ಏರಿಕೆ ಎಂದರೆ ಬಿಜೆಪಿ. ಬಲಿಷ್ಠರು, ಬಲ್ಲಿದರ ಆಡಂಬೋಲ. ಬಿಸಿನೆಸ್ ಕ್ಲಾಸಿನ ಕಾಮಧೇನು. ಬಡವರು, ಮಧ್ಯಮ ವರ್ಗದ ಜನರ ಪಾಲಿಗೆ ರಕ್ತಪಿಪಾಸು’ ಎಂದು ಕಿಡಿಕಾರಿದ್ದಾರೆ.
‘ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರದಲ್ಲಿಯೇ ಇದೆ. ಈಗ ಬೆಲೆ ಏರಿಸಿ, ಇನ್ನೇನು ಚುನಾವಣೆ ದಿನಾಂಕ ಹತ್ತಿರದಲ್ಲಿದೆ ಎನ್ನುವಾಗ ದರ ಇಳಿಸುವ ಸ್ಟಂಟ್ ಇದರ ಹಿಂದೆ ಇದೆ. ವೆಚ್ಚ ಹೊಂದಾಣಿಕೆಯ ಹೊಸ ಐಡಿಯಾ ಎಂದರೆ ಇದೇನಾ? ಯಾವುದೇ ಕಾರಣಕ್ಕೂ ವಿದ್ಯುತ್ ದರ ಏರಿಕೆ ಮಾಡಬಾರದು. ಗ್ರಾಮೀಣ ಪ್ರದೇಶಕ್ಕೆ ಗುಣಮಟ್ಟದ, ನಿಯಮಿತ ವಿದ್ಯುತ್ ಪೂರೈಕೆ ಮಾಡದ ಸರ್ಕಾರಕ್ಕೆ ದರ ಏರಿಕೆ ಮಾಡುವ ನೈತಿಕ ಹಕ್ಕಿಲ್ಲ. ಒಂದು ವೇಳೆ ಏರಿಕೆ ಮಾಡಿದರೆ ಜನರನ್ನು ಒಗ್ಗೂಡಿಸಿ ಜನಾಂದೋಲ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ