ಮತ್ತೊಂದು ಮೈತ್ರಿಗೆ ಜೈ ಅಂದ ಜೆಡಿಎಸ್

By Web DeskFirst Published Nov 9, 2018, 7:13 AM IST
Highlights

ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆ ಮಾಡಿಕೊಂಡು ಆಡಳಿತ ನಡೆಸುತ್ತಿರುವ ಜೆಡಿಎಸ್ ಇದೀಗ ಮತ್ತೊಂದು ಮಹಾಮೈತ್ರಿಗೆ ತನ್ನ ಒಪ್ಪಿಗೆ ಸೂಚಿಸಿದೆ. 

ಬೆಂಗಳೂರು :  ದೇಶದಲ್ಲಿ ಬಿಜೆಪಿಗೆ ಪರ್ಯಾಯ ಶಕ್ತಿಯನ್ನು ಕಟ್ಟುವ ನಿಟ್ಟಿನಲ್ಲಿ ಮಾಜಿ ಪ್ರಧಾನಿಯೂ ಆಗಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗುರುವಾರ ಮಹತ್ವದ ಮಾತುಕತೆ ನಡೆಸಿದ್ದಾರೆ. ಎನ್‌ಡಿಎ ಹೊರತಾದ ಮಹಾಮೈತ್ರಿಕೂಟ ರಚನೆಗೆ ಸಂಕಲ್ಪ ಮಾಡಿದ್ದಾರೆ. ಇದೇ ವೇಳೆ, ‘1996ರ ರೀತಿಯಲ್ಲಿ 2019ರಲ್ಲೂ ರಾಜಕೀಯ ಕ್ರಾಂತಿಯಾಗಲಿದ್ದು, 96ರ ಫಲಿತಾಂಶ ಪುನರಾವರ್ತನೆಯಾಗಲಿದೆ’ ಎಂದು ಕುಮಾರಸ್ವಾಮಿ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

1996ರಲ್ಲಿ ಕೇಂದ್ರದಲ್ಲಿ ಸಂಯುಕ್ತ ರಂಗ ಸರ್ಕಾರ ರಚನೆಗೊಂಡು ದೇವೇಗೌಡರು ಪ್ರಧಾನಿಯಾಗಿದ್ದರು. ಇದೀಗ ಅದೇ ಮಾದರಿಯ ಫಲಿತಾಂಶದ ಪುನರಾವರ್ತನೆ ಬಗ್ಗೆ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಜತೆಗೆ, ‘ಪ್ರಾದೇಶಿಕ ಪಕ್ಷಗಳ ಒಗ್ಗೂಡಿಸಲು ದೇವೇಗೌಡರಂಥ ಅನುಭವಿಗಳು ನಾಯಕತ್ವ ವಹಿಸಿಕೊಳ್ಳಬೇಕು ಎಂಬ ವಿಷಯವನ್ನು ನಾಯ್ಡು ಅವರು ಪ್ರಸ್ತಾಪಿಸಿದ್ದಾರೆ’ ಎಂದೂ ಕುಮಾರಸ್ವಾಮಿ ನುಡಿದಿದ್ದಾರೆ. ಹೀಗಾಗಿ 2019ರಲ್ಲಿ ಬಿಜೆಪಿಯೇತರ ಮಹಾಮೈತ್ರಿಕೂಟಕ್ಕೆ ಅಧಿಕಾರ ಲಭಿಸಿದರೆ ಪ್ರಧಾನಿ ಹುದ್ದೆಗೆ ಯಾರು ಏರಬಹುದು ಎಂಬ ಕುತೂಹಲ ಸೃಷ್ಟಿಯಾಗಿದೆ.

45 ನಿಮಿಷ ಸಮಾಲೋಚನೆ:  ಗುರುವಾರ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ನಾಯ್ಡು ಅವರು ಸುಮಾರು 45 ನಿಮಿಷಗಳ ಕಾಲ ಸಮಾಲೋಚನೆ ನಡೆಸಿದರು. ದೇಶದಲ್ಲಿ ಎನ್‌ಡಿಎಗೆ ಪ್ರತಿಯಾಗಿ ಮೈತ್ರಿಕೂಟ ಗಟ್ಟಿಗೊಳಿಸಬೇಕು ಎಂಬ ಉದ್ದೇಶ ಹೊಂದಿರುವ ಅವರು ಪರ್ಯಾಯ ನಾಯಕರನ್ನು ಒಗ್ಗೂಡಿಸಲು ಪ್ರಯತ್ನ ಆರಂಭಿಸಿದ್ದಾರೆ.

ಮಾತುಕತೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾಯ್ಡು ಅವರು, ‘ದೇಶದ ಪ್ರಜಾಪ್ರಭುತ್ವ ಉಳಿಸುವ ಸಂಬಂಧ ನಾವೆಲ್ಲ ಒಂದಾಗಿದ್ದೇವೆ. ಬಿಜೆಪಿ ಎದುರು ಜಾತ್ಯತೀತ ಪಕ್ಷಗಳು ಒಗ್ಗೂಡಬೇಕು. ಈ ನಿಟ್ಟಿನಲ್ಲಿ ದೇವೇಗೌಡರ ಅಮೂಲ್ಯ ಸಲಹೆಗಳು ನಮಗೆ ಉಪಯುಕ್ತವಾಗಿವೆ. ಈ ಅಪರೂಪದ ದಿನವನ್ನು ನಾನೆಂದೂ ಮರೆಯುವುದಿಲ್ಲ’ ಎಂದು ಹೇಳಿದರು.

‘ಇಂದು ದೇಶವನ್ನು ಉಳಿಸಬೇಕಾದ ಅನಿವಾರ್ಯತೆಯಿದೆ. ಸಿಬಿಐ, ಭಾರತೀಯ ರಿಸವ್‌ರ್‍ ಬ್ಯಾಂಕ್‌ಗಳಲ್ಲಿ ಏನೇನು ಆಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕೇಂದ್ರ ಸರ್ಕಾರ ಎಲ್ಲ ಕಡೆ ಮೂಗು ತೂರಿಸುತ್ತಿದೆ. ಸ್ವಾಯತ್ತ ಸಂಸ್ಧೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಲಕ್ಷಾಂತರ ಕೋಟಿ ರು.ಗಳ ರಫೇಲ… ಯುದ್ಧ ವಿಮಾನದ ಹಗರಣದಲ್ಲಿ ಸಿಲುಕಿದೆ. ತೈಲ ದರ ದಿನದಿಂದ ದಿನಕ್ಕೆ ಏರುತ್ತಿದೆ. ಡಾಲರ್‌ ಎದುರು ರುಪಾಯಿ ಮೌಲ್ಯ ಕುಸಿಯುತ್ತಲೇ ಇದೆ. ನಿತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಹೀಗಾಗಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪರ್ಯಾಯ ಸರ್ಕಾರ ಸ್ಥಾಪಿಸಬೇಕಾಗಿದೆ’ ಎಂದು ಪ್ರತಿಪಾದಿಸಿದರು.

ಇಂದು ಸ್ಟಾಲಿನ್‌ ಭೇಟಿ:  ಶುಕ್ರವಾರ ಡಿಎಂಕೆ ಮುಖಂಡ ಸ್ಟಾಲಿನ್‌ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಾಗುವುದು ಎಂದು ಇದೇ ವೇಳೆ ಚಂದ್ರಬಾಬು ನಾಯ್ಡು ತಿಳಿಸಿದರು.

ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌, ಬಿಎಸ್‌ಪಿಯ ಮಾಯಾವತಿ ಅವರೊಂದಿಗೂ ಚರ್ಚೆ ನಡೆಸುತ್ತೇವೆ. ಮಹಾಮೈತ್ರಿಕೂಟ ವಿಫಲ ಎಂಬ ಮಾತನ್ನು ಬಿಜೆಪಿ ಹೇಳಿತ್ತು. ಕರ್ನಾಟಕದಲ್ಲಿ ನಡೆದ ಉಪಚುನಾವಣೆ ಅದಕ್ಕೆ ತಕ್ಕ ಉತ್ತರ ನೀಡಿದೆ. ಮಾಯಾವತಿ ಎಲ್ಲಿಯೂ ಹೋಗಿಲ್ಲ. ಎಲ್ಲ ಒಟ್ಟಾಗಿಯೇ ಲೋಕಸಭಾ ಚುನಾವಣೆ ಎದುರಿಸುತ್ತೇವೆ. ಮಮತಾ ಬ್ಯಾನರ್ಜಿ ಕೋಲ್ಕತಾದಲ್ಲಿ ಜನವರಿಯಲ್ಲಿ ಬೃಹತ್‌ ರಾರ‍ಯಲಿ ನಡೆಸಲಿದ್ದಾರೆ. ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು.

ದೇಶವನ್ನು ಉಳಿಸಲು ಜಾತ್ಯತೀತ ಪಕ್ಷಗಳು ಒಂದಾಗಬೇಕು. ದೇವೇಗೌಡರ ಸಲಹೆ, ಸೂಚನೆಯಿಂದ ದೇಶಕ್ಕೆ ಒಳಿತಾಗುತ್ತದೆ. ನಮಗೆ ಪ್ರಧಾನಿ ಅಭ್ಯರ್ಥಿ ಯಾರೆಂಬುದು ಮುಖ್ಯವಲ್ಲ. ದೇಶಕ್ಕೆ ಒಳಿತಾಗಬೇಕು. ನಾವೆಲ್ಲರೂ ಒಂದಾಗಿ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ.

- ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಮುಖ್ಯಮಂತ್ರಿ

 

ಶೀಘ್ರದಲ್ಲೇ ದೇಶದ ವಿವಿಧ ಭಾಗಗಳ ಪ್ರಾದೇಶಿಕ ನಾಯಕರ ಸಭೆ ಕರೆಯಲಾಗುವುದು. ಶರದ್‌ ಪವಾರ್‌, ಫಾರೂಕ್‌ ಅಬ್ದುಲ್ಲಾ, ಮಮತಾ ಬ್ಯಾನರ್ಜಿ ಸೇರಿ ಪ್ರಾದೇಶಿಕ ಪಕ್ಷಗಳ ನಾಯಕರು ಸಭೆಯಲ್ಲಿ ಪಾಲ್ಗೊಳ್ಳುವರು. ಕಾಂಗ್ರೆಸ್‌ ಪಕ್ಷ ಕೂಡ ಇದಕ್ಕೆ ಬೆಂಬಲ ನೀಡಿದೆ. ಸದ್ಯದಲ್ಲೇ ದಿಲ್ಲಿಯಲ್ಲಿ ನಾಯ್ಡು, ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ. ನಂತರ ತೃತೀಯ ರಂಗದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ.

- ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ

click me!