ಹಳಿ ಮೇಲೆ ನಿಂತ ಬಸ್, ರೈಲಿಗೆ ವಿರುದ್ದ ಓಡಿದ ಗೇಟ್‌ಮನ್: ಮುಂದೇನಾಯ್ತು?

By Web DeskFirst Published Nov 8, 2018, 10:18 AM IST
Highlights

ಬ್ರೆಕ್ ಫೇಲ್ ಆಗಿ ಮುಚ್ಚಿದ್ದ ರೈಲ್ವೆ ಗೇಟು ಮುರಿದು ಹಳಿಯ ಮೇಲೆ ನುಗ್ಗಿದ ಬಸ್! ಪರಿಸ್ಥಿತಿ ಅರಿತು ರೈಲು ಬರುತ್ತಿದ್ದ ಹಳಿ ಗುಂಟ ಓಡಿ 100 ಮೀ.ನಲ್ಲೇ ರೈಲು ನಿಲ್ಲುವಂತೆ ಮಾಡಿದ! ಸ್ಥಳೀಯ ಅಧಿಕಾರಿಗಳ ಸ್ಥಳಕ್ಕೆ ಭೇಟಿ | ಸ್ಥಳೀಯರ ಸಹಾಯದಿಂದ ಬಸ್ಸನ್ನು ಪಕ್ಕಕ್ಕೆ ಸರಿಸಿದ ಅಧಿಕಾರಿಗಳು! ಬಸ್ ಚಾಲಕ ಮತ್ತು ಬಸ್‌ನ್ನು ವಶಕ್ಕೆ ಪಡೆದ ರೈಲ್ವೆ ಪೊಲೀಸರು | ರೈಲು ಸಂಚಾರ ಅರ್ಧ ಗಂಟೆ ವಿಳಂಬ

ಬೆಳಗಾವಿ(ನ.8): ರೈಲ್ವೆ ಗೇಟ್‌ಮನ್‌ನ ಸಮಯ ಪ್ರಜ್ಞೆಯಿಂದಾಗಿ ರೈಲು ಮತ್ತು ಬಸ್ ಮಧ್ಯ ಸಂಭವಿಸಬಹುದಾಗಿದ್ದ ಅಪಘಾತ ಅದೃಷ್ಟವಶಾತ್ ತಪ್ಪಿಸಿದ್ದಲ್ಲದೆ, ಅಂದಾಜು 40ಕ್ಕೂ ಅಧಿಕ ಜನರ ಪ್ರಾಣ ಉಳಿಸಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗೋದಗೇರಿ ಗ್ರಾಮದ ಬಿಳಿಯ ರೈಲ್ವೆ ಗೇಟ್ ಬಳಿ ನಡೆದಿದೆ.

ಗೋದಗೇರಿ ಗ್ರಾಮದಿಂದ ಖಾನಾಪುರಕ್ಕೆ ಬರುತ್ತಿದ್ದ ವಾಯವ್ಯ ಸಾರಿಗೆ ಸಂಸ್ಥೆ ಬಸ್ ಬ್ರೇಕ್ ಫೇಲಾದ ಕಾರಣ ಮುಚ್ಚಿದ ರೈಲ್ವೆ ಗೇಟ್‌ಗೆ ಅಪ್ಪಳಿಸಿದೆ. ಈ ವೇಳೆ ಬಸ್ ಮುಂದೆ ನುಗ್ಗಿ ರೈಲ್ವೆ ಹಳಿಗಳ ಮೇಲೆ ನಿಂತಿದೆ. ಇದನ್ನು ಗಮನಿಸಿದ ರೈಲ್ವೆ ಗೇಟ್‌ಮನ್ ಸಮಯಪ್ರಜ್ಞೆ ಮೆರೆದು ರೈಲ್ವೆ ಹಳಿಗಳ ಗುಂಟ ರೈಲು ಬರುತ್ತಿದ್ದ ಹಳಿಯ ವಿರುದ್ಧ ದಿಕ್ಕಿಗೆ ಓಡಿ ರೈಲಿಗೆ ಕೆಂಪು ಧ್ವಜ ತೋರಿಸುವ ಮೂಲಕ ರೈಲನ್ನು ನಿಲ್ಲಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾನೆ.

ಘಟನೆಯ ವಿವರ: 
ಖಾನಾಪುರ ಘಟಕಕ್ಕೆ ಸೇರಿದ ವಾಯವ್ಯ ಸಾರಿಗೆ ಸಂಸ್ಥೆಯ ಬಸ್ (ಕೆಎ 22 ಎಫ್ 1990) ಗೋದಗೇರಿ ಗ್ರಾಮದಿಂದ ಮರಳಿ ಖಾನಾಪುರ ಪಟ್ಟಣಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಗೋದಗೇರಿ ರೈಲ್ವೆ ಗೇಟ್ ಬಳಿ ಇದ್ದಕ್ಕಿದ್ದಂತೆ ಬ್ರೇಕ್ ಫೇಲ್ ಆಗಿದೆ. ಇದರಿಂದ ವಿಚಲಿತರಾದ ಬಸ್ ಚಾಲಕ ಎಂ.ಎಸ್ ಗುಡಗುಡಿ ಅವರು ಗೋದಗೇರಿ ಬಳಿ ಮುಚ್ಚಲಾಗಿದ್ದ ರೈಲ್ವೆ ಗೇಟ್ ಮೇಲೆ ಬಸ್ ಹರಿಸಿ ರೈಲ್ವೆ ಹಳಿಗಳ ಮೇಲೆ ಬಸ್ ನಿಲ್ಲಿಸಿದ್ದಾರೆ. 

ಇದೇ ಸಂದರ್ಭದಲ್ಲಿ ಇದೇ ರೈಲ್ವೆ ಹಳಿ ಮೇಲೆ ದೂರದಿಂದ ಬರುತ್ತಿದ್ದ ರೈಲನ್ನು ಗಮನಿಸಿದ ರೈಲ್ವೆ ಗೇಟ್ ಮ್ಯಾನ್ ಕೆಂಪು ಬಾವುಟದೊಂದಿಗೆ ಹಳಿಗುಂಟ ಓಡಿ ರೈಲು ಚಾಲಕರಿಗೆ ಸಿಗ್ನಲ್ ನೀಡುವ ಮೂಲಕ ರೈಲನ್ನು 100 ಮೀ. ದೂರದಲ್ಲೇ ನಿಲ್ಲಿಸಿ ಸಂಭವಿಸಬಹುದಾದ ಅಪಘಾತ ತಪ್ಪಿಸಿದ್ದಾರೆ. ಈ ಮೂಲಕ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 40ಕ್ಕೂ ಅಧಿಕ ಜನರ ಪ್ರಾಣ ಉಳಿಸಿದ್ದಾನೆ.

ಸುದ್ದಿ ತಿಳಿದ ಸಮೀಪದ ದೇವರಾಯಿ ರೈಲು ನಿಲ್ದಾಣದ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಹಳಿಯ ಮೇಲೆ ನಿಂತಿದ್ದ ಬಸ್ಸನ್ನು ಸ್ಥಳೀಯರ ಸಹಾಯದಿಂದ ಪಕ್ಕಕ್ಕೆ ಸರಿಸಿ ರೈಲು ಮುಂದೆ ಸಾಗಲು ಅನುವು ಮಾಡಿಕೊಟ್ಟಿದ್ದಾರೆ. ಇಷ್ಟೆಲ್ಲ ನಡೆಯುವವರೆಗೆ ರೈಲು ಅರ್ಧ ಗಂಟೆ ನಿಂತಿದ್ದು, ರೈಲ್ವೆ ಅಧಿಕಾರಿಗಳು ಈ ವಿಷಯವನ್ನು ರೈಲ್ವೆ ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಸಂಜೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ರೈಲ್ವೆ ಪೊಲೀಸರು ಬಸ್ ಮತ್ತು ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೋಡಕಾ ಬಸ್‌ನಿಂದ ಅನಾಹುತ:
ಖಾನಾಪುರ ಘಟಕದಲ್ಲಿ ಬಸ್‌ಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬಹುತೇಕ ಬಸ್‌ಗಳು ಸುಸ್ಥಿತಿಯಲ್ಲಿಲ್ಲ. ಗುಜರಿ ಬಸ್‌ಗಳನ್ನು ಓಡಿಸುವ ಚಾಲಕರು ಜೀವವನ್ನು ಕೈಯಲ್ಲಿ ಹಿಡಿದು ಕರ್ತವ್ಯ ನಿರ್ವಹಿಸುವ ಸನ್ನಿವೇಶ ನಿರ್ಮಾಣವಾಗಿದ್ದು, ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮತ್ತು ತಾಂತ್ರಿಕ ಸಿಬ್ಬಂದಿಯ ತಪ್ಪಿನಿಂದಾಗಿ ಬಸ್ ಚಾಲಕ ನ್ಯಾಯಾಂಗ ವಶದಲ್ಲಿರುವ ಸಂದರ್ಭ ಒದಗಿಬಂದಿದೆ.

ಈ ವಿಷಯದ ಬಗ್ಗೆ ವಾಯವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಸಮಗ್ರ ತನಿಖೆ ನಡೆಸಬೇಕು, ತಮ್ಮದಲ್ಲದ ತಪ್ಪಿಗೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಚಾಲಕ ಗುಡಗುಡಿ ಅವರಿಗೆ ನ್ಯಾಯ ಒದಗಿಸಿಕೊಡಬೇಕು ಮತ್ತು ಬಸ್‌ಗಳ ಸುಸ್ಥಿತಿಗೆ ಆದ್ಯತೆ ನೀಡಬೇಕು ಎಂದು ಖಾನಾಪುರ ಘಟಕದ ಚಾಲಕರು ಆಗ್ರಹಿಸಿದ್ದಾರೆ. 

click me!