
ಬೆಂಗಳೂರು : ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ದೋಸ್ತಿ ಪಕ್ಷಗಳ ಮುಖಂಡರು ಒಂದು ಕಡೆ ಬಹಿರಂಗ ಪರ-ವಿರೋಧ ಹೇಳಿಕೆ ನೀಡುತ್ತ ಒಂದೆಡೆ ರಾಜಕೀಯ ಅಸ್ಥಿರತೆಯ ಮುನ್ಸೂಚನೆ ನೀಡುತ್ತಿರುವ ನಡುವೆಯೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸವಾಲಿನ ಧಾಟಿಯಲ್ಲಿ ನೀಡಿರುವ ಹೇಳಿಕೆಯೊಂದು ಹೊಸ ಕುತೂಹಲ ಹುಟ್ಟು ಸೃಷ್ಟಿಸಿದೆ.
‘ಸಿದ್ದರಾಮಯ್ಯ ಅವರು ಹಿಂದೆ ನಮ್ಮ ಪಕ್ಷದಲ್ಲಿದ್ದಾಗ ಅವರನ್ನು ಯಾಕೆ ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ ಎಂಬುದರ ಕುರಿತು ಬಹಿರಂಗ ಚರ್ಚೆ ನಡೆಸಲು ಸಿದ್ಧ’ ಎಂದು ದೇವೇಗೌಡರು ಬುಧವಾರ ಸವಾಲಿನ ಧಾಟಿಯಲ್ಲಿ ಹೇಳಿದ್ದಾರೆ.
ಬುಧವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಗೌಡರು ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು. ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮನ್ನು ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡುವ ಅವಕಾಶ ಇತ್ತು.
ಆದರೆ, ದೇವೇಗೌಡರು ಮಾಡಲಿಲ್ಲ. ಪ್ರಧಾನಿಯಾದ ಬಳಿಕ ದೆಹಲಿಗೆ ಹೋಗುವ ವೇಳೆ ಮತ್ತು ಮುಂದೆ ಸಮ್ಮಿಶ್ರ ಸರ್ಕಾರ ರಚನೆ ಮಾಡುವ ವೇಳೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರ ಮೇಲೆ ತೀವ್ರ ಒತ್ತಡ ಹೇರಿದ್ದರೆ ಅವರು ಒಪ್ಪುತ್ತಿದ್ದರು. ಅಂತಹ ಕೆಲಸವನ್ನು ದೇವೇಗೌಡರು ಮಾಡಲಿಲ್ಲ ಎಂದಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಜತೆ ಬಹಿರಂಗ ಚರ್ಚೆಗೆ ಸಿದ್ಧ. ಆಗ ಸತ್ಯ ಏನೆಂಬುದು ಗೊತ್ತಾಗಲಿದೆ’ ಎಂದು ಸವಾಲೆಸೆದರು.
ತಮ್ಮ ಮಾತಿನುದ್ದಕ್ಕೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡ ಅವರು, ಕಾಂಗ್ರೆಸ್‌ಗೆ ಬಿಸಿ ಮುಟ್ಟಿಸಿದರು. ‘ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ. ಸರ್ಕಾರ ಅಸ್ಥಿರಗೊಂಡರೂ ನಮ್ಮದೇನು ಅಭ್ಯಂತರ ಇಲ್ಲ’ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸುವ ಪ್ರಯತ್ನ ಮಾಡಿದರು.
‘ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿದ್ದ ವೇಳೆ ನಾನು ಯಾವುದೇ ಜಾತಿ, ಧರ್ಮ ನೋಡಲಿಲ್ಲ. ಪ್ರತಿಯೊಬ್ಬರನ್ನೂ ಸಮಾನತೆಯಿಂದ ನೋಡಿದ್ದೇನೆ. ಆದರೆ, ಕೆಲವರು ಕುರುಬ ಸಮಾಜಕ್ಕೆ ಏನು ಮಾಡಿದ್ದೇನೆ ಎಂಬುದಾಗಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೊಡ್ಡಹಳ್ಳಿ ಎಂಬಲ್ಲಿ ಗೋಲಿಬಾರ್ ನಡೆಯಿತು. ಆಗ ಮೃತಪಟ್ಟವ್ಯಕ್ತಿ ಕುರುಬ ಸಮುದಾಯದವನು. ಆತ ಯಾವ ಸಮುದಾಯ ಎಂಬುದನ್ನು ನೋಡದೆ ಪರಿಹಾರ ನೀಡಿದೆ. ಕುರುಬ ಸಮುದಾಯಕ್ಕೆ ಏನು ಮಾಡಿಲ್ಲ ಎಂದು ಬೊಬ್ಬೆ ಹೊಡೆಯುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಜೆಡಿಎಸ್ ಬಿಡುವ ಮುನ್ನ ಪಕ್ಷದಲ್ಲಿ ಯಾವ ಹುದ್ದೆಗಳನ್ನು ಅನುಭವಿಸಿದ್ದರು ಎಂಬುದನ್ನು ಮರೆಯಬಾರದು’ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
‘ಕಾಂಗ್ರೆಸ್ ಆಡಳಿತಾವಧಿಯಲ್ಲಿ ಐದು ವರ್ಷ ಮುಖ್ಯಮಂತ್ರಿಯಾಗಿದ್ದಿರಿ. ಆಡಳಿತದಲ್ಲಿ ನಡೆದ ಅಕ್ರಮವೋ-ಸಕ್ರಮವೋ, ಏನೆ ಇರಲಿ. ನಿಮ್ಮ ವಿರುದ್ಧವಾಗಲಿ, ನಿಮ್ಮ ಕೆಲಸದ ಬಗ್ಗೆ ಮಾತನಾಡಿಲ್ಲ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡುತ್ತಿರುವ ಕೆಲಸಕ್ಕೆ ಕೆಲವರು ಮಸಿ ಬಳಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸದೆ ಹರಿಹಾಯ್ದ ಅವರು, ‘ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹೊರತುಪಡಿಸಿ ಇನ್ನಾವುದೇ ನಿಗಮ ಮಂಡಳಿಗಳಿಗೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಸುಪ್ರೀಂಕೋರ್ಟ್‌ನ ಆದೇಶದಂತೆ ನಡೆಯಲಿ ಎಂಬ ಕಾರಣಕ್ಕಾಗಿ ಆಕ್ಷೇಪ ವ್ಯಕ್ತಪಡಿಸಲಾಯಿತೇ ಹೊರತು ಬೇರಾವ ಉದ್ದೇಶ ಇಲ್ಲ. ಆದರೂ ಕೆಲವರು ಇನ್ನಿಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಶಾಸಕರ ನಡೆಯನ್ನು ಖಂಡಿಸಿದರು.
‘ಕುಮಾರಸ್ವಾಮಿ ಅವರು ಕಾಂಗ್ರೆಸ್ ಶಾಸಕರಿಗೆ ಸಿಗುವುದಿಲ್ಲ ಎಂಬಂತೆ ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನು ಪ್ರತಿನಿತ್ಯ ಮಾಧ್ಯಮಗಳ ಮುಂದೆ ಹೇಳಿ ತಪ್ಪು ಸಂದೇಶ ರವಾನಿಸಲಾಗುತ್ತಿದೆ. ಸಮ್ಮಿಶ್ರ ಸಮ್ಮಿಶ್ರದಲ್ಲಿ ಸಣ್ಣಪುಟ್ಟಭಿನ್ನಾಭಿಪ್ರಾಯಗಳು ಬರುವುದು ಸಹಜ. ಆದರೆ, ಅದನ್ನು ದೊಡ್ಡದು ಮಾಡಬಾರದು. ಕಾಂಗ್ರೆಸ್ ಬೆಂಬಲದಿಂದ ನಾನು ಪ್ರಧಾನಿಯಾಗಿದ್ದೆ ಎಂಬ ಕಾರಣಕ್ಕಾಗಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿ ಧರ್ಮಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಆ ವೇಳೆ ಧರಂ ನೇತೃತ್ವದ ಸರ್ಕಾರ ಪತನವಾಗಲು ನಾವು ಕಾರಣರಲ್ಲ. ಅದೆಲ್ಲಾ ವಿಧಿಯಾಟ’ ಎಂದು ದೇವೇಗೌಡರು ಮಾರ್ಮಿಕವಾಗಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ