ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶೀಘ್ರದಲ್ಲೇ ಸಿಎಂ ಆಗುತ್ತಾರೆ ಎಂದು ಮತ್ತೊಮ್ಮೆ ಹೇಳಿದ್ದಾರೆ. ಜೊತೆಗೆ 11 ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ದಾವಣಗೆರೆ (ಜ.13) : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶೀಘ್ರವೇ ಸಿಎಂ ಆಗ್ತಾರೆ ಎಂದು ಪುನರುಚ್ಚರಿಸಿರುವ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ, ಇದೇ ವೇಳೆ, ‘ಶೀಘ್ರವೇ 11 ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಬರುವವರಿದ್ದಾರೆ’ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ದಾವಣಗೆರೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 11 ಜನ ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಬರುವವರಿದ್ದಾರೆ. ಜೆಡಿಎಸ್ ಪಕ್ಷದ ಶಾಸಕರು ತಾವಾಗಿಯೇ ಕಾಂಗ್ರೆಸ್‌ಗೆ ಬರುತ್ತೇವೆ ಎಂದರೆ ಬೇಡ ಎನ್ನಲು ಆಗುತ್ತಾ? ಬರುವವರನ್ನು ಸೇರಿಸಿಕೊಳ್ಳದೇ ಇರಲು ಆಗುತ್ತಾ ಎಂದು ಪ್ರಶ್ನಿಸಿದರು.
‘ಡಿಕೆಶಿಯವರು ಪಕ್ಷದ ಸಂಘಟನೆಗೆ ಎಲ್ಲರನ್ನೂ ಒಟ್ಟುಗೂಡಿಸುತ್ತಿದ್ದಾರೆ. ಉಳಿದವರಿಗೆ ಇದು ಸಾಧ್ಯವಾಗುತ್ತಾ? ಉಳಿದವರಿಗೆ ಈ ರೀತಿ ಬೇರೆ ಪಕ್ಷದವರನ್ನು ಕರೆತರಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ಅಧಿಕಾರ ಬೇಕು ಅಷ್ಟೇ. ಅವರು ಈ ರೀತಿ ‘ಆಪರೇಷನ್’ ಮಾಡಿ ಕರೆತರಲಿ ನೋಡೋಣ’ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೇ ಸವಾಲು ಹಾಕಿದರು.
ರಾಜ್ಯದಲ್ಲೀಗ ಸರ್ಕಾರದ ಸಹಿ ಮಾರಾಟಕ್ಕಿದೆ, ಇಲ್ಲಿರೋದು 60 ಪರ್ಸೆಂಟ್ ಕಮಿಷನ್: ಕುಮಾರಸ್ವಾಮಿ
‘ಕೆಲವರು ಮಾತನಾಡುತ್ತಾರೆ ಅಷ್ಟೇ. ತಮಗೆ ಮಾಡಿಟ್ಟ ಊಟವನ್ನು ಮಾಡುವುದಕ್ಕೆ ಮಾತ್ರ ಬರುತ್ತಾರೆ. ಆದರೆ, ಡಿಕೆಶಿ ಕೆಲಸ ಮಾಡುತ್ತಾರೆ. ಕಷ್ಟಪಟ್ಟವರಿಗೆ ಒಳ್ಳೆಯ ದಿನಗಳು ಇದ್ದೇ ಇರುತ್ತವೆ. ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರೂ ಕ್ಷೇತ್ರವನ್ನೂ ಗೆಲ್ಲಿಸಿಕೊಂಡು ಬಂದವರು ಕೆಪಿಸಿಸಿ ರಾಜ್ಯಾಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ. ಉಪ ಚುನಾವಣೆ ವೇಳೆಯೂ ಆಪರೇಷನ್ ಪ್ರಕ್ರಿಯೆ ನಡೆಸಿ ಯಶಸ್ವಿಯಾಗಿದ್ದಾರೆ. ಇದನ್ನೆಲ್ಲಾ ಕಾಂಗ್ರೆಸ್ ಹೈಕಮಾಂಡ್ ಗಮನಿಸುತ್ತಿದೆ’ ಎಂದು ಹೇಳಿದರು.
ಡಿ.ಕೆ.ಶಿವಕುಮಾರ ಅವರ ಮಾತು ನೋಡುವವರ ದೃಷ್ಟಿಕೋನದ ಮೇಲೆ ಹೋಗುತ್ತದೆ. ಕೆಟ್ಟದಾಗಿ ನೋಡಿದರೆ ಕೆಟ್ಟದಾಗಿ ಕಾಣುತ್ತದೆ, ತಪ್ಪಾಗಿ ಅರ್ಥೈಸಿಕೊಂಡರೆ ತಪ್ಪಾಗಿ ಅದು ಕೇಳಿಸುತ್ತದೆ. ಹೋರಾಟದ ಮನೋಭಾವ ಅವರದು ಎಂದರು
ನಮ್ಮದು ಸಮರ್ಥರ ಪಕ್ಷ: ಎಚ್‌ಡಿ ದೇವೇಗೌಡ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮತ್ತು ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಎಂದು ಕಾಂಗ್ರೆಸ್ ಹೊಂಚು ಹಾಕುತ್ತಿದೆ. ಯಾವುದೇ ಕಾರಣಕ್ಕೂ ಅದರ ಕನಸು ಈಡೇರುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಗುಡುಗಿದ್ದಾರೆ.
ಮುಂದಿನ ಮಾರ್ಚ್ ತಿಂಗಳಿಂದ ನಾನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇನೆ. ಕಾರ್ಯಕರ್ತರ ಮನೆಗಳಲ್ಲಿಯೇ ವಾಸ್ತವ್ಯ ಹೂಡಿ ಪಕ್ಷ ಕಟ್ಟುತ್ತೇನೆ ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ.ಭಾನುವಾರ ಪಕ್ಷದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮದು ಸಮರ್ಥ ನಾಯಕರ ಹಾಗೂ ಸಮರ್ಥ ಕಾರ್ಯಕರ್ತರ ಪಕ್ಷ. ನಮ್ಮ ಪಕ್ಷವನ್ನು ಬೇರೆಯವರು ಮುಗಿಸುವುದು ಅಸಾಧ್ಯ ಎಂದರು.ಕುಮಾರಸ್ವಾಮಿ ಅವರನ್ನು ಮುಗಿಸಿದರೆ ಜೆಡಿಎಸ್ ಮುಗಿದು ಹೋಗುತ್ತದೆ ಎಂದು ಕಾಂಗ್ರೆಸ್ ನಂಬಿದೆ. ಅದಕ್ಕೆ ಕಾರಣ ಇಷ್ಟೇ. ಕುಮಾರಸ್ವಾಮಿ ಅವರ ಹಿಂದೆ ಲಕ್ಷಾಂತರ ಕಾರ್ಯಕರ್ತರು ಇದ್ದಾರೆ. ಅವರು ಬಲಿಷ್ಠವಾಗಿ ನಿಂತಿದ್ದಾರೆ. ಹೀಗಾಗಿ ಅವರನ್ನು ಮುಗಿಸುವುದು ಸಾಧ್ಯವಿಲ್ಲದ ಮಾತು ಅವರು ಹೇಳಿದರು.
ಜೆಡಿಎಸ್‌ನ 3ನೇ 2ರಷ್ಟು ಶಾಸಕರಿಗೆ ಡಿಕೆಶಿ ಗಾಳ?: ಪಕ್ಷಾಂತರ ತಡೆಗೆ ಜಾರಕಿಹೊಳಿ-ಎಚ್‌ಡಿಕೆ ತಂತ್ರ
ಜೆಡಿಎಸ್ ಕುಟುಂಬ ಆಧಾರಿತ ಪಕ್ಷ ಎಂದು ಕಾಂಗ್ರೆಸ್ ಹೇಳುತ್ತದೆ. ಯಾರಾದರೂ ಒಮ್ಮೆ ಕಾಂಗ್ರೆಸ್ ಪಕ್ಷದ ಕಚೇರಿಗೆ ಹೋಗಿ ಅಲ್ಲಿ ಗೋಡೆಗಳ ಮೇಲೆ ನೇತು ಹಾಕಿರುವ ಫೋಟೋಗಳನ್ನು ಒಮ್ಮೆ ನೋಡಿ. ಕುಟುಂಬ ಆಧಾರಿತ ಪಾರ್ಟಿ ಯಾವುದು ಎನ್ನುವುದು ಗೊತ್ತಾಗುತ್ತದೆ ಎಂದು ಗೌಡರು ಹರಿಹಾಯ್ದರು.