ಸಮ್ಮಿಶ್ರ ಸರ್ಕಾರದ ಬಗ್ಗೆ ದೇವೇಗೌಡರಲ್ಲಿದೆಯಾ ಆತಂಕ..?

By Web DeskFirst Published Jan 29, 2019, 7:24 AM IST
Highlights

ರಾಜ್ಯದಲ್ಲಿ ರಚಿಸಿರುವ ಸಮ್ಮಿಶ್ರ ಸರ್ಕಾರ ಪತನವಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಹಾಗೂ ಸರ್ಕಾರವನ್ನು ಉಳಿಸಲು ನಿರಂತರವಾಗಿ ಪ್ರಯತ್ನ ಮಾಡಲಾಗುವುದು ಎಂದು ಜೆಡಿಎಸ್ ಮುಖಂಡ ಎಚ್ ಡಿ ದೇವೇಗೌಡ ಹೇಳಿದ್ದಾರೆ. 

ಬೆಂಗಳೂರು :  ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ರಾಜ್ಯದಲ್ಲಿ ರಚಿಸಿರುವ ಸಮ್ಮಿಶ್ರ ಸರ್ಕಾರ ಪತನವಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಹಾಗೂ ಸರ್ಕಾರದ ಉಳಿವಿಗಾಗಿ ಕೊನೆಯ ಹಂತದವರೆಗೆ ಹೋರಾಟ ನಡೆಸುತ್ತೇನೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಆದರೆ, ಅಂತಿಮವಾಗಿ ಏನಾಗುತ್ತದೆಯೋ ಗೊತ್ತಿಲ್ಲ ಎಂದೂ ಅವರು ಮಾರ್ಮಿಕವಾಗಿ ಹೇಳಿದ್ದಾರೆ.

ಕಾಂಗ್ರೆಸ್‌ ಮುಖಂಡರ ಹೇಳಿಕೆ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ ಒಂದು ರಾಷ್ಟ್ರೀಯ ಪಕ್ಷವಾಗಿದೆ. ವೈಯಕ್ತಿಕವಾಗಿ ನೋವಿನಿಂದ ಹೇಳಿದ್ದರೆ ಅದನ್ನು ಸರಿಪಡಿಸುವ ಶಕ್ತಿ ಕಾಂಗ್ರೆಸ್‌ಗೆ ಇದೆ ಎಂದರು.

ನಮ್ಮ ಜೆಡಿಎಸ್‌ನಲ್ಲಿ ಯಾವುದೇ ಸಮಸ್ಯೆ ಎದುರಾದರೆ ಅದನ್ನು ಬಗೆಹರಿಸಿ ಕ್ರಮ ಕೈಗೊಳ್ಳುತ್ತೇವೆ. ದೇಶದ ಹಿತದೃಷ್ಟಿಯಿಂದ ಈ ಮೈತ್ರಿ ಸರ್ಕಾರ ಉಳಿಯಬೇಕು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚಿಸಲಾಗಿದೆ. ಸರ್ಕಾರ ಪತನವಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪ್ರತಿಪಾದಿಸಿದರು.

ಕಾಂಗ್ರೆಸ್‌ ನಾಯಕರು ಯಾವ ಕಾರಣಕ್ಕಾಗಿ ಅಂತಹ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿದೆ. ನನಗೆ ಇರುವ ಹಿರಿತನದಿಂದ ಈ ದೇಶದ ರಾಜಕಾರಣದ ಬಗ್ಗೆ ಚಿಂತಿಸುತ್ತಿದ್ದೇನೆ. ಗೊಂದಲಗಳನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭಾವೋದ್ವೇಗಕ್ಕೊಳಗಾಗಿ ಅಂತಹ ಹೇಳಿಕೆ ನೀಡಿದ್ದಾರೆ. ಸಮಸ್ಯೆಯನ್ನು ಬಗೆಹರಿಸಲಾಗುವುದು. ಮೈತ್ರಿ ಸರ್ಕಾರದ ಉಳಿವಿಗಾಗಿ ಕೊನೆಯ ಘಟ್ಟದವರೆಗೆ ಹೋರಾಟ ನಡೆಸುತ್ತೇನೆ. ಆದರೆ, ಅಂತಿಮವಾಗಿ ಮುಂದೇನಾಗುತ್ತದೆಯೋ ಗೊತ್ತಿಲ್ಲ. ರಾಜಕೀಯ ವ್ಯವಸ್ಥೆಯನ್ನು ಉಳಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

click me!