
ಬೆಂಗಳೂರು (ಮಾ.6): ರಾಜ್ಯದಲ್ಲಿ ಸಂಪುಟ ದರ್ಜೆ ಸ್ಥಾನಮಾನ ಹಾಗೂ ಸೌಲಭ್ಯಗಳೊಂದಿಗೆ 34 ಮಂದಿ ಶಾಸಕರನ್ನು ವಿವಿಧ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳು ಸೇರಿ ವಿವಿಧ ಸಂಸ್ಥೆಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ರಾಜ್ಯ ಸರ್ಕಾರದ ಆದೇಶವನ್ನು ಸಂವಿಧಾನ ಬಾಹಿರವೆಂದು ಘೋಷಿಸಲು ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಬದಲಾಗಿ ವೈಯುಕ್ತಿಕ ಹಿತಾಸಕ್ತಿ ಅಡಗಿದೆ ಎಂದು ಹೈಕೋರ್ಟ್ ನುಡಿದಿದೆ.
ಈ ಕುರಿತು ಬೆಂಗಳೂರು ನಿವಾಸಿ ಸೂರಿ ಪಾಯಲ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇತ್ಯರ್ಥಪಡಿಸಿದ ಮುಖ್ಯ ನ್ಯಾಯಮೂರ್ತಿವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಉದ್ದೇಶ ಮತ್ತು ತಾವು ಇಂತಹದ್ದೆ ಬೇರೆ ಹುದ್ದೆಗಳ ಆಕಾಂಕ್ಷಿಯಾಗಿರುವುದನ್ನು ಅರ್ಜಿದಾರರು ನ್ಯಾಯಾಲಯದ ಮುಂದೆ ಬಹಿರಂಗಪಡಿಸಿಲ್ಲ. ಹಾಗಾಗಿ, ಇದೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ. ಈ ಅರ್ಜಿಯಲ್ಲಿ ವೈಯುಕ್ತಿಕ ಹಿತಾಸಕ್ತಿ ಅರ್ಜಿ ಅಡಗಿದೆ. ನಿಗಮ, ಮಂಡಳಿ, ಪ್ರಾಧಿಕಾರ, ಸಮಿತಿ ಅಧ್ಯಕ್ಷರಿಗೆ ವೇತನ, ಭತ್ಯೆ ನಿಗದಿಪಡಿಸಿರುವ ಸಂಬಂಧ 2017ರ ಸೆ.22ರಂದು ಆದೇಶ ಹೊರಡಿಸಲಾಗಿದ್ದು, ಸಂಬಂಧಪಟ್ಟ ಸಂಸ್ಥೆಗಳಿಂದಲೇ ವೇತನ-ಭತ್ಯೆ ನೀಡಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ ಎಂದು ಪೀಠ ಆದೇಶದಲ್ಲಿ ನುಡಿದಿದೆ.
33 ಸಚಿವರು ಇರಬೇಕು: ಸಂವಿಧಾನದ ಪ್ರಕಾರ ರಾಜ್ಯದ ವಿಧಾನಮಂಡಲದ ಒಟ್ಟು ಸಂಖ್ಯಾಬಲಕ್ಕೆ 33 ಸಂಪುಟ ಸಚಿವರು ಇರಬೇಕು. ಆದರೆ, ರಾಜ್ಯದಲ್ಲಿ 34 ಮಂದಿ ಶಾಸಕರು ಸೇರಿ ಒಟ್ಟು 159 ಮಂದಿ ಸಚಿವ ದರ್ಜೆ ಸ್ಥಾನಮಾನ ಹೊಂದಿದ್ದು, ಅವರಿಗೆಲ್ಲ ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆಗಳ ಕಾಯ್ದೆ-1956ರ ಪ್ರಕಾರ ಸೌಲಭ್ಯಗಳನ್ನು ಕೊಡಲಾಗುತ್ತಿದೆ. ಯಾವುದೇ ನಿರ್ದಿಷ್ಟ ಕಾನೂನು ಇಲ್ಲದೆ ಮತ್ತು ಕಾಯ್ದೆಗೆ ತಿದ್ದುಪಡಿ ತರದೇ ಈ ರೀತಿಯ ನೇಮಕಾತಿ ಮತ್ತು ಸೌಲಭ್ಯಗಳು ಸಂವಿಧಾನ ಬಾಹಿರ ಎಂದು ಅರ್ಜಿದಾರರ ವಾದವಾಗಿತ್ತು.
ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಅವರನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ರದ್ದುಪಡಿಸಿ, ಹೊಸ ಅಧ್ಯಕ್ಷರನ್ನು ನೇಮಿಸುವಂತೆ ಕೋರಿ ಬೆಂಗಳೂರಿನ ಎಂ.ಶ್ರೇಯಸ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಇದೇ ವೇಳೆ ಆದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ