ಕಳೆದ ಡಿಸೆಂಬರ್ 24 ರಂದು ಶ್ರೀರಂಗಪಟ್ಟಣದಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಬಂಧನದಿಂದ ರಕ್ಷಣೆಯನ್ನು ಶುಕ್ರವಾರ ವಿಸ್ತರಿಸಿದೆ.
ಬೆಂಗಳೂರು (ಜ.19): ಕಳೆದ ಡಿಸೆಂಬರ್ 24 ರಂದು ಶ್ರೀರಂಗಪಟ್ಟಣದಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಬಂಧನದಿಂದ ರಕ್ಷಣೆಯನ್ನು ಶುಕ್ರವಾರ ವಿಸ್ತರಿಸಿದೆ.
"ಮೋದಿ ಸರ್ಕಾರ ಮುಸ್ಲಿಂ ಮಹಿಳೆಯರಿಗೆ ಖಾಯಂ ಗಂಡಂದಿರನ್ನು ನೀಡಿದೆ" ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಭಟ್ ಅವರು ಮಾಡಿದ ಭಾಷಣದ ಸಂಪೂರ್ಣ ಪ್ರತಿಯನ್ನು ಸಲ್ಲಿಸುವಂತೆ ಹೈಕೋರ್ಟ್ ಇಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
'ಮುಸ್ಲಿಂ ಮಹಿಳೆಗೆ ಪರ್ಮನೆಂಟ್ ಗಂಡ' ವಿವಾದ; ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಮತ್ತೆರಡು ಎಫ್‌ಐಆರ್ ದಾಖಲು!
ಭಟ್ ಪರವಾಗಿ ವಾದ ಮಂಡಿಸಿದ ವಕೀಲ ಅರುಣ್ ಶ್ಯಾಮ್ ಅವರು, "ಎಫ್ಐಆರ್ ನಲ್ಲಿ ಕೆಲವು ಸೆಕ್ಷನ್ ಗಳನ್ನು ಹಾಕಲೆಂದೇ ಭಾಷಣದ ಮಧ್ಯದಿಂದ ಪದಗಳನ್ನು ಹೆಕ್ಕಿ ತೆಗೆಯಲಾಗಿದೆ. ದೂರುದಾರರು ರಾಜಕೀಯ ಕಾರ್ಯಕರ್ತೆಯಾಗಿದ್ದಾರೆ. ಭಾಷಣದ ಕೆಲ ಪದಗಳನ್ನು ಹೆಕ್ಕಿ ತೆಗೆದು ಅದಕ್ಕೆ ಅಪರಾಧದ ಬಣ್ಣ ನೀಡಲಾಗಿದೆ. ಈ ಹಿಂದೆ ಸರ್ಕಾರವೇ ಹೈಕೋರ್ಟ್ ನಲ್ಲಿ ಪ್ರಭಾಕರ ಭಟ್ ಬಂಧನ ಮಾಡಲ್ಲ ಎಂದು ಹೇಳಿದೆ. ಅದರ ಅರ್ಥ, ಪೊಲೀಸರು ರಾಜಕೀಯ ಒತ್ತಡದಿಂದ ಪ್ರಕರಣ ದಾಖಲಿಸಿದ್ದಾರೆ ಎಂಬುದು ಸರ್ಕಾರಕ್ಕೆ ಮನವರಿಕೆ ಆಗಿದೆ. ಸುಳ್ಳು ದೂರನ್ನು ಉದ್ದೇಶಪೂರ್ವಕವಾಗಿ ದಾಖಲಿಸಿದ್ದಾರೆ. ಹಾಗಾಗಿ ತಕ್ಷಣಕ್ಕೆ ತಡೆಯಾಜ್ಞೆ ನೀಡಬೇಕು" ಎಂದು ಕೋರಿಕೊಂಡರು.
ದೂರುದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಎಸ್ ಬಾಲನ್, "ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ಅಬಿಚ್ಯುವಲ್ ಅಫೆಂಡರ್ ಆಗಿದ್ದಾರೆ. ರಾಜ್ಯಾದ್ಯಂತ ದ್ವೇಷ ಭಾಷಣ ಮಾಡುತ್ತಾ ಕೋಮುಗಲಭೆ ಸೃಷ್ಟಿಸಿ ಹಿಂಸಾಚಾರಗಳನ್ನು ಮಾಡಿದ ಇತಿಹಾಸ ಇದೆ. ಈವರೆಗೆ ಈತನ ವಿರುದ್ದ ದಾಖಲಾದ ದೂರುಗಳನ್ನು ಪೀಠ ತರಿಸಿಕೊಳ್ಳಬೇಕು. ಮುಸ್ಲಿಮರಿಗೆ ದಿನಕ್ಕೊಬ್ಬ ಗಂಡ ಎಂದು ಆರೋಪಿ ಹೇಳಿರುವುದು ಇಡೀ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನ. ಹಾಗಾಗಿ ರಾಜ್ಯಾದ್ಯಂತ ಮುಸ್ಲಿಂ ಸಮುದಾಯ ಬೀದಿಗಿಳಿದು ಪ್ರತಿಭಟನೆ ನಡೆಸಿದೆ ಎಂದರು.
ಭಾಷಣದ ಪ್ರತಿಯನ್ನು ಒದಗಿಸುವುದು ಪ್ರಾಸಿಕ್ಯೂಷನ್‌ನ ಕರ್ತವ್ಯವೇ ಹೊರತು ದೂರುದಾರರಲ್ಲ ಎಂದು ಬಾಲನ್ ಅವರು ವಾದಿಸಿದರು. ಅಲ್ಲದೆ ನ್ಯಾಯಾಲಯದಲ್ಲಿ ವಿಡಿಯೋ ಪ್ಲೇ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಕಲ್ಲಡ್ಕ ಪ್ರಭಾಕರ್ ಭಟ್ ರೀತಿ ನಾನು ಮಾತನಾಡಿದ್ದರೆ ನಮ್ಮನೆ ಸುಟ್ಟು ಹಾಕ್ತಿದ್ದರು: ಮೊಯ್ದೀನ್ ಬಾವಾ
ತಡೆಯಾಜ್ಞೆ ನೀಡಲು ನಿರಾಕರಿಸಿದ ಹೈಕೋರ್ಟ್, ಆರೋಪಿಯನ್ನು ಬಂಧಿಸುವುದಿಲ್ಲ ಎಂದು ಸರ್ಕಾರ ಈ ಹಿಂದೆ ನೀಡಿದ ಹೇಳಿಕೆಯಂತೆ ಕೋರ್ಟ್ ನೀಡಿದ ರಿಲೀಫ್ ಮುಂದಿನ ದಿನಾಂಕದವರೆಗೆ ಮುಂದುವರೆಯಲಿದೆ ಎಂದು ಹೇಳಿದೆ.