
ಮಂಗಳೂರು (ಸೆ.14): ಹಾಸನದ ಮೊಸಳೆಹೊಸಳ್ಳಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಲಾರಿ ಹರಿದು ಭಕ್ತರ ಸಾವಿನ ಘಟನೆಯಿಂದ ಬೆಳ್ತಂಗಡಿಯ ಕೀಲು ಗೊಂಬೆ ಕುಣಿತದ ತಂಡ ಕೂದಲಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದೆ.
ಬೆಳ್ತಂಗಡಿಯ ಗಿರೀಶ್ ಶೆಟ್ಟಿ ಮಾಲೀಕತ್ವದ ಶೆಟ್ಟಿ ಆರ್ಟ್ಸ್ ಕಲಾ ತಂಡದ 17 ಮಂದಿ ಕಲಾವಿದರು ಈ ಗಣೇಶೋತ್ಸವ ಮೆರವಣಿಗೆಯಲ್ಲಿ ಕೀಲು ಗೊಂಬೆಯಲ್ಲಿ ಪಾಲ್ಗೊಂಡಿದ್ದರು. ಈ ಎಲ್ಲ ಕಲಾವಿದರು ಯಕ್ಷಗಾನ, ಕೀಲು ಕುದುರೆ ಸಹಿತ ವಿವಿಧ ಗೊಂಬೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಇನ್ನೇನು ಮೆರವಣಿಗೆ ಕೊನೆ ಹಂತದಕ್ಕೆ ತಲುಪಬೇಕು ಎನ್ನುವಷ್ಟರಲ್ಲಿ ಟ್ರಕ್ ಹರಿದು ಅವಘಡ ಸಂಭವಿಸಿ ಬಿಟ್ಟಿತು ಎನ್ನುತ್ತಾರೆ ತಂಡ ಮುಖ್ಯಸ್ಥ ಯಶೋಧರ್.
ಡಿಜೆ ಸಮೀಪದಲ್ಲೇ ಇದ್ದ ತಂಡ:
ನಮ್ಮ ಕೀಲು ಗೊಂಬೆ ಕುಣಿತದ ತಂಡ ಡಿಜೆ ಸಮೀಪದಲ್ಲೇ ಸಾಗುತ್ತಿತ್ತು. ಮೆರವಣಿಗೆಯಲ್ಲಿ ಡಿಜೆ ಶಬ್ದಕ್ಕೆ ಗೊಂಬೆ ಕುಣಿತದ ವಾದ್ಯಗಳ ಸದ್ದು ಕೇಳುವುದಿಲ್ಲ ಎಂಬ ಕಾರಣಕ್ಕೆ ಡಿಜೆಯಿಂದ ಸ್ವಲ್ಪ ಹೆಚ್ಚೇ ಅಂತರದಲ್ಲಿ ಸಾಗುತ್ತಿದ್ದೆವು. ಅಷ್ಟರಲ್ಲಿ ಏಕಾಏಕಿ ಡಿವೈಡರ್ ಏರಿ ಟ್ರಕ್ ಮುನ್ನುಗ್ಗಿ ಬಂದು ಮೆರವಣಿಗೆಗೆ ಅಪ್ಪಳಿಸಿತ್ತು. ನಮ್ಮ ತಂಡದ ಕಲಾವಿದರೊಬ್ಬರು ತಕ್ಷಣವೇ ಓಡಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡರು. ಅದೊಂದು ಭಯಾನಕ ದೃಶ್ಯವಾಗಿದ್ದು, ಇನ್ನೂ ಭೀತಿಯ ಗುಂಗಿನಿಂದ ತಂಡದ ಸದಸ್ಯರು ಹೊರಬಂದಿಲ್ಲ. ಗಣೇಶೋತ್ಸವ ಸಮಿತಿ ಅಧ್ಯಕ್ಷರು ಇನ್ನೇನು ಡಿಜೆ ವಾಹನದ ಬಳಿ ತೆರಳಲು ಮುಂದಾಗಿದ್ದರು. ಅಷ್ಟರದಲ್ಲಿ ಅವಘಡ ಸಂಭವಿಸಿತ್ತು. ಹಾಗಾಗಿ ಅವರ ಜೀವವೂ ಉಳಿಯಿತು ಎನ್ನುತ್ತಾರೆ ಯಶೋಧರ್.
ಅವಘಡ ಸಂಭವಿಸಿದ ಬಳಿಕ ಚಾಲಕ ಟ್ರಕ್‌ನಲ್ಲೇ ಅಮಲಿನಲ್ಲಿ ಸ್ಟೇರಿಂಗ್‌ಗೆ ಬಿದ್ದಿದ್ದ. ಬಳಿಕ ಆತನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಆತ ಅಮಲು ಪದಾರ್ಥ ಸೇವಿಸಿರುವುದನ್ನು ತಿಳಿಸಿದ್ದಾರೆ. ವಿನಾ ಕಾರಣ ಹಲವು ಮಂದಿ ಜೀವ ಕಳೆದುಕೊಳ್ಳುವಂತಾಗಿದೆ ಎನ್ನುತ್ತಾರೆ ಯಶೋಧರ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ