
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಸಮೀಪ ಸಂಭವಿಸಿದ ಭೀಕರ ಬಸ್ ಅಪಘಾತ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ಈ ದುರಂತದಲ್ಲಿ ಲಾರಿ ಡ್ರೈವರ್ ಸೇರಿ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ನವ್ಯ ಹಾಗೂ ಮಾನಸ ಅವರ ಪೋಷಕರ ನೋವಿನ ಕಥೆ ಕರುಳು ಹಿಂಡುವಂತಿದೆ. ಜೀವದ ಗೆಳತಿಯರಿಬ್ಬರು ಸಿಗಂದೂರಿಗೆ ಪ್ರಯಾಣಿಸುತ್ತಿದ್ದರು. ಮಾನಸ ಮತ್ತು ನವ್ಯ ಎಂಬ ಇಬ್ಬರಿಗೂ ಮದುವೆ ನಿಶ್ಚಯವಾಗಿತ್ತು. ಈಗ ಇಬ್ಬರ ದುರ್ಮರಣ ಕುಟುಂಬದವರ ಕಣ್ಣೀರಿನ ಕಥೆಯಾಗಿ ಮಾರ್ಪಟ್ಟಿದೆ. ಇನ್ನೂ ಕೆಲವೇ ತಿಂಗಳಲ್ಲಿ ಹಸೆಮಣೆ ಏರಬೇಕಿದ್ದ ಮಗಳಂದಿರು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಗುರುತೇ ಸಿಗದಂತೆ ಆಗಿರುವುದು ಪಾಲಕರಿಗೆ ಆಘಾತ ತರಿಸಿದೆ. ಜೀವದ ಗೆಳತಿಯರು ಮಾತ್ರ ಜೊತೆಗೆ ಜೀವ ಕಳೆದುಕೊಂಡಿರವುದು ಆ ಯಮರಾಜನಿಗಷ್ಟೇ ಖುಷಿಯೇನೋ!
ಈ ಭೀಕರ ಅಪಘಾತದಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಅಂಕನಹಳ್ಳಿ ಗ್ರಾಮದ ನವ್ಯ ಹಾಗೂ ಚನ್ನರಾಯಪಟ್ಟಣ ಪಟ್ಟಣದ ಮಾನಸ ಎಂಬ ಇಬ್ಬರು ಯುವತಿಯರು ಮೃತಪಟ್ಟಿದ್ದಾರೆ. ಇಬ್ಬರೂ ಮಲೆನಾಡು ಇಂಜಿನಿಯರಿಂಗ್ ಕಾಲೇಜು, ಹಾಸನದಲ್ಲಿ ಒಟ್ಟಿಗೇ ಇಂಜಿನಿಯರಿಂಗ್ ಶಿಕ್ಷಣ ಪೂರ್ಣಗೊಳಿಸಿದ್ದ ಆಪ್ತ ಸ್ನೇಹಿತೆಯರು. ಬಳಿಕ ಬೆಂಗಳೂರಿನಲ್ಲಿ ಎಂಟೆಕ್ ಮುಗಿಸಿ, ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಉದ್ಯೋಗದಲ್ಲಿದ್ದರು. ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದ ನವ್ಯ ಹಾಗೂ ಮಾನಸ, ಪ್ರಯಾಣಕ್ಕಾಗಿ ಬೆಂಗಳೂರಿನಿಂದ ಖಾಸಗಿ ಬಸ್ ಹತ್ತಿ ಹೊರಟಿದ್ದರು. ಆದರೆ, ಆ ಪ್ರಯಾಣವೇ ಅವರ ಜೀವನದ ಕೊನೆಯ ಪ್ರಯಾಣವಾಗಲಿದೆ ಎಂಬುದು ಯಾರಿಗೂ ಊಹಿಸಲಾರದ ಸಂಗತಿಯಾಗಿತ್ತು.
ಅಪಘಾತದ ತೀವ್ರತೆಯಿಂದಾಗಿ ಕೆಲ ಮೃತದೇಹಗಳ ಗುರುತು ಪತ್ತೆಯಲ್ಲಿ ಗೊಂದಲ ಉಂಟಾಗಿತ್ತು. ವಿಶೇಷವಾಗಿ ನವ್ಯ ಮತ್ತು ಮಾನಸ ಅವರ ಮೃತದೇಹಗಳನ್ನು ಗುರುತಿಸುವ ಪ್ರಕ್ರಿಯೆ ಬಹಳ ಸಮಯ ತೆಗೆದುಕೊಂಡಿದೆ. ಪೊಲೀಸರು ಅಗತ್ಯವಿದ್ದಲ್ಲಿ ಡಿಎನ್‌ಎ ಪರೀಕ್ಷೆ ಮೂಲಕ ಅಂತಿಮ ದೃಢೀಕರಣ ಮಾಡುವುದಾಗಿ ತಿಳಿಸಿದ್ದಾರೆ. ಮಾನಸಾಳ ತಂದೆ ಚಂದ್ರೇಗೌಡ ಅವರು ತಾವೇ ಮಗಳಿಗೆ ಕೊಟ್ಟಿದ್ದ ಚಿನ್ನದ ಸರವನ್ನು ಗಮನಿಸಿ, ಅದೇ ತಮ್ಮ ಮಗಳ ಮೃತದೇಹ ಎಂದು ಗುರುತಿಸಿದ್ದಾರೆ. ಆದರೆ ಗೆಳತಿಯರಿಬ್ಬರು ತಮ್ಮ ಚಿನ್ನದ ಸರವನ್ನು ಅದಲು ಬದಲು ಮಾಡಿಕೊಂಡು ಹಾಕಿಕೊಳ್ಳುತ್ತಿದ್ದರಂತೆ ಹೀಗಾಗಿ ಮೃತದೇಹದಲ್ಲಿ ಯಾವುದು ನವ್ಯ? ಯಾವುದು ಮಾನಸ? ಎಂಬುದು ತಿಳಿದುಬಂದಿಲ್ಲ.
ಮಗಳ ನೆನಪಿನಲ್ಲಿ ಕಣ್ಣೀರಿಟ್ಟ ತಂದೆ ಚಂದ್ರೇಗೌಡ, “ಆರು ತಿಂಗಳಲ್ಲಿ ಹಸೆಮಣೆ ಏರಬೇಕಿತ್ತು. ಮದುವೆ ಚೆನ್ನಾಗಿ ಮಾಡುವ ಕನಸು ಕಂಡಿದ್ದೆವು. ಎಲ್ಲವೂ ಕ್ಷಣಾರ್ಧದಲ್ಲಿ ಮುಗಿದುಹೋಯಿತು” ಎಂದು ಅಳಲು ತೋಡಿಕೊಂಡಿದ್ದಾರೆ. ಕುಟುಂಬದವರ ದುಃಖವನ್ನು ಶಮನಪಡಿಸಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಅಲ್ಲಿಗೆ ನಿರ್ಮಾಣವಾಗಿದೆ.
ನವ್ಯ ಅವರ ತಂದೆ ಮಂಜಪ್ಪ ಅವರು ಮಗಳ ಫೋಟೋ ಕೈಯಲ್ಲಿ ಹಿಡಿದುಕೊಂಡು, ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಅಲೆದಾಡುತ್ತಾ ಮಗಳಿಗಾಗಿ ಹುಡುಕಾಟ ನಡೆಸುತ್ತಿದ್ದುದು ಕರುಳು ಹಿಂಡುವಂತಿತ್ತು. ನನ್ನ ಮಗಳು ಎಲ್ಲಿ? ಎಂದು ಆಸ್ಪತ್ರೆಯಲ್ಲಿ ಫೋಟೋ ಹಿಡಿದು ಸಿಕ್ಕ ಸಿಕ್ಕವರ ಬಳಿ ಕೇಳುತ್ತಿದ್ದರು. ಮಗಳ ಭವಿಷ್ಯದ ಕನಸುಗಳನ್ನು ನೆನಪಿಸಿಕೊಂಡ ತಂದೆ ಮಂಜಪ್ಪ, “ಏಪ್ರಿಲ್ 28ಕ್ಕೆ ನವ್ಯ ಮದುವೆ ನಿಶ್ಚಯವಾಗಿತ್ತು. ಮನೆಗೆ ಸಂತಸದ ದಿನಗಳು ಬರಲಿದ್ದವು ಎಂದುಕೊಂಡಿದ್ದೆವು. ಆದರೆ ಇಂದು ಎಲ್ಲವೂ ಮುಗಿಯಿತು ಎಂದು ಕಣ್ಣೀರಿಟ್ಟಿದ್ದಾರೆ. ಒಂದು ಕ್ಷಣದಲ್ಲಿ ಸಂಭವಿಸಿದ ಅಪಘಾತವು ಯುವತಿಯರ ಜೀವನವನ್ನಷ್ಟೇ ಅಲ್ಲ, ಅವರ ಹೆತ್ತವರ ಕನಸುಗಳನ್ನೂ ಚೂರಾಗಿಸಿದೆ. ನವ್ಯ ಮತ್ತು ಮಾನಸ ಅವರ ಪೋಷಕರ ನಿರೀಕ್ಷೆಯೂ ಹುಸಿಯಾಗಿದೆ. ಜೀವದ ಗೆಳತಿಯರೂ ಇಬ್ಬರೂ ಜೊತೆಗೆ ಜೀವ ಬಿಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ