
ಹಾಸನ (ಅ.22): ಪ್ರಸಿದ್ಧ ಹಾಸನಾಂಬ ದೇವಿಯ ಸಾರ್ವಜನಿಕರ ದರ್ಶನಕ್ಕೆ ಅ.22 ಕೊನೆಯ ದಿನವಾಗಿದ್ದು, ಅ.23ರಂದು ಮಧ್ಯಾಹ್ನ ದೇಗುಲದ ಗರ್ಭಗುಡಿ ಬಾಗಿಲು ಬಂದ್ ಆಗಲಿದೆ. ಕಳೆದ 13 ದಿನದಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನ ಮಾಡಿದ್ದು, ಈವರೆಗೆ ಆದಾಯ ಗಳಿಕೆ ₹25 ಕೋಟಿ ಸಮೀಪಕ್ಕೆ ತಲುಪಿದೆ.
ವರ್ಷಗಳು ಕಳೆದಂತೆ ಹಾಸನಾಂಬ ದೇವಿಗೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ದೇವಸ್ಥಾನದ ಆದಾಯವೂ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಲೇ ಇದೆ. ಕಳೆದ ವರ್ಷ ₹12.5 ಕೋಟಿ ಆಸುಪಾಸಿನಲ್ಲಿದ್ದ ಆದಾಯ ಈ ಬಾರಿ 25 ಕೋಟಿ ತಲುಪುವ ಸಾಧ್ಯತೆ ಇದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಲತಾಕುಮಾರಿ ಅವರು, 1000 ರು. ಹಾಗೂ 300 ರು. ವಿಶೇಷ ದರ್ಶನ ಟಿಕೆಟ್ ಮಾರಾಟ ಹಾಗೂ ಲಾಡು ಪ್ರಸಾದದಿಂದ ಸುಮಾರು ₹20 ಕೋಟಿ ಆದಾಯ ಬಂದಿದೆ. ಈ ಬಾರಿ ಅ.9 ರಿಂದ 23ರವರೆಗೆ ದರ್ಶನೋತ್ಸವ ಕಲ್ಪಿಸಲಾಗಿತ್ತು. ಅದರಂತೆ ಅ.22 ಸಾರ್ವಜನಿಕರ ದರ್ಶನಕ್ಕೆ ಕಡೆಯ ದಿನ. ಅ.23 ಮಧ್ಯಾಹ್ನ ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಬಂದ್ ಆಗಲಿದೆ. ಈ ದಿನದಂದು ಭಕ್ತರಿಗೆ ಬಿಡಲು ಅವಕಾಶವಿಲ್ಲ. ಹಾಗಾಗಿ ಕಡೆ ದಿನವಾದ ಬುಧವಾರ ಲಕ್ಷಾಂತರ ಭಕ್ತರು ಆಗಮಿಸುವ ಸಾಧ್ಯತೆ ಇದ್ದು, ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ ಆದಾಯ ಇನ್ನಷ್ಟು ಏರಿಕೆ ಆಗಲಿದೆ ಎಂದರು.
ಜಾತ್ರೆ ಆರಂಭದಲ್ಲಿ, ಈ ಬಾರಿ ಕಟ್ಟುನಿಟ್ಟಿನ ನಿಯಮಾವಳಿ ಮಾಡಿರುವುದರಿಂದ ಭಕ್ತರ ಸಂಖ್ಯೆ ಕಡಿಮೆಯಾಗಿ ಆದಾಯ ಕಡಿಮೆ ಆಗುವುದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ್ದ ಸಚಿವ ಕೃಷ್ಣ ಬೈರೇಗೌಡ ಅವರು, ‘ನಾವು ಆದಾಯಕ್ಕಾಗಿ ಜಾತ್ರೆ ನಡೆಸುತ್ತಿಲ್ಲ’ ಎಂದಿದ್ದರು. ಆದರೆ, ಈಗಿನ ಅಂಕಿ ಅಂಶ ನೋಡಿದರೆ ಸಚಿವರು, ಜಿಲ್ಲಾಡಳಿತದ ನಿರೀಕ್ಷೆಗೂ ಮೀರಿ ಆದಾಯ ಬಂದಿದೆ. ಬಹುಶಃ ಕಳೆದ ಬಾರಿಯ ಅವ್ಯವಸ್ಥೆಯಿಂದ ಬೇಸತ್ತಿದ್ದ ಭಕ್ತರು ಈ ಬಾರಿಯ ಸುವ್ಯವಸ್ಥೆ ಬಗ್ಗೆ ಮಾಧ್ಯಮಗಳು ಮಾಡಿದ ವರದಿಯನ್ನು ನೋಡಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿದ್ದರು ಎಂದು ಹೇಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ