ಬೆಂಗಳೂರಿನಲ್ಲಿ ಆಲಿಕಲ್ಲು ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮರಗಳು ಧರೆಗುರುಳಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇನ್ನೂ ನಾಲ್ಕೈದು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಸಂಜೆ ಆಲಿಕಲ್ಲು ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪ್ರಸಕ್ತ ಸಾಲಿನ ಮೊದಲ ಮಳೆಗೆ ಬೆಂಗಳೂರು ತತ್ತರಿಸಿ ಮತ್ತೆ ಸಂಕಷ್ಟ ತಂದೊಡ್ಡಿದೆ. ಶನಿವಾರ ಸಂಜೆ ಸುರಿದ ಮಳೆಗೆ ವಾಹನ ಸವಾರರು ಪರದಾಡುವಂತಾಯಿತು. ನಗರದ ಹಲವೆಡೆ ಮರಗಳು ಧರೆಗುರುಳಿದ್ದು, ಕೆಂಗೇರಿ, ಕೋರಮಂಗಲ ಸೇರಿದಂತೆ ಹಲವೆಡೆ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ಬೆಂಗಳೂರಿನ ಹೊರವಲಯ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಬಿರುಗಾಳಿಯೊಂದಿಗೆ ಆಲಿಕಲ್ಲು ಮಳೆಯಾಗಿದ್ದು, ಹಲವೆಡೆ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಮಳೆಯಿಂದ ರಸ್ತೆಗಳು ಕೆಸರುಮಯವಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು. ಇನ್ನೂ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಶನಿವಾರ ರಾತ್ರಿ ಸುರಿದ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಶಿವಾಜಿನಗರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಭಾನುವಾರ ಬೆಳಗ್ಗೆಯವರೆಗೂ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕಳೆದ ವರ್ಷಾಂತ್ಯದ ಮಳೆಗೆ ಜನರು ತತ್ತರಿಸಿದ್ದರು. ಮಳೆ ನಿಂತ ಬಳಿಕವಷ್ಟೇ ಜನರು ನಿಟ್ಟುಸಿರು ಬಿಟ್ಟಿದ್ದರು. ಇದೀಗ ಮತ್ತೆ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಅದರಲ್ಲೂ ಉತ್ತರ ಭಾಗದ ನಾಗರಿಕರಿಗೆ ಆತಂಕವನ್ನು ಹೆಚ್ಚಿಸಿದೆ. ನಿನ್ನೆ ಸಂಜೆ ಸುಮಾರು 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಳೆ ಸುರಿಯಿತು. ಮಳೆಗೆ ಪುಲಕೇಶಿನಗರದಲ್ಲಿ ತಂದೆ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ 3 ವರ್ಷದ ಮಗು ಮೃತಪಟ್ಟಿದೆ.
ನಾಲ್ಕೈದು ದಿನ ಮಳೆ
ಇಂದು ದಕ್ಷಿಣ ಒಳನಾಡಿನ ವಿವಿಧ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿಯೂ ಮಳೆಯಾಗಲಿದೆ. ಸೋಮವಾರದಿಂದ ನಾಲ್ಕೈದು ದಿನ ರಾಜ್ಯಾದ್ಯಂತ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ. ಗಾಳಿ, ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರದ ಜಂಗಮಕೋಟೆಯ 1033 ಎಕರೆಯಲ್ಲಿ ನಿರ್ಮಾಣವಾಗಲಿದೆ ಡೀಪ್ ಟೆಕ್ ಪಾರ್ಕ್!
ಬಳ್ಳಾರಿಯಲ್ಲಿ ಮಳೆ
ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಬಳ್ಳಾರಿ ಜನರಿಗೆ ಶುಕ್ರವಾರ ಸಂಜೆ ಸುರಿದ ಮಳೆಯು ತಂಪೆರೆಯಿತು. ಬೆಳಗ್ಗೆಯಿಂದ ಬಿಸಿಲಿನ ತೀವ್ರತೆಯಿತ್ತು. ಸಂಜೆ 4 ಗಂಟೆಗೆ ಮಳೆಯ ಆಗಮನವಾಯಿತು. ಸುಮಾರು ಅರ್ಧಗಂಟೆಗೂ ಹೆಚ್ಚು ಹೊತ್ತು ಧಾರಾಕಾರವಾಗಿ ಮಳೆ ಸುರಿಯಿತು. ಸಂಜೆ 5.30ರ ವರೆಗೆ ತುಂತುರು ಮಳೆ ಮುಂದುವರಿದಿತ್ತು. ಜಿಲ್ಲೆಯ ನಾನಾ ಕಡೆ ತುಂತುರು ಮಳೆಯಾಗಿದೆ. ಸಂಡೂರು, ಸಿರುಗುಪ್ಪ, ಕಂಪ್ಲಿ ಹಾಗೂ ಕುರುಗೋಡು ತಾಲೂಕಿನ ಅಲ್ಲಲ್ಲಿ ಸಂಜೆ ತುಂತುರು ಮಳೆಯಾಗಿದೆ. ಸಂಡೂರು ಹಾಗೂ ಕುರುಗೋಡಿನಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆ ಕೆಲ ಹೊತ್ತು ಅಲ್ಲಲ್ಲಿ ಮಳೆ ಸುರಿದ ವರದಿಯಾಗಿದೆ. ಬೇಸಿಗೆ ಶುರುವಿನ ಮೊದಲ ಮಳೆ ಇದಾಗಿದ್ದು ವರುಣನ ಆಗಮನ ನಗರದ ಜನರಿಗೆ ತಂತಸ ತಂದಿದೆ.
ಬಿಸಿ ಗಾಳಿ, ತಪಮಾನದಲ್ಲಿನ ಭಾರಿ ಏರಿಕೆಯಿಂದಾಗಿ ಕಾದ ಕಾವಲಿಯಾಗಿದ್ದ ಕೋಲಾರದಲ್ಲಿ ಶನಿವಾರ ರಾತ್ರಿ 7 ಗಂಟೆಯಿಂದ ಪ್ರಾರಂಭವಾದ ಮಳೆಯು ಸುಮಾರು ಅರ್ಧಗಂಟೆ ಕಾಲ ಸುರಿಯಿತು. ಬೇಸಿಗೆಯ ಮೊದಲ ಬಾರಿ ಕೋಲಾರದಲ್ಲಿ ಸಾಧಾರಣ ಮಳೆಯಾಗಿದೆ. ಕೋಲಾರದಲ್ಲಿ ಅಲ್ಪ ಮಳೆ ಸುರಿಯುವ ಮೂಲಕ ಕಾದು ಕೆಂಡವಾಗಿದ್ದ ಭೂಮಿಯ ವಾತಾವರಣ ಇನ್ನಷ್ಟು ಬಿಸಿಯೇರಿಸಿದೆ, ಸಾದಾರಣ ಮಳೆಯಾಗುವ ಮೂಲಕ ಮತ್ತಷ್ಟು ಸೆಕೆಯ ವಾತಾವರಣ ಸೃಷ್ಟಿಸಿದೆ.
ಇದನ್ನೂ ಓದಿ: ಅಂತೂ ಇಂತೂ ಮಳೆ ಕಂಡ ಬೆಂಗಳೂರಿಗರು, ವರುಣನ ಆರ್ಭಟಕ್ಕೆ ಅವಾಂತರವೋ ಅವಾಂತರ!