'ಬಿಯರ್ ಬೆಲೆ ಏರಿಸಿದ್ದಕ್ಕೆ ಮಕ್ಕಳು ಗಾಂಜಾ ಮೊರೆ ಹೋಗ್ತಿದ್ದಾರೆ': ಅಬಕಾರಿ ಬೆಲೆ ಏರಿಕೆಗೆ ಹೆಚ್. ವಿಶ್ವನಾಥ್ ಆಕ್ರೋಶ!

Published : Mar 17, 2026, 08:13 PM IST
h vishwanath

ಸಾರಾಂಶ

ವಿಧಾನಪರಿಷತ್ತಿನಲ್ಲಿ ರಾಜ್ಯ ಸರ್ಕಾರದ ಬಜೆಟ್ ಚರ್ಚೆಯಲ್ಲಿ, ಹೆಚ್. ವಿಶ್ವನಾಥ್ ಅವರು ಸರ್ಕಾರದ ದುಂದುವೆಚ್ಚ, ಅಬಕಾರಿ ನೀತಿ, ಮತ್ತು ಆಡಳಿತಾತ್ಮಕ ವೈಫಲ್ಯಗಳನ್ನು ತೀವ್ರವಾಗಿ ಟೀಕಿಸಿದರು. ಜಾಹೀರಾತು ವೆಚ್ಚ, ಬಿಯರ್ ಬೆಲೆ ಏರಿಕೆ, ಮತ್ತು ಕುರಿಗಾಹಿಗಳ ಅನುದಾನದ ದುರ್ಬಳಕೆಯನ್ನು ಅವರು ಪ್ರಶ್ನಿಸಿದ್ದಾರೆ. 

ಬೆಂಗಳೂರು (ಮಾ.17): ವಿಧಾನಪರಿಷತ್ತಿನಲ್ಲಿ ರಾಜ್ಯ ಸರ್ಕಾರದ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಹೆಚ್. ವಿಶ್ವನಾಥ್ ಅವರು, ಸರ್ಕಾರದ ದುಂದುವೆಚ್ಚ, ಅಬಕಾರಿ ನೀತಿ ಮತ್ತು ಆಡಳಿತಾತ್ಮಕ ವೈಫಲ್ಯಗಳನ್ನು ಖಂಡಾತುಂಡವಾಗಿ ಟೀಕಿಸಿದರು. ಸರ್ಕಾರ ಇದುವರೆಗೆ ಜಾಹೀರಾತುಗಳಿಗಾಗಿಯೇ 532 ಕೋಟಿ ರೂಪಾಯಿ ಖರ್ಚು ಮಾಡಿದೆ. ಇದನ್ನು 'ಅಡ್ವರ್ಟೈಸ್‌ಮೆಂಟ್ ಸರ್ಕಾರ' ಎನ್ನಬಹುದು.ಅಕ್ಷರ ಮತ್ತು ಆರೋಗ್ಯ ಚೆನ್ನಾಗಿದ್ದರೆ ಅನ್ನ ತಾನಾಗಿಯೇ ಹುಟ್ಟುತ್ತದೆ, ಆದರೆ ರಾಜ್ಯದಲ್ಲಿ ಇವೆರಡೂ ವ್ಯವಸ್ಥೆಗಳು ಸರಿಯಿಲ್ಲ. ಆಡಳಿತ ವಿಫಲವಾಗಿದ್ದು, ಅನುಷ್ಠಾನ ಶೂನ್ಯವಾಗಿದೆ" ಎಂದರು.

ಕೆಳಮನೆಯಲ್ಲಿ ಸ್ಪೀಕರ್ ವಾಕ್‌ಔಟ್ ಮಾಡಿದ ಪ್ರಸಂಗವನ್ನು ಉಲ್ಲೇಖಿಸಿದ ಅವರು "ಮೂವರು ಅಧಿಕಾರಿಗಳನ್ನು ಅಮಾನತು ಮಾಡ್ತೇವೆ ಅಂದಿದ್ರಿ, ಯಾಕಿನ್ನೂ ಮಾಡಿಲ್ಲ? ನಿಮಗವರನ್ನು ಅಮಾನತು ಮಾಡಲು ಸಾಧ್ಯವೇ ಇಲ್ಲ. ಯಾಕೆ ಸುಮ್ಮನೆ ಸುಳ್ಳು ಹೇಳುತ್ತೀರಿ' ಎಂದು ಸವಾಲು ಹಾಕಿದರು.

ಬೆಲೆ ಏರಿಕೆ ಮತ್ತು ಅಬಕಾರಿ ನೀತಿಯ ಟೀಕೆ

ಸಿಅಡುಗೆ ಅನಿಲ ಬೆಲೆ ಏರಿಕೆಯಾದಾಗ ಪ್ರಧಾನಿ ಮೋದಿ ರಾಜೀನಾಮೆಗೆ ಆಗ್ರಹಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ, ಈಗ ಹಾಲು, ನೀರು ದರ ಹೆಚ್ಚಳ ಮಾಡಿದ್ದೀರಿ, ಹಾಗಾದರೆ ನೀವೆಷ್ಟು ಬಾರಿ ರಾಜೀನಾಮೆ ನೀಡಬೇಕು? ಎಂದು ಪ್ರಶ್ನೆ ಮಾಡಿದರು. ಬಿಯರ್ ಬೆಲೆಯನ್ನು 230 ರೂಪಾಯಿಗೆ ಏರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, "ನಾನು ಮತ್ತು ಸಿಎಂ ಒಟ್ಟಿಗೆ ಓದುತ್ತಿದ್ದಾಗ ಒಂದು ರೂಪಾಯಿ ಹಾಕಿ ಬಿಯರ್ ತರುತ್ತಿದ್ದೆವು. ಈಗ ಬಿಯರ್ ಬೆಲೆ ಏರಿಕೆಯಿಂದ ಮಕ್ಕಳು ಗಾಂಜಾ ಮೊರೆ ಹೋಗುತ್ತಿದ್ದಾರೆ. ಮೈಸೂರಿನಲ್ಲಿ ಗುಜರಾತ್ ಪೊಲೀಸರು ಬಂದು ಡ್ರಗ್ಸ್ ಫ್ಯಾಕ್ಟರಿ ಹಿಡಿಯುತ್ತಾರೆ ಅಂದರೆ ನಮ್ಮ ಪೊಲೀಸರು ಮಾಮೂಲಿ ಪಡೆದು ಮಲಗಿದ್ದಾರಾ?" ಎಂದು ಖಾರವಾಗಿ ಪ್ರಶ್ನಿಸಿದರು. ಅಬಕಾರಿ ಮೇಲೆ ತೆರಿಗೆ ಹಾಕಿ ಯುವಜನರನ್ನು ಕೊಲ್ಲುವ ಬದಲು, 'ರಿಯಲ್ ಎಸ್ಟೇಟ್ ಟ್ಯಾಕ್ಸ್' ವಿಭಾಗ ಮಾಡಿ ಅಲ್ಲಿ ತೆರಿಗೆ ವಸೂಲಿ ಮಾಡಿ ಎಂದು ಸಲಹೆ ನೀಡಿದರು.

ಕುರಿಗಾಹಿಗಳ ಸಮಸ್ಯೆ ಮತ್ತು ಮಂಡಳಿ

ಕುರಿ ಸಾಕಾಣಿಕೆ ಇಂದು ಬ್ರಾಹ್ಮಣರು ಸೇರಿದಂತೆ ಎಲ್ಲರೂ ಮಾಡುತ್ತಿರುವ ದೊಡ್ಡ ಉದ್ಯಮ. ಇದೊಂದು 'ಮೂವಿಂಗ್ ಬ್ಯಾಂಕ್'. ಕುರಿ ಮಂಡಳಿಗೆ ಹಣ ನೀಡುವ ಬದಲು ಶಾಸಕರಿಗೆ ಹಣ ನೀಡಲಾಗುತ್ತಿದೆ. ಶಾಸಕರು ಆ ಹಣವನ್ನು ಕುರಿಗಾಹಿಗಳಿಗೆ ನೀಡದೆ ಬೇರೆಯವರಿಗೆ ಹಂಚುತ್ತಿದ್ದಾರೆ ಎಂದು ದೂರಿದರು.ಮುಖ್ಯಮಂತ್ರಿಗಳಿಗೆ ಕೆಲಸದ ಒತ್ತಡವಿರುತ್ತದೆ, ಹಾಗಾಗಿ ರಾಜ್ಯಕ್ಕೆ ಪ್ರತ್ಯೇಕ ಹಣಕಾಸು ಸಚಿವರ ನೇಮಕವಾಗಲಿ ಎಂದು ಕುಮಾರಸ್ವಾಮಿ ಅವಧಿಯಲ್ಲೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ ಎಂದರು.

ಮೈಸೂರು-ಬೆಂಗಳೂರಿನ 120 ಕಿ.ಮೀ ಪ್ರಯಾಣಕ್ಕೆ ಸ್ಪೆಷಲ್ ಫ್ಲೈಟ್ ಬಳಸುವ ಅಗತ್ಯವೇನಿದೆ? ಕೋಟ್ಯಾಧಿಪತಿಗಳಾದ ಸುಧಾಮೂರ್ತಿ, ನಾರಾಯಣಮೂರ್ತಿ ಅವರೇ ಇಂಡಿಗೊ ವಿಮಾನದಲ್ಲಿ ಹೋಗುತ್ತಾರೆ. ನಮ್ಮ ಸರ್ಕಾರಕ್ಕೆ ಅಷ್ಟು ಹಣವಿದೆಯೇ ಎಂದು ಪ್ರಶ್ನಿಸಿದರು. ಅಲ್ಲದೆ, ರಾಜ್ಯದಲ್ಲಿ 138 ಜನರಿಗೆ ಕ್ಯಾಬಿನೆಟ್ ರ್ಯಾಂಕ್ ನೀಡಲಾಗಿದೆ. ಕಾಂಗ್ರೆಸ್‌ ಸರ್ಕಾರ ಸಂವಿಧಾನ ಉಲ್ಲಂಘಿಸಿದೆ. ಸಿಎಂ ಮೀಡಿಯಾ ಸೆಕ್ರೆಟರಿಗೂ ಕ್ಯಾಬಿನೆಟ್ ದರ್ಜೆ ಬೇಕೆ? ಮಂತ್ರಿಗಳನ್ನು ಹೊಡೆಯುವವರು ಯಾರಿದ್ದಾರೆ ಎಂದು ಅತಿಯಾದ ಸೆಕ್ಯೂರಿಟಿ ಬಗ್ಗೆ ಲೇವಡಿ ಮಾಡಿದರು.

ವಿಶ್ವನಾಥ್ ಅವರ ಟೀಕೆಗೆ ಸಲೀಂ ಅಹ್ಮದ್ ಮತ್ತು ಸಚಿವ ಶಿವರಾಜ್ ತಂಗಡಗಿ ಆಕ್ಷೇಪ ವ್ಯಕ್ತಪಡಿಸಿ, ಸಿಎಂ ಜನಪ್ರಿಯರಾಗಿದ್ದಾರೆ, ಅವರಿಗೆ ಸೆಕ್ಯೂರಿಟಿ ಬೇಕು ಎಂದಾಗ ಛಲವಾದಿ ನಾರಾಯಣಸ್ವಾಮಿ ವಿಶ್ವನಾಥ್ ಬೆಂಬಲಕ್ಕೆ ನಿಂತರು. "ಇದೊಂದು ಡೈಲಿ ವೇಜ್ ಸರ್ಕಾರ. ರಿಟೈರ್ಡ್ ಐಎಎಸ್ ಅಧಿಕಾರಿಗಳ ಪತ್ನಿಯರೇ ಇಲ್ಲಿ ಗುತ್ತಿಗೆ ಪಡೆದುಕೊಂಡಿದ್ದಾರೆ" ಎಂದು ಗಂಭೀರವಾಗಿ ಆರೋಪಿಸಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಸಸ್ಪೆಂಡ್: ಮಹಿಳೆಯರನ್ನ ಮಂಚಕ್ಕೆ ಕರೆಯುವ ಖಾಕಿ ಕಾಮಕಾಂಡಕ್ಕೆ ಬಿತ್ತು ಬ್ರೇಕ್!
ಬೆಂಗಳೂರಿನ ಕೋರಮಂಗಲ ನಾರ್ತ್ ಇಂಡಿಯಾ, ಎಲೆಕ್ಟ್ರಾನಿಕ್ ಸಿಟಿ ಆಂಧ್ರ, ಸರ್ಜಾಪುರ ಬಿಹಾರ..., ನಿಮ್ ಏರಿಯಾ ಯಾವುದು?