ಗದಗ ಜಿಲ್ಲೆಯ ನರಗುಂದ ತಾಲೂಕಿನ ಜಗಾಪುರ ಗ್ರಾಮದ ಮೃತ ಮಹಿಳೆ ನಿಂಗವ್ವ ಶಿವಪ್ಪ ಹೂಲಿ ಖಾತೆಗೆ ಪ್ರತಿತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗುತ್ತಿದೆ. ಆದರೆ ಗೃಹಲಕ್ಷ್ಮೀ ಹಣ ಪಡೆಯಲು ಮಕ್ಕಳು ಪರದಾಡುತ್ತಿದ್ದಾರೆ.
ಗದಗ (ಫೆ.20): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮಾತುಕೊಟ್ಟಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಅವುಗಳಲ್ಲಿ ಮನೆಯೊಡತಿಗೆ ಮಾಸಿಕ 2 ಸಾವಿರ ರೂಪಾಯಿ ಕೊಡುವ ಗೃಹಲಕ್ಷ್ಮೀ ಯೋಜನೆ ಮುಖ್ಯವಾಗಿದೆ. ಜಾರಿಯಾದಗಿನಿಂದ ಈವರೆಗೂ ತಾಂತ್ರಿಕ ಸಮಸ್ಯೆಯಿಂದಾಗಿ ಲಕ್ಷಾಂತರ ಮಹಿಳೆಯರು ಫಲಾನುಭವಿಯಾಗಲು ಕಚೇರಿಗೆ ಅಲೆದಾಡುತ್ತಿದ್ದಾರೆ. ಎಲ್ಲ ದಾಖಲೆಗಳು ಸರಿಯಿದ್ದು ಕೆಲವರಿಗೆ ಖಾತೆಗೆ ಹಣ ಜಮಾ ಆಗಿಲ್ಲ. ಆದರೆ ಗದಗ ಜಿಲ್ಲೆಯಲ್ಲಿ ನಿಧನ ಹೊಂದಿರುವ ಮಹಿಳೆಯೊಬ್ಬರು ಈ ಯೋಜನೆ ಫಲಾನುಭವಿಯಾಗಿದ್ದಾರೆ. ಗೃಹಲಕ್ಷ್ಮೀ ಯೋಜನೆ ಜಾರಿಗೆ ಮೊದಲೇ ಮೃತಪಟ್ಟಿದ್ದರೂ ಹಣ ಮಾತ್ರ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿರುವುದು ಅಚ್ಚರಿ ಮೂಡಿಸಿದೆ.
ಹೌದು. ಗದಗ ಜಿಲ್ಲೆಯ ನರಗುಂದ ತಾಲೂಕಿನ ಜಗಾಪುರ ಗ್ರಾಮದ ಮೃತ ಮಹಿಳೆ ನಿಂಗವ್ವ ಶಿವಪ್ಪ ಹೂಲಿ ಖಾತೆಗೆ ಪ್ರತಿತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗುತ್ತಿದೆ. ಆದರೆ ಗೃಹಲಕ್ಷ್ಮೀ ಹಣ ಪಡೆಯಲು ಮಕ್ಕಳು ಪರದಾಡುತ್ತಿದ್ದಾರೆ. ಗೃಹ ಲಕ್ಷಿ ಯೋಜನೆ ಜಾರಿಗೆ ಮುನ್ನವೇ 2020ರ ಆಗಸ್ಟ್ 26ರಂದು ಮೃತಪಟ್ಟಿದ್ದ ನಿಂಗವ್ವ. ಸರ್ಕಾರ ಮನೆಯೊಡತಿ ಮಾತ್ರ ಹಣ ಸಿಗುತ್ತದೆ ಎಂದಿದ್ದರಿಂದ ನಿಂಗವ್ವ ಸೊಸೆ ಅತ್ತೆ ಮೃತಪಟ್ಟಿದ್ದರೂ ಆಕೆ ದಾಖಲೆಗಳನ್ನು ತೆಗೆದುಕೊಂಡು ಆನ್‌ಲೈನ್ ಮೂಲಕ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ್ದಳು.
undefined
ಆನ್‌ಲೈನ್ ಅರ್ಜಿ ಸಲ್ಲಿಕೆಯಾಗಿ ಪ್ರತಿ ತಿಂಗಳು ಮೃತ ನಿಂಗವ್ವಳ ಖಾತೆಗೆ ಹಣ ಜಮೆ ಆಗುತ್ತಿದೆ. ಇದೀಗ ಅತ್ತೆಯ ಖಾತೆ ಬದಲಿಸಿ ಸೊಸೆ ಖಾತೆಗೆ ಹಣ ಜಮಾ ಮಾಡುವಂತೆ ಕುಟುಂಬ ಕಚೇರಿಗೆ ಅಲೆದಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ ಮೃತಪಟ್ಟಿರುವ ಅತ್ತೆ ನಿಂಗವ್ವಳ ಖಾತೆಗೆ ಹಣ ಜಮೆಯಾಗುತ್ತಿದೆ. ನರಗುಂದ ತಾಲೂಕಿನಲ್ಲಿ ಇಂಥ 7-8 ಪ್ರಕರಣ ಬೆಳಕಿಗೆ ಬಂದಿವೆ. ಒಟ್ಟಿನಲ್ಲಿ ಬದುಕಿರುವ ಎಷ್ಟೋ ಬಡ ಮಹಿಳೆಯರಿಗೆ ತಾಂತ್ರಿಕ ಸಮಸ್ಯೆಯಿಂದ ಇನ್ನೂವರೆಗೆ ಗೃಹಲಕ್ಷ್ಮೀ ಹಣ ತಲುಪುತ್ತಿಲ್ಲ ಎಂದು ಪರದಾಡುತ್ತಿದ್ದಾರೆ, ಗೃಹಲಕ್ಷ್ಮೀ ಯೋಜನೆಗೆ ಮೊದಲೇ ಮೃತಪಟ್ಟಿದ್ದರೂ ಬ್ಯಾಂಕ್ ಖಾತೆಗೆ ಪ್ರತಿತಿಂಗಳ ಹಣ ಬರುತ್ತಿದೆ. ಆದರೂ ಕುಟುಂಬಸ್ಥರಿಗೆ ಪಡೆಯಲು ಪರದಾಡುವಂತಾಗಿದೆ.