
ಬೆಳಗಾವಿ(ಡಿ.19): ರಾಜ್ಯ ಸರ್ಕಾರದ 'ಗೃಹಲಕ್ಷ್ಮೀ' ಯೋಜನೆಯ ಎರಡು ತಿಂಗಳ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲಾ ಬಿಜೆಪಿ ಮಹಿಳಾ ಘಟಕ ಇಂದು ಬೃಹತ್ ಪ್ರತಿಭಟನೆ ನಡೆಸಿತು. ನಗರದ ಪ್ರಮುಖ ಕೇಂದ್ರವಾದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ನೂರಾರು ಮಹಿಳಾ ಕಾರ್ಯಕರ್ತೆಯರು, ಸರ್ಕಾರದ ವಿಳಂಬ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ಹೊರಹಾಕಿದರು.
ಪ್ರತಿಭಟನಾಕಾರರು ಹಿಡಿದಿದ್ದ ಭಿತ್ತಿಪತ್ರಗಳು ಸಾರ್ವಜನಿಕರ ಗಮನ ಸೆಳೆದವು. 'ಅಕ್ಕಾ ಅಕ್ಕಾ ಎಲ್ಲಿದೆ ರೊಕ್ಕಾ?, 'ಗೃಹಿಣಿಯರ ರೊಕ್ಕ.. ಅಕ್ಕ ತಿಂದಿದ್ದು ಪಕ್ಕಾ.., 'ಹೆಣ್ಣುಮಕ್ಕಳ ರೊಕ್ಕ.. ಕಾಂಗ್ರೆಸ್ ಮಂತ್ರಿ ಜಾತ್ರೆ, 'ಯಾರದೋ ರೊಕ್ಕ ಲಕ್ಷ್ಮೀ ಅಕ್ಕಾನ ಜಾತ್ರೆ' ಎಂಬ ತೀಕ್ಷ್ಣ ಬರಹಗಳ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ನೇರ ವಾಗ್ದಾಳಿ ನಡೆಸಲಾಯಿತು. ಗೃಹಲಕ್ಷ್ಮೀ ಹಣ ಮಹಿಳೆಯರ ಕೈ ಸೇರುವ ಬದಲು ಸರ್ಕಾರದ ಪ್ರಚಾರಕ್ಕೆ ಬಳಕೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸದನದಲ್ಲಿ ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣದ ಬಗ್ಗೆ ತಪ್ಪು ಮಾಹಿತಿ, ಬೇಜವಾಬ್ದಾರಿತನದ ಮಾತುಗಳನ್ನಾಡಿದ್ದಾರೆ. ರಾಜ್ಯದ ಮಹಿಳೆಯರಿಗೆ ಬರಬೇಕಾದ ಎರಡು ತಿಂಗಳ ಹಣ ಎಲ್ಲಿ ಹೋಯಿತು ಎಂಬುದಕ್ಕೆ ಅವರು ಸರಿಯಾದ ಲೆಕ್ಕ ಕೊಡಬೇಕು. ತಮ್ಮ ಇಲಾಖೆಯ ಮೇಲೆ ಅವರಿಗೆ ಹಿಡಿತವಿಲ್ಲದಿದ್ದರೆ ಅಥವಾ ಮಾಹಿತಿ ಇಲ್ಲದಿದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಬೃಹತ್ ಹೋರಾಟದ ಎಚ್ಚರಿಕೆ ನೀಡಿದ ಮಹಿಳಾ ಘಟಕ
ಬಾಕಿ ಇರುವ ಗೃಹಲಕ್ಷ್ಮೀ ಹಣವನ್ನು ಕೂಡಲೇ ಮಹಿಳೆಯರ ಖಾತೆಗೆ ಜಮಾ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಜಿಲ್ಲಾದ್ಯಂತ ಹಾಗೂ ರಾಜ್ಯಾದ್ಯಂತ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಮಹಿಳಾ ಘಟಕದ ನಾಯಕಿಯರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ