Haveri: 2ನೇ ದಿನದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭರ್ಜರಿ ಉತ್ಸಾಹ

Published : Jan 08, 2023, 11:33 AM IST
Haveri: 2ನೇ ದಿನದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭರ್ಜರಿ ಉತ್ಸಾಹ

ಸಾರಾಂಶ

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನ ಹೆಚ್ಚುಕಮ್ಮಿ ಎರಡು ಲಕ್ಷ ಜನ ಸಾಹಿತ್ಯ ಪ್ರೀತಿಯಿಂದ ಏಲಕ್ಕಿ ನಾಡಿನ ಕನ್ನಡದಂಗಳದಲ್ಲಿ ನೆರೆದಿದ್ದರು.

ಮಹಾಬಲ ಸೀತಾಳಭಾವಿ

ಹಾವೇರಿ (ಜ.08): 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನ ಹೆಚ್ಚುಕಮ್ಮಿ ಎರಡು ಲಕ್ಷ ಜನ ಸಾಹಿತ್ಯ ಪ್ರೀತಿಯಿಂದ ಏಲಕ್ಕಿ ನಾಡಿನ ಕನ್ನಡದಂಗಳದಲ್ಲಿ ನೆರೆದಿದ್ದರು. ಮೊದಲ ದಿನದ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಂಡು ಆಯೋಜಕರು ಎರಡನೇ ದಿನದ ವ್ಯವಸ್ಥೆಯನ್ನು ಇನ್ನಷ್ಟು ಅಚ್ಚುಕಟ್ಟಾಗಿಸಿದ್ದರು. ಹೀಗಾಗಿ ಉದ್ಘಾಟನೆಯ ದಿನಕ್ಕಿಂತ ಮರುದಿನದ ಸಮ್ಮೇಳನದಲ್ಲಿ ಕನ್ನಡಿಗರ ಜೋಶ್‌ ಜೋರಿತ್ತು.

ಕಪ್ಪು ಮಣ್ಣಿನ ಹಾವೇರಿಯ ಜೋಳದ ಗದ್ದೆ ಬಯಲಿನಲ್ಲಿ ಆಯೋಜಿಸಿದ ಸಮ್ಮೇಳನದಲ್ಲಿ ಎಲ್ಲೆಲ್ಲೂ ಧೂಳು ತುಂಬಿರುತ್ತದೆಯೆಂಬ ನಿರೀಕ್ಷೆ ಹುಸಿಯಾಗಿತ್ತು. ಯುವ ಜಿಲ್ಲಾಧಿಕಾರಿ ಸಂಜಯ್‌ ಶೆಟ್ಟಣ್ಣವರ್‌ ಮೊದಲೇ ಯೋಚಿಸಿ ಇಡೀ ಸಮ್ಮೇಳನದ ಅಂಗಳದ 182 ಎಕರೆ ಜಾಗದಲ್ಲಿ ಶೇಡ್‌ನೆಟ್‌ನ ಹೊದಿಕೆ ಹೊದೆಸಿದ್ದರು. ಅಲ್ಲಲ್ಲಿ ತೆರೆದ ಅಲ್ಪ ಸ್ವಲ್ಪ ಜಾಗಕ್ಕೂ ಪದೇಪದೇ ನೀರು ಸಿಂಪಡಿಸುವ ಮೂಲಕ ಎಲ್ಲೂ ಧೂಳು ಏಳದಂತೆ ವ್ಯವಸ್ಥೆ ಮಾಡಿದ್ದರು. ಹೀಗಾಗಿ ಪ್ರತಿ ಬಾರಿ ಎಲ್ಲ ಊರಿನ ಸಾಹಿತ್ಯ ಸಮ್ಮೇಳನದಲ್ಲೂ ಎದುರಾಗುವ ಧೂಳಿನ ದೊಡ್ಡ ಸಮಸ್ಯೆ ಹಾವೇರಿಯಲ್ಲಿ ಇರಲಿಲ್ಲ. ಪರಿಣಾಮ, ಜನರು ನೆಮ್ಮದಿಯಿಂದ ಓಡಾಡುವಂತಾಯಿತು.

Kannada Sahitya Sammelana: ಮುಂದಿನ ಸಾಹಿತ್ಯ ಸಮ್ಮೇಳನ ಆತಿಥ್ಯಕ್ಕೆ ‘ಚಿನ್ನ’ದಂಥ ಪೈಪೋಟಿ!

ಎರಡನೇ ದಿನ ಶನಿವಾರ ವೀಕೆಂಡ್‌ ಆಗಿದ್ದರಿಂದ ಸುತ್ತಮುತ್ತಲ ಊರುಗಳಿಂದ ಖಾಸಗಿ ನೌಕರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಹಳ್ಳಿಗಳ ಜನರೂ ದೊಡ್ಡ ಸಂಖ್ಯೆಯಲ್ಲಿ ಸಮ್ಮೇಳನ ನೋಡಲು ಆಗಮಿಸಿದ್ದರು. ಹೀಗಾಗಿ ಪುಸ್ತಕ ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಕಾಲು ಹಾಕಲು ಜಾಗವಿರಲಿಲ್ಲ. ವ್ಯಾಪಾರ ಕೂಡ ಜೋರಾಗಿತ್ತು. ಐವತ್ತು ಸಾವಿರ ಜನರಿಗೆ ಬೆಳಗಿನ ಉಪಾಹಾರ ಹಾಗೂ ಒಂದೂವರೆ ಲಕ್ಷ ಜನರಿಗೆ ಮಧ್ಯಾಹ್ನದ ಊಟ ಅಚ್ಚುಕಟ್ಟಾಗಿ ನಡೆಯಿತು. ಆಯೋಜಕರ ನಿರೀಕ್ಷೆಗೂ ಮೀರಿ ಜನ ಬಂದಿದ್ದರು.

ಗೋಷ್ಠಿಗಳು ಡಲ್‌: ಎರಡನೇ ದಿನ ಡಲ್‌ ಹೊಡೆದಿದ್ದು ವಿಚಾರ ಗೋಷ್ಠಿಗಳು. ಮೂರು ವೇದಿಕೆಗಳಲ್ಲಿ ಬರೋಬ್ಬರಿ 16 ವಿಚಾರ ಗೋಷ್ಠಿಗಳು ನಡೆದವು. ಆದರೆ ಪ್ರೇಕ್ಷಕರು ಸಾಕಷ್ಟಿರಲಿಲ್ಲ. ಹೆಚ್ಚಿನ ಜನ ಭಾಷಣ ಬಿಟ್ಟು ಹೊರಗೆ ಓಡಾಡಿ ಸಮ್ಮೇಳನದ ಇತರ ಸಂಗತಿಗಳನ್ನು ಕಣ್ತುಂಬಿಕೊಳ್ಳುವಲ್ಲಿ ನಿರತರಾಗಿದ್ದರು. ಹಿರಿಯ ಸಾಹಿತಿ ಎಸ್‌.ಎಲ್‌.ಭೈರಪ್ಪ ಸೇರಿ ಅನೇಕರು ಗೋಷ್ಠಿಗಳಿಗೆ ಗೈರಾಗಿದ್ದರು. ಭೈರಪ್ಪ ಅವರ ಭಾಷಣ ಕೇಳುವ ನಿರೀಕ್ಷೆಯಲ್ಲಿ ಬಂದವರಿಗೆ ನಿರಾಸೆಯಾಯಿತು. 

ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರಿದ್ದರು. ವಯೋವೃದ್ಧ ಸರ್ವಾಧ್ಯಕ್ಷ ಡಾ.ದೊಡ್ಡರಂಗೇಗೌಡರು ದಣಿದಿದ್ದರು. ಆದರೂ ಪ್ರಧಾನ ವೇದಿಕೆಯ ಎಲ್ಲ ವಿಚಾರ ಗೋಷ್ಠಿಗಳಲ್ಲಿ ಖುದ್ದಾಗಿ ಭಾಗವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಶಿ ರೇಷ್ಮೆ ಶರ್ಟ್‌, ಪಂಚೆಯುಟ್ಟು ಮೊದಲ ದಿನದಷ್ಟೇ ಉತ್ಸಾಹದಲ್ಲಿ ಎಲ್ಲೆಡೆ ಓಡಾಡುತ್ತಿದ್ದರು. ಮೋಡ ಕವಿದ ವಾತಾವರಣ ಇದ್ದುದರಿಂದ ಜನ ಬಿಸಿಲಿನ ಝಳವಿಲ್ಲದೆ ಹಾಯಾಗಿ ಎಲ್ಲೆಡೆ ಸುತ್ತಾಡಿದರು. ಸೆಕೆ ಕೂಡ ಹೆಚ್ಚಿರಲಿಲ್ಲ.

Kannada Sahitya Sammelana: ಸರ್ಕಾರಗಳಿಂದ ಕನ್ನಡದ ಬಗ್ಗೆ ನಿರ್ಲಕ್ಷ್ಯ: ದೊಡ್ಡರಂಗೇಗೌಡ

ನಾನು ಕಸಾಪ ಅಧ್ಯಕ್ಷ ಎಂದು ಈ ಮಾತು ಹೇಳುತ್ತಿಲ್ಲ. ನಾನು ಈವರೆಗೆ ಭಾಗವಹಿಸಿದ ಸಾಹಿತ್ಯ ಸಮ್ಮೇಳನಗಳಲ್ಲೇ ಈ ಬಾರಿಯ ಸಮ್ಮೇಳನ ಹೆಚ್ಚು ಅಚ್ಚುಕಟ್ಟಾಗಿದೆ. ನಾನೇ ಖುದ್ದಾಗಿ ಎಲ್ಲಾ ವಿಭಾಗಗಳ ಮೇಲ್ವಿಚಾರಣೆ ಮಾಡಿದ್ದೇನೆ. ನಮ್ಮ ನಿರೀಕ್ಷೆಗೂ ಮೀರಿ ಜನ ಬಂದಿದ್ದಾರೆ. ಹೀಗಾಗಿ ಸಣ್ಣಪುಟ್ಟಅಡಚಣೆಗಳು ಸಹಜ. ಇಷ್ಟಾಗಿಯೂ ಏನಾದರೂ ಸಮಸ್ಯೆಗಳಾಗಿದ್ದರೆ ನನ್ನ ಗಮನಕ್ಕೆ ತನ್ನಿ. ಮುಂದಿನ ಸಮ್ಮೇಳನದಲ್ಲಿ ತಿದ್ದಿಕೊಳ್ಳುತ್ತವೆ.
- ಮಹೇಶ್‌ ಜೋಶಿ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ
Karnataka News Live: ಪುರುಷರಿಗಿಲ್ಲದ ಕಟ್ಟುಪಾಡು ನಮಗೇಕೆ? - ಮಲೈಕಾ