28000 ಗ್ರಾಮಗಳಿಗೆ ಸ್ಮಶಾನ ಜಾಗ; ಇನ್ನೂ 319 ಊರಿಗೆ ಬಾಕಿ: ಹೈಕೋರ್ಟ್‌ಗೆ ಮಾಹಿತಿ ನೀಡಿದ ಸರ್ಕಾರ

By Kannadaprabha NewsFirst Published Jan 10, 2023, 11:51 PM IST
Highlights

ರಾಜ್ಯದ ಒಟ್ಟು 28,222 ಗ್ರಾಮಗಳಲ್ಲಿ ಪೈಕಿ ಈವರೆಗೆ 27,903 ಗ್ರಾಮಗಳಿಗೆ ಸ್ಮಶಾನ ಜಾಗ ಒದಗಿಸಲಾಗಿದ್ದು, ಉಳಿದ 319 ಗ್ರಾಮಗಳಿಗೆ ಮಾತ್ರ ಸ್ಮಶಾನ ಜಾಗ ಕಲ್ಪಿಸಬೇಕಿದೆ ಎಂದು ಹೈಕೋರ್ಟ್ ಗೆ ಸರ್ಕಾರ ತಿಳಿಸಿದೆ.

ಬೆಂಗಳೂರು (ಜ.11) : ರಾಜ್ಯದ ಒಟ್ಟು 28,222 ಗ್ರಾಮಗಳಲ್ಲಿ ಪೈಕಿ ಈವರೆಗೆ 27,903 ಗ್ರಾಮಗಳಿಗೆ ಸ್ಮಶಾನ ಜಾಗ ಒದಗಿಸಲಾಗಿದ್ದು, ಉಳಿದ 319 ಗ್ರಾಮಗಳಿಗೆ ಮಾತ್ರ ಸ್ಮಶಾನ ಜಾಗ ಕಲ್ಪಿಸಬೇಕಿದೆ ಎಂದು ಹೈಕೋರ್ಟ್ ಗೆ ಸರ್ಕಾರ ತಿಳಿಸಿದೆ. ನ್ಯಾಯಾಲಯದ ಆದೇಶಿಸಿದ್ದರೂ ರಾಜ್ಯದಲ್ಲಿ ಸ್ಮಶಾನವಿಲ್ಲದ ಗ್ರಾಮಗಳಿಗೆ ಜಮೀನು ಮಂಜೂರು ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಮೊಹಮ್ಮದ್‌ ಇಕ್ಬಾಲ್‌ ಸಲ್ಲಿಸಿರುವ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿ, ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ನಾನು ಹುಬ್ಬಳ್ಳಿ ಹುಡುಗ- ದೊಡ್ಡವರು ತಿದ್ದಿ ಹೇಳಬೇಕು: ಭಾಷಣದ ವೇಳೆ ಸಿಎಂ ಬೊಮ್ಮಾಯಿ ಭಾವುಕ

ವಿಚಾರಣೆ ವೇಳೆ ಸರ್ಕಾರಿ ವಕೀಲರು ಹಾಜರಾಗಿ, ಕಂದಾಯ ಇಲಾಖೆಯ ಕಾರ್ಯದರ್ಶಿ ಎನ್‌. ಜಯರಾಮ್‌ ಅವರ ಸಲ್ಲಿಸಿದ ಪ್ರಮಾಣಪತ್ರವನ್ನು ನ್ಯಾಯಪೀಠಕ್ಕೆ ಒದಗಿಸಿದರು.

ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಒದಗಿಸಿರುವ ಮಾಹಿತಿಯಂತೆ ಒಟ್ಟು 28,222 ಗ್ರಾಮಗಳಲ್ಲಿ ಈವರೆಗೆ 27,903 ಗ್ರಾಮಗಳಿಗೆ ಸ್ಮಶಾನ ಜಾಗ ಒದಗಿಸಲಾಗಿದೆ. ಇನ್ನೂ 319 ಗ್ರಾಮಗಳಿಗೆ ಮಾತ್ರ ಸ್ಮಶಾನ ಜಾಗ ಒದಗಿಸಬೇಕಾಗಿದೆ. 56 ಗ್ರಾಮಗಳಲ್ಲಿ ಸ್ಮಶಾನ ಜಾಗ ಒತ್ತುವರಿಯಾಗಿದೆ. 319 ಗ್ರಾಮಗಳಿಗೆ ಸ್ಮಶಾನ ಜಾಗ ಒದಗಿಸುವ ಹಾಗೂ 56 ಗ್ರಾಮಗಳಲ್ಲಿ ಒತ್ತುವರಿ ತೆರವುಗೊಳಿಸುವ ಕುರಿತು ನ್ಯಾಯಾಲಯಕ್ಕೆ ಸಮಗ್ರ ವರದಿ ಸಲ್ಲಿಸಲು 30 ದಿನ ಕಾಲಾವಕಾಶಬೇಕು ಎಂದು ಪ್ರಮಾಣಪತ್ರದಲ್ಲಿ ಕೋರಲಾಗಿತ್ತು. ಈ ಪ್ರಮಾಣ ಪತ್ರವನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆ ಮುಂದೂಡಿತು.

ರಾಜ್ಯದ ನೇಕಾರರಿಗೆ ಸಿಹಿಸುದ್ದಿ: ನಾಳೆ ಬ್ಯಾಂಕ್‌ ಖಾತೆಗೆ 5 ಸಾವಿರ ರೂ. ಹಾಕುವ ಸರ್ಕಾರ

ಇಂದು ಸ್ಮಶಾನ ಕಾರ್ಮಿಕರ ಜತೆ ಸಿಎಂ ಉಪಾಹಾರ

ಕಳೆದ ನಾಲ್ಕು ತಿಂಗಳ ಹಿಂದೆ ಪೌರಕಾರ್ಮಿಕರ ಜತೆ ಉಪಾಹಾರ ಸೇವಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಬುಧವಾರ ಸ್ಮಶಾನ ಕಾರ್ಮಿಕರ ಜತೆ ಉಪಾಹಾರ ಸೇವನೆ ಮಾಡಲಿದ್ದಾರೆ. ಬುಧವಾರ ಬೆಳಗ್ಗೆ ರೇಸ್‌ಕೋರ್ಸ್‌ ರಸ್ತೆಯಲ್ಲಿನ ನಿವಾಸದಲ್ಲಿ ಸ್ಮಶಾನ ಕಾರ್ಮಿಕರ ಜತೆ ಸ್ಮಶಾನ ಕಾರ್ಮಿಕರ ಜತೆ ಉಪಹಾರ ಮಾಡಲಿದ್ದಾರೆ. ಈ ಮೂಲಕ ಪೌರಕಾರ್ಮಿಕರಂತೆ ಸ್ಮಶಾನ ಕಾರ್ಮಿಕರನ್ನು ಓಲೈಕೆ ಮಾಡಲು ಮುಂದಾಗಿದ್ದಾರೆ. ಸ್ಮಶಾನ ಕಾರ್ಮಿಕರ ಜತೆ ಉಪಾಹಾರ ಸೇವನೆ ವೇಳೆ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಅವರಿಗಾಗಿ ವಿಶೇಷ ಪ್ಯಾಕೇಜ್‌ ಘೋಷಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

click me!